Advertisement
Related Articles
Advertisement
ಕರ್ನಾಟಕದಲ್ಲಿ ಪ್ರಾದೇಶಿಕವಾಗಿ ಜಾತ್ರೆಗಳ ಸ್ವರೂಪದಲ್ಲಿ ಫರಕಿದೆ. ಮುಖ್ಯವಾಗಿ ಶಕ್ತಿ ಆರಾಧನೆಯ ಜಾತ್ರೆಗಳು, ಭೂತಾರಾಧನೆ ಮತ್ತು ನಾಗಾರಾಧನೆಯ ಜಾತ್ರೆಗಳು, ಮಂಟೇಸ್ವಾಮಿ, ಮಾದೇಶ್ವರ, ಮೈಲಾರಲಿಂಗ, ಜುಂಜಪ್ಪ ಸಿರಿ ಯಲ್ಲಮ್ಮ ಮೊದಲಾದ ಸಾಂಸ್ಕೃತಿಕ ನಾಯಕ- ನಾಯಕಿಯರ ಜಾತ್ರೆಗಳು, ಫಲವಂತಿಕೆಯ ಜಾತ್ರೆಗಳು, ಹನುಮಂತನ ಜಾತ್ರೆಗಳು, ಬುಡಕಟ್ಟು ಸಮುದಾಯಗಳ ಜಾತ್ರೆಗಳು… ಹೀಗೆ ವರ್ಗೀಕರಿಸಬಹುದು.
ಶಕ್ತಿ ಆರಾಧನೆಯ ಹೆಣ್ಣು ದೈವಗಳಾದ ಸಿರಿಸಿಯ ಮಾರಿಕಾಂಬೆ, ಸವದತ್ತಿಯ ಎಲ್ಲಮ್ಮ, ಬಾದಾಮಿಯ ಬನಶಂಕರಿ, ದಂಡಿನಶಿವರದ ಹೊನ್ನಾದೇವಿ, ಹುಲಿಗಿಯ ಹುಲಿಗೆಮ್ಮ, ದಾವಣಗೆರೆಯ ದುಗ್ಗಮ್ಮ, ಬಳ್ಳಾರಿಯ ದುರ್ಗಮ್ಮ, ಕೋಲಾರದ ಕೋಲಾರಮ್ಮ, ಚಳ್ಳಕೆರೆಯ ಚಳ್ಳಕೆರಮ್ಮ… ಹೀಗೆ ಹೆಣ್ಣು ದೈವಗಳ ಪಟ್ಟಿ ಕೂಡ ದೊಡ್ಡದೇ ಇದೆ. ಈ ಜಾತ್ರೆಗಳ ಆಚರಣೆಗಳು ಮಾತೃಸಂಸ್ಕೃತಿಯ ಮೂಲ ಬೇರುಗಳನ್ನು ನೆನಪಿಸುವಂತಿವೆ. ಅಂತೆಯೇ ಕರ್ನಾಟಕದ ಬಹುದೊಡ್ಡ ಶಾಕ್ತ ಪಂಥದ ಆರಾಧನೆಯನ್ನೂ ಇವು ಬಿಂಬಿಸುತ್ತವೆ. ದಕ್ಷಿಣ ಕನ್ನಡದಲ್ಲಿ ನಡೆಯುವ ಸಿರಿ ಜಾತ್ರೆಗಳಲ್ಲಿ ಶೋಭಿತ ಮಹಿಳೆಯರು ಮಾನಸಿಕ ಬಿಡುಗಡೆಯನ್ನು ಪಡೆಯುವಿಕೆ ನಡೆಯುತ್ತದೆ. ಕಲುºರ್ಗಿಯ ಶರಣಬಸವೇಶ್ವರ ಜಾತ್ರೆ, ಮೇಲುಕೋಟೆ, ಯಡಿಯೂರಿನ ಜಾತ್ರೆ, ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ, ಮುದುಗಲ್ಲಿನ ಮೊಹರಂ ಜಾತ್ರೆ, ಕೊಟ್ಟೂರಿನ ಕೊಟ್ಟೂರೇಶ್ವರ ಜಾತ್ರೆ, ನಂಜನಗೂಡಿನ ನಂಜುಂಡೇಶ್ವರ ಜಾತ್ರೆ, ನಾಯಕನಹಟ್ಟಿಯ ತಿಪ್ಪೇಸ್ವಾಮಿ ಜಾತ್ರೆ ಹಲವು ಕಡೆಯ ಒಂದರ ಹಿಂದೊಂದು ಆರಂಭವಾಗುವ ಹನುಮಂತನ ಜಾತ್ರೆಗಳು… ಹೀಗೆ ಪುರುಷ ದೈವಗಳ ಪಟ್ಟಿಯೂ ಪ್ರಾದೇಶಿಕವಾಗಿ ದೊಡ್ಡದಿದೆ.
