Advertisement

ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆವಿಳಂಬಕ್ಕೆ ಕುತಂತ್ರ ಕಾರಣ: ದಸ್ತಿ

11:16 AM Nov 18, 2018 | Team Udayavani |

ಕಲಬುರಗಿ: ನಗರದ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆ ವಿಳಂಬಕ್ಕೆ ರಾಜ್ಯದ ರಾಜಕೀಯ ಇಚ್ಚಾಶಕ್ತಿ ಕೊರತೆ ಮತ್ತು ಮುಂಬೈ ವಲಯ ಹಾಗೂ ಸೊಲ್ಲಾಪುರ ವಿಭಾಗದ ಅಧಿಕಾರಿಗಳ ಕುತಂತ್ರವೇ ಕಾರಣವಾಗಿದೆ ಎಂದು ಹೈ.ಕ ಜನಪರ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ
ದೂರಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆಗೆ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ. ಜಸ್ಟೀಸ್‌ ಎಚ್‌.ಸಿ.ಸರೀನ್‌ ಸಮಿತಿ ವರದಿಯಂತೆ ಹಲವು ದಿನಗಳ ಹಿಂದೆಯೇ ರೇಲ್ವೆ ವಿಭಾಗೀಯ ಕೇಂದ್ರ ಅಸ್ತಿತ್ವಕ್ಕೆ ಬರಬೇಕಾಗಿತ್ತು ಎಂದರು.

ಹೈ.ಕ ಭಾಗದ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳು ಸಿಕಂದ್ರಾಬಾದ್‌, ಮುಂಬೈ ಮತ್ತು ಹುಬ್ಬಳ್ಳಿ ವಲಯಗಳಲ್ಲಿ ಹರಿದು ಹಂಚಿ ಹೋಗಿವೆ. ಬಹುತೇಕ ರೈಲ್ವೆ ಮಾರ್ಗಗಳು ದಕ್ಷಿಣ ಮಧ್ಯ ಮತ್ತು ಕೇಂದ್ರ ರೈಲ್ವೆ ವಲಯ ವ್ಯಾಪ್ತಿಗೆ ಒಳಪಟ್ಟಿದ್ದು, 823 ಕಿ.ಮೀ ರೈಲ್ವೆ ಸಂಚಾರ ಇದೆ. ಈ ಭಾಗದಿಂದ ಪ್ರತಿ ವರ್ಷ ಸುಮಾರು 1,800 ರಿಂದ ಎರಡು ಸಾವಿರ ಕೋಟಿ ರೂ. ಆದಾಯ ಸೊಲ್ಲಾಪುರ ವಿಭಾಗಕ್ಕೆ
ಸಂದಾಯವಾಗುತ್ತಿದೆ. ಇದರಿಂದ ಕಲಬುರಗಿ ರೈಲ್ವೆ ವಿಭಾಗದ ಸ್ಥಾಪನೆಯಾದಲ್ಲಿ ಆದಾಯ ನಿಂತು ಹೋಗುತ್ತದೆ ಎನ್ನುವ ಆತಂಕ ಅಲ್ಲಿನ ಅಧಿಕಾರಿಗಳಲ್ಲಿ ಕಾಡುತ್ತಿದೆ. ಹೀಗಾಗಿ ಕಲಬುರಗಿ ರೈಲ್ವೆ ವಿಭಾಗದ ಸ್ಥಾಪನೆಗೆ ಕುತಂತ್ರ ನಡೆಸಿ, ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಜತೆಗೆ ರಾಜ್ಯದಲ್ಲಿ 17 ಜನ ಬಿಜೆಪಿಯ ಸಂಸದರಿದ್ದರೂ ಹೈ. ಕ ಪ್ರದೇಶಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಇದರ ಪರಿಣಾಮವಾಗಿ ಎಚ್‌.ಸಿ.ಸರೀನ್‌ ಸಮಿತಿ ವರದಿ ಗಾಳಿಗೆ ತೂರಿ ಕಲಬುರಗಿ ವಿಭಾಗೀಯ ಕಚೇರಿ ಸ್ಥಾಪನೆಯಾಗದಂತೆ ನಿರ್ಲಕ್ಷ ವಹಿಸಲಾಗುತ್ತಿದೆ. 25 ವರ್ಷಗಳ ಹಿಂದೆ ಮಂಜೂರಾದ ಕಲಬುರಗಿ-ಸೊಲ್ಲಾಪುರ ದ್ವಿಪಥ ಮಾರ್ಗ ಇದುವರೆಗೂ ಪೂರ್ಣಗೊಂಡಿಲ್ಲ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ರೈಲು ಸಂಚಾರ ಆರಂಭಿಸದೇ ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬಹು ಬೇಡಿಕೆಯ ಬೀದರ ಹೊಸ ಮಾರ್ಗವಾದ ನಂತರ ಬೀದರ-ಕಲಬುರಗಿ ಮಾರ್ಗವಾಗಿ ಬೆಂಗಳೂರು, ಬಳ್ಳಾರಿ, ರಾಯಚೂರು ಮತ್ತು ಕಲಬುರಗಿ-ಬೀದರ ಮಾರ್ಗದಿಂದ ದೆಹಲಿಗೆ ತೆರಳಲು ಹೊಸ ರೈಲು ಆರಂಭಿಸಿಲ್ಲ. ಈ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ಸಂಸದರು ವಿಫಲರಾಗಿದ್ದಾರೆ. ಸಂಸದ ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಮಂಜೂರಾತಿ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಮೂಲಸೌಕರ್ಯ ಹೊಂದಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ. ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆ ಬಗ್ಗೆ ರಾಜ್ಯದ ಸಂಸದರು ಧ್ವನಿ ಎತ್ತದಿದ್ದರೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

Advertisement

ಹೈ.ಕ ಭಾಗಕ್ಕೆ ಅನ್ಯಾಯವಾಗದಂತೆ ತಡೆಯಲು ಎಲ್ಲ ರಾಜಕೀಯ ಪಕ್ಷಗಳ ನಾಯಕರು ಪಕ್ಷಾತೀತವಾಗಿ ಹೋರಾಟ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಡಿಸೆಂಬರ್‌ ಮೊದಲ ವಾರದಲ್ಲಿ ಪ್ರಮುಖರ ಸಭೆ ನಡೆಸಿ ರೈಲ್ವೆ ಕ್ಷೇತ್ರದಲ್ಲಿ ತಾರತಮ್ಯ ಧೋರಣೆ ಖಂಡಿಸಿ ಬಿಸಿ ಮುಟ್ಟಿಸಲು ನಿರಂತರ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗುವುದು ಎಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮನಿಷ್‌ ಜಾಜು, ಸುನೀಲ ಕುಲಕರ್ಣಿ, ಆನಂದ ದೇಶಪಾಂಡೆ, ಡಾ| ಮಾಜಿದ ದಾಗಿ, ಶಿವಲಿಂಗಪ್ಪ ಬಂಡಕ, ಅಸ್ಲಾಂ ಚೌಂಗೆ, ವಿಶಾಲ ದೇವ ಧನೇಕರ ಮುಂತಾದವರು ಇದ್ದರು. 

ರಾಜ್ಯದ ಜನಪ್ರತಿನಿಧಿಗಳು ಧ್ವನಿ ಎತ್ತಲು ಆಗ್ರಹ
ರೈಲ್ವೆ ಕ್ಷೇತ್ರದಲ್ಲಿ ಅಭಿವೃದ್ಧಿ ವಿಷಯದಲ್ಲಿ ಹೈ.ಕ ಭಾಗಕ್ಕೆ ನಿರಂತರವಾಗಿ ತಾರತಮ್ಯ ಧೋರಣೆ ಅನುಸರಿಸಿಕೊಂಡು ಬರಲಾಗುತ್ತಿದೆ. ಅಪಾರ ಸಂಖ್ಯೆಯಲ್ಲಿ ಪ್ರಯಾಣಿಕರು, ಪ್ರವಾಸಿಗರ ಓಡಾಟ, ಕಲಬುರಗಿ ಸೇರಿದಂತೆ ಹೈ.ಕ ಭಾಗದಿಂದ ಪ್ರತಿ ವರ್ಷ ನೂರಾರು ಕೋಟಿ ಕಂದಾಯ ಬರುವಂತೆ ಉದ್ದಮೆಗಳು ಇದ್ದರೂ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಲಕ್ಷé ವಹಿಸಿದ್ದು ಖಂಡನೀಯ. ರೈಲ್ವೆ ಸಚಿವ ಮತ್ತು ಅದರಲ್ಲೂ ಮುಂಬೈ ವಲಯ ಹಾಗೂ ಸೊಲ್ಲಾಪುರ ವಿಭಾಗ ವೈರಿತನ ಸಾಧಿಸುತ್ತಿದೆ. ಕಲಬುರಗಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆ ಅಸ್ತಿತ್ವಕ್ಕೆ ಬಂದರೆ ತನ್ನ ಆದಾಯ ನಿಂತು ಹೋಗುತ್ತದೆ ಎನ್ನುವ ಆತಂಕ ಅಲ್ಲಿನ ಅಧಿಕಾರಿಗಳಿಗಿದೆ. ಆದ್ದರಿಂದ ಹೈ.ಕ ಭಾಗದವಲ್ಲದೇ ರಾಜ್ಯದ ಜನಪ್ರತಿನಿಧಿಗಳು ಧ್ವನಿ ಎತ್ತಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆಗೆ ಒತ್ತಡ ಹೇರಬೇಕು ಎಂದು ಲಕ್ಷ್ಮಣ ದಸ್ತಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next