ವಿಶೇಷವಾಗಿ ಜಾತ್ರೆಗಳಿಗೆ ಎಲ್ಲಕಾಲಕ್ಕೂ ಎಲ್ಲ ಜನರಿಗೂ ಹೊಂದಿಕೊಳ್ಳುವ ರೂಪಾಂತರದ ಗುಣವಿದೆ. ಗ್ರಾಮ ಮತ್ತು ನಗರಗಳ ವೈವಿದ್ಯಮಯ ಜನರನ್ನು ಒಳಗೊಳ್ಳುವ ಹೊಸ ಸೆಳೆತಗಳನ್ನು ಜಾತ್ರೆಗಳು ರೂಢಿಸಿಕೊಳ್ಳುತ್ತಿವೆ. ಹಾಗಾಗಿ ಜಾತ್ರೆಗಳು ಸದಾ ಜನಜಂಗುಳಿಯಿಂದ ಕಿಕ್ಕಿರಿದಿರುತ್ತವೆ. ಎಲ್ಲ ವರ್ಗದ, ಎಲ್ಲ ವಯೋಮಾನದ ಜನರನ್ನು ವರ್ಷ ವರ್ಷವೂ ಸೆಳೆಯುವ ಜಾತ್ರೆಯ ಅಯಸ್ಕಾಂತೀಯ ಗುಣ ಯಾವುದು? ಎನ್ನುವ ಪ್ರಶ್ನೆಯೊಂದು ನಮ್ಮಲ್ಲಿ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ ಹತ್ತಾರು ಸಂಗತಿಗಳು ಎದುರು ನಿಲ್ಲುತ್ತವೆ.
ಎಲ್ಲರ ಬಾಲ್ಯ ಜಾತ್ರೆಗಳ “ರೋಮಾಂಚನ’ದ ಟಚ್ ಇಲ್ಲದೆ ಮುಗಿಯುವುದೇ ಇಲ್ಲ. ಕುತೂಹಲಕ್ಕೆ ಒಂದಷ್ಟು ಆತ್ಮಕಥನಗಳನ್ನು ತಿರುವಿಹಾಕಿದರೆ ಅಲ್ಲೊಂದು ಜಾತ್ರೆಗಳ ದೊಡ್ಡ ಲೋಕವೇ ಕಾಣುತ್ತದೆ. ಇದು ನಮ್ಮ ಒಣವಿವರಗಳ ಸಂಶೋಧನೆಯ ಬರಹಗಳಿಗಿಂತ ಜೀವಂತವಾಗಿರುತ್ತದೆ. ಇಲ್ಲಿ ಸಾಂಸ್ಕೃತಿಕ ಬಹುತ್ವದ ಅಭಿವ್ಯಕ್ತಿಗೆ ಜಾತ್ರೆಯೊಂದು ವೇದಿಕೆಯಾದ ಬಗೆ ಸೂಕ್ಷ್ಮವಾಗಿ ಚಿತ್ರಿಸಲ್ಪಟ್ಟಿದೆ. ಈ ಬಹುತ್ವವವೇ ಬಹುಜನರನ್ನು ಒಂದೆಡೆ ಸೇರಿಸುವ ಕೇಂದ್ರಬಿಂದುವಾಗಿದೆ. ಎಲ್ಲವನ್ನೂ ಮೀರುವ..
ಸಾಂಸ್ಕೃತಿಕ ಗಡಿಗಳನ್ನು ಅಳಿಸುವ ಲಕ್ಷಣವೂ ಜಾತ್ರೆಗಳಿಗಿದೆ. ಜಾತಿ, ಧರ್ಮ,
ಭಾಷೆ, ಲಿಂಗ, ತಾಲೂಕು, ಜಿಲ್ಲೆ, ರಾಜ್ಯ, ದೇಶದ ಗಡಿಗಳನ್ನು ಮೀರುತ್ತವೆ. ಆಯಾ ದೇಶ, ರಾಜ್ಯಗಳ ಗಡಿಭಾಗಗಳ ಜಾತ್ರೆಗಳಲ್ಲಿ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅರಿವಿಗೆ ಬರುತ್ತದೆ. ಬಿಜಾಪುರ ಭಾಗದ ಜಾತ್ರೆಗಳಲ್ಲಿ ಮರಾಠಿಗರು, ಬಳ್ಳಾರಿ ಭಾಗದ ಜಾತ್ರೆಗಳಲ್ಲಿ ಆಂಧ್ರದವರು, ಚಾಮರಾಜನಗರ ಭಾಗದ ಜಾತ್ರೆಗಳಲ್ಲಿ ತಮಿಳರು, ದಕ್ಷಿಣ ಕನ್ನಡದ ಸಿರಿಮೊದಲಾದ ಜಾತ್ರೆಗಳಲ್ಲಿ ಮಲೆಯಾಳಿಗಳು ಹೆಚ್ಚು ಪಾಲ್ಗೊಳ್ಳುವುದನ್ನು ಕಾಣಬಹುದು. ಹೀಗೆ ಜಾತ್ರೆ ಗಡಿಮೀರುವಿಕೆಯನ್ನು ಸದ್ದಿಲ್ಲದೆ ಮಾಡುತ್ತವೆ. ಹಾಗೆಯೇ ಸಾಂಸ್ಕೃತಿಕ ಗಡಿಗಳ ಮೇರೆಗಳನ್ನು ಕೂಡ ಇವು ಅಗಾಧವಾಗಿ ವಿಸ್ತರಿಸುತ್ತವೆ. ಒಂದೊಂದು ಜಾತ್ರೆಯೂ ತನ್ನದೇ ಆದ ಸಾಂಸ್ಕೃತಿಕ ಭೌಗೋಳಿಕ ವ್ಯಾಪ್ತಿಯನ್ನೂ ಹೊಂದಿರುತ್ತದೆ. ಉತ್ತರ ಕರ್ನಾಟಕದ ಮೊಹರಂ ಜಾತ್ರೆಗಳಲ್ಲಿ ಧರ್ಮದ ಗಡಿಮೀರುವಿಕೆ ನಿರಂತರವಾಗಿ ನಡೆಯುತ್ತಿದೆ. ಇದೀಗ “ಗಡಿ’ಗಳನ್ನು ಭದ್ರವಾಗಿ ಕಾಯ್ದುಕೊಳ್ಳುವುದೇ ದೊಡ್ಡ ರೋಗವಾಗಿರುವಾಗ ಇಂತಹ ರೋಗಗಳಿಗೆ ಔಷಧವಾಗಿಯೂ ಜಾತ್ರೆಗಳನ್ನು ನೋಡಬಹುದು. ಜಾತ್ರೆಗಳಿಗೆ ಕಾರಣವಾಗಿದ್ದ ಕೊಡುಕೊಳ್ಳುವಿಕೆ ವ್ಯವಹಾರ ಇಂದು ಮಾರುಕಟ್ಟೆಯ ಪರಿಭಾಷೆಯಲ್ಲಿ ಬದಲಾಗಿದೆ. ಇಲ್ಲಿನ ಕೊಡು-ಕೊಳ್ಳುವಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದ ಜನರಲ್ಲಿ ಕೆಳವರ್ಗದ ಜೊತೆ ದೊಡ್ಡ ಪಾಲು ಮಧ್ಯಮ ವರ್ಗ ಸೇರುತ್ತಿದೆ. ರೈತರ ಕೃಷಿ ಉತ್ಪನ್ನಗಳ ಜೊತೆ ಅಂತರಾಷ್ಟ್ರೀಯ ಮಾರುಕಟ್ಟೆಯ ಸರಕುಗಳೂ ಜಾತ್ರೆಗಳಲ್ಲಿ ಸ್ಥಾನ ಪಡೆಯುತ್ತಿವೆ. ಹೆಚ್ಚು ಜನರನ್ನು ಒಂದೆಡೆ ಸೇರಿಸುವುದು ಕೂಡ ಬಂಡವಾಳವಾಗಿ ರೂಪಾಂತರಗೊಳ್ಳುತ್ತಿರುವ ಈ ಕಾಲದಲ್ಲಿ ಸಾಂಸ್ಕೃತಿಕ ಕಾರಣಕ್ಕಾಗಿ ಸಾವಿರಾರು ಜನರು ಸೇರುವ ಜಾತ್ರೆಗಳೂ ಮಾರುಕಟ್ಟೆ ವಿಸ್ತರಣೆಯ ಆಕರ್ಷಕ ತಾಣಗಳಾಗಿ ಬದಲಾಗಿವೆ. ಪ್ರಾದೇಶಿಕ ವೈಶಿಷ್ಟ್ಯಗಳಾದ ಧಾರವಾಡದ ಪೇಡವೋ, ಕೊಟ್ಟೂರಿನ ಮಿರ್ಚಿಯೋ, ಚನ್ನಪಟ್ಟಣ ಮತ್ತು ಕಿನ್ನಾಳದ ಗೊಂಬೆಗಳ್ಳೋ, ಬನ್ನೂರು ಕುರಿಗಳ್ಳೋ, ಮದ್ದೂರು ವಡೆಗಳ್ಳೋ ಮುಂತಾದ ವೈವಿದ್ಯಮಯ ವಸ್ತುಗಳ ನೇರ ಮಾರಾಟ ಜಾತ್ರೆಗಳಲ್ಲಿರುತ್ತದೆ. ಇದೀಗ ದೊಡ್ಡ ದೊಡ್ಡ ಜಾತ್ರೆಗಳಲ್ಲಿ ವಸ್ತುಪ್ರದರ್ಶನವೊಂದು ಏರ್ಪಡುತ್ತದೆ. ಈ ವಸ್ತು ಪ್ರದರ್ಶನವು ಪರೋಕ್ಷವಾಗಿ ನೇರ ಜಾಹೀರಾತಿನಂತೆಯೇ ಇರುತ್ತದೆ. ಇದರಲ್ಲಿ ಅತ್ಯಾಧುನಿಕ ವಸ್ತು ಸಂಗತಿಗಳು ಮಾರಾಟಕ್ಕೆ ಲಭ್ಯವಾಗುತ್ತವೆ. ಎಲ್ಲಾ ಬಗೆಯ ಕಾರ್ಪೊàರೇಟ್ ಮಲ್ಟಿನ್ಯಾಷನಲ್ ಕಂಪನಿಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ. ಜಾತ್ರೆಗಳಲ್ಲಿ ಪುಸ್ತಕದಂಗಡಿಗಳೂ ಸೇರ್ಪಡೆಗೊಳ್ಳುತ್ತಿವೆ. ಶಿಕ್ಷಿತರ ಪ್ರಮಾಣಕ್ಕೂ ಪುಸ್ತಕದಂಗಡಿಗಳ ಸಂಖ್ಯೆಗೂ ನಂಟಿದೆ. ಇದು ನಗರ ಕೇಂದ್ರಿತ ಪರಿಷೆ ಜಾತ್ರೆಗಳಲ್ಲಿ ಹೆಚ್ಚು ಕಾಣುತ್ತದೆ. ಸರಕಾರ ಆಯೋಜಿಸುವ ಉತ್ಸವಗಳೂ ಈಗೀಗ ಜಾತ್ರೆಗಳ ಸ್ವರೂಪವನ್ನು ಪಡೆಯುತ್ತಿವೆ. ಹಂಪಿ ಉತ್ಸವ, ಒಳಗೊಂಡಂತೆ ಸಂಸ್ಕೃತಿ ಇಲಾಖೆಯು ಆಯೋಜಿಸುವ ವಾರ್ಷಿಕ ಜಿಲ್ಲಾವಾರು ಉತ್ಸವಗಳು ಜಾತ್ರೆಯ ಸ್ವರೂಪವನ್ನು ಪಡೆದಿವೆ. ಈಗೀಗ ಮಹಿಳಾ ಸಂಘಟನೆಗಳ ಉತ್ಪನ್ನಗಳೂ ಜಾತ್ರೆಗಳಲ್ಲಿ ದೊಡ್ಡಮಟ್ಟದಲ್ಲಿ ಪ್ರವೇಶ ಪಡೆಯುತ್ತಿವೆ. ಆಧುನಿಕ ಸಾರಿಗೆಯ ಕ್ರಾಂತಿಯೂ ಜಾತ್ರೆಗಳಲ್ಲಿ ದೊಡ್ಡ ಸಂಖ್ಯೆಯ ಜನರನ್ನು ಒಂದೆಡೆ ತರಲು ಸಹಕಾರಿಯಾಗಿದೆ. ಆಧುನಿಕ ಬದುಕಿನ ರೀತಿ ಹುಟ್ಟಿಸುತ್ತಿರುವ ಏಕಾಂಗಿತನ, ಪುಟ್ಟ ಕುಟುಂಬಗಳ ವ್ಯಕ್ತಿಗತ ಸೀಮಿತ ಬದುಕು, ಏಕರೂಪೀತನದ ಪುನರಪಿ ಜೀವನ, ಯಂತ್ರಗಳೊಟ್ಟಿಗೆ ಹೆಚ್ಚು ಸಮಯ ಕಳೆಯುವ ಕೆಲಸದ ಸ್ವರೂಪ, ಸಾರ್ವಜನಿಕ ಸಂಪರ್ಕವೇ ಇಲ್ಲದ ಉದ್ಯೋಗಗಳು ಈ ಎಲ್ಲಾ ಬಗೆಯ ಆಧುನಿಕ ವಿದ್ಯಮಾನಗಳು ಜನಸಮೂಹಗಳು ಒಟ್ಟಾಗುವ ಜಾತ್ರೆಯಂತಹ ಕೇಂದ್ರಬಿಂದುವಿನೆಡೆಗೆ ತರುತ್ತವೆ. ಇಂತಹ ಕಡೆಗಳಲ್ಲಿ ತಾತ್ಕಾಲಿಕವಾಗಿ ಎಲ್ಲ ಒತ್ತಡಗಳಿಂದಲೂ ಹೊರಬಂದು ಎಲ್ಲವನ್ನೂ ಮರೆತು ಎಲ್ಲರೊಳಗೊಂದಾಗಿ ಬೆರೆಯುಕೆ ಸಾಧ್ಯವಾಗುತ್ತದೆ. ಈ ಬಗೆಯ ಬಿಡುಗಡೆಯ ಅಂಶವು ಪ್ರಭಾವ ಸಂಗತಿಯಾಗಿ ಜಾತ್ರೆಗಳನ್ನು ಮಂಕಾಗದಂತೆ ಕಾಪಾಡಿವೆ. ಹಾಗಾಗಿಯೇ ಈ ಹೊತ್ತಿಗೂ ಜಾತ್ರೆಗಳು ಹೊಸ ಸದಸ್ಯರುಗಳ ಸೇರ್ಪಡೆಯೊಂದಿಗೆ ಜೀವಂತಿಕೆಯನ್ನೂ, ಲವಲವಿಕೆಯನ್ನೂ, ಚಿರಯೌವನದ ಗುಣವನ್ನೂ ಪಡೆದಿವೆ. ಈ ಗುಣವನ್ನು ಬೆಂಗಳೂರಿನಲ್ಲಿ ನಡೆಯುವ ಕಡ್ಲೆಕಾಯಿಪರಿಷೆ ಮುಂತಾದ ನಗರ ಕೇಂದ್ರಿತ ಜಾತ್ರೆಗಳಲ್ಲಿ ಕಾಣಬಹುದು. ಆಧುನಿಕ ಜೀವನ ವಿಧಾನದ ಮುಖ್ಯ ಲಕ್ಷಣವಾದ ಒಂಟಿತನ ಮತ್ತು ಸಮಾಜದ ಜೊತೆ ಹೆಚ್ಚು ಬೆರೆಯುವ ಅವಕಾಶವಿಲ್ಲದೆ ಏಕಾಂಗಿತನವನ್ನು ಅನುಭವಿಸುವವರಿಗೆ ಜಾತ್ರೆಗಳು ಬಿಡುಗಡೆಯ ಸಂಜೀವಿನಿಗಳಾಗಿವೆ. ಜಾತ್ರೆ ಪಂಚಾಂಗ
ಗದಗ ಶಾಬಾದಿಮಠದ ಬುಕ್ ಡಿಪೋದವರು ಪ್ರಕಟಿಸುವ ಕ್ಯಾಲೆಂಡರುಗಳಲ್ಲಿ ವರ್ಷಪೂರ್ತಿ ಜಾತ್ರೆಗಳ ದಿನವ ಪಟ್ಟಿಕೊಟ್ಟಿರುತ್ತಾರೆ. ಒಂದೊಂದು ದಿನವೂ ಹತ್ತಾರು ಜಾತ್ರೆಗಳು ಕಿಕ್ಕಿರಿದಿರುತ್ತದೆ. ಹಳ್ಳಿಗಳಲ್ಲಿ ಈ ಕ್ಯಾಲೆಂಡರ್‌ಗಳನ್ನು ಜಾತ್ರೆಪಂಚಾಂಗ ಎಂತಲೇ ಕರೆಯುತ್ತಿದ್ದರು. ಇದನ್ನು ನೋಡಿದರೆ “ಜಾತ್ರೆ’ ನಡೆಯದ ದಿನವೊಂದು ಕರ್ನಾಟಕದಲ್ಲಿದ್ದಂತೆ ಕಾಣುವುದಿಲ್ಲ. ಏನುಂಟು ಏನಿಲ್ಲ?
ಜಾತ್ರೆ ಮಾರುಕಟ್ಟೆಯ ಮತ್ತೂಂದು ಮುಖ್ಯ ಸೆಳೆತವೆಂದರೆ ಬಹು ಆಯ್ಕೆಯ ಸ್ವಾತಂತ್ರ್ಯ , ಒಂದೇ ವಸ್ತು ಸಂಗತಿಯ ಬಹು ಆಯ್ಕೆಗಳು ಮತ್ತು ಒಂದೇ ವಸ್ತು ಸಂಗತಿಯ ಬಹು ದರಗಳಲ್ಲಿಯೂ ಲಭ್ಯವಾಗುತ್ತವೆ. ಹಾಗಾಗಿ ಎಲ್ಲಾ ವರ್ಗದ ಜನರಿಗೂ ಲಭ್ಯವಾಗುವ ಬೆಲೆಗಳು ಒಂದೇ ಕಡೆ ಸಿಗುತ್ತದೆ. ಅಂತೆಯೇ ಏಕರೂಪಿ ಮನರಂಜನೆಯ ಮಾಧ್ಯಮಗಳಿಗೆ ಬದಲಾಗಿ ಬಹುರೂಪಿ ಮನೋರಂಜನಾ ಮಾಧ್ಯಮಗಳಾದ ನಾಟಕ, ಸರ್ಕಸ್ಸು, ಸಾಹಸ ಕ್ರೀಡೆಗಳು ಮೊದಲಾದವುಗಳು ಜಾತ್ರೆಗಳಲ್ಲಿ ಲಭ್ಯವಾಗುತ್ತಿವೆ. -ಅರುಣ್ ಜೋಳದಕೂಡ್ಲಿಗಿ
ಚಿತ್ರಗಳು-ಪ್ರವರ ಕೊಟ್ಟೂರು