Advertisement

ಹರಿಹರ-ಪಳ್ಳತ್ತಡ್ಕ ಸಂಪರ್ಕ ಸೇತುವೆಯಲ್ಲಿ ಬಿರುಕು!

11:53 PM Jun 27, 2019 | mahesh |

ಸುಬ್ರಹ್ಮಣ್ಯ: ಪ್ರಾಂತವಾರು ವಿಭಜನೆ ಬಳಿಕ 1957 ಮತ್ತು 1962ರಲ್ಲಿ ಕಾಂಗ್ರೆಸ್‌ ಶಾಸಕರಾಗಿ ಮೈಸೂರು ಪ್ರಾಂತಕ್ಕೆ ಆಯ್ಕೆಯಾಗಿ ಪುತ್ತೂರು-ಸುಳ್ಯ ದ್ವಿಸದಸ್ಯ ಕ್ಷೇತ್ರದಲ್ಲಿ 15 ವರ್ಷಗಳ ಕಾಲ ಶಾಸಕರಾಗಿದ್ದ ಕೂಜುಗೋಡು ಕೆ.ವಿ. ಗೌಡ ಅವರ ಅವಧಿಯಲ್ಲಿ ನಿರ್ಮಾಣಗೊಂಡಿರುವ ಬಾಳುಗೋಡು ಭಾಗಕ್ಕೆ ಸಂಪರ್ಕ ಕಲ್ಪಿಸುವ ಹರಿಹರ ಪಳ್ಳತ್ತಡ್ಕ ಸೇತುವೆ ಕುಸಿತದ ಭೀತಿ ಎದುರಿಸುತ್ತಿದೆ.

Advertisement

ಹರಿಹರ ಬಾಳುಗೋಡು ಸಂಪರ್ಕ ರಸ್ತೆಯ ಹರಿಹರ ಮುಖ್ಯ ಪೇಟೆಯಲ್ಲಿ ಈ ಸೇತುವೆಯಿದೆ. ಸೇತುವೆಯ ಅಡಿಭಾಗದ ಪಿಲ್ಲರ್‌ಗಳು ಸವೆದು ಬಿರುಕು ಬಿಟ್ಟಿವೆ. ಸೇತುವೆ ತಳಭಾಗದ ಮೂರು ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಮೇಲ್ಭಾಗದಲ್ಲಿ ನಿಂತು ನೋಡಿದರೆ ಸೇತುವೆ ಸುಧಾರಿತ ಸ್ಥಿತಿಯಲ್ಲಿ ಇದ್ದಂತೆ ಕಂಡುಬಂದರೂ ಅಡಿಭಾಗ ಮಾತ್ರ ಅಪಾಯದ ಸ್ಥಿತಿಯಲ್ಲಿದೆ. ಈ ಸೇತುವೆ ಕುಸಿತವಾದಲ್ಲಿ ಈ ಮಾರ್ಗದಲ್ಲಿ ಸಂಚಾರ ಪೂರ್ಣ ಸ್ಥಗಿತಗೊಳ್ಳುವ ಭೀತಿ ಇದೆ.

ಸುಳ್ಯ ತಾಲೂಕು ಕೇಂದ್ರ ಹಾಗೂ ಜಿಲ್ಲೆಯ ವಿವಿಧೆಡೆಗಳಿಂದ ಈ ಭಾಗಕ್ಕೆ ಸಂಪರ್ಕ ಜೋಡಿಸುವ ರಸ್ತೆಯಿದು. ಈ ಸೇತುವೆ ದಾಟಿ ಈ ಭಾಗದ ಹಲವು ಜನವಸತಿ ಊರುಗಳಿಗೆ ಸಂಚಾರ ಬೆಳೆಸಬೇಕಿದೆ. ಬಾಳುಗೋಡು, ಪದಕ, ಕೂಜುಗೋಡು, ಕೊತ್ನಡ್ಕ ಮಾನ್ಕ, ಮುಂಡಕಜೆ ಕಿರಿಭಾಗ, ಕಲ್ಲೆಮಠ, ಮಿತ್ತಮಜಲು, ಬೆಂಡೋಡಿ, ಪನ್ನೆ ಮೊದಲಾದ ಭಾಗದವರು ಈ ಸೇತುವೆ ಮೇಲೆಯೇ ನಿತ್ಯವೂ ತೆರಳುತ್ತಿರುತ್ತಾರೆ. ಸಾರಿಗೆ ಬಸ್‌ ಸಹಿತ ದಿನವೊಂದಕ್ಕೆ ನೂರಾರು ವಾಹನಗಳು ಸಂಚರಿಸುತ್ತವೆ.

ಜನರಿಗೆ ಭಾರೀ ಸಂಕಷ್ಟ
ಕೃಷಿ ಉತ್ಪನ್ನಗಳ ಮಾರಾಟ, ಖರೀದಿ ಹೀಗೆ ನಿತ್ಯದ ಓಡಾಟಕ್ಕೆ ಈ ಸೇತುವೆ ಸಹಕಾರಿಯಾಗಿದೆ. ಶಾಲಾ ಮಕ್ಕಳು ಹಾಗೂ ನಾಗರಿಕರು ಪಡಿತರ ಇನ್ನಿತರ ಚಟುವಟಿಕೆ ಹಾಗೂ ಮೂಲ ಸೌಕರ್ಯಕ್ಕೆ ಈ ಸೇತುವೆ ಅವಲಂಬಿಸಿ ಸಂಚಾರ ಬೆಳೆಸುತ್ತಾರೆ. ಈ ಸೇತುವೆ ಕುಸಿತವಾಗಿ ಸಂಪರ್ಕ ಕಡಿತವಾದಲ್ಲಿ ಈ ಭಾಗದ ಸಾವಿರಕ್ಕೂ ಅಧಿಕ ಕುಟುಂಬಗಳು ಭಾರೀ ಸಂಕಷ್ಟಕ್ಕೆ ಒಳಗಾಗಲಿವೆ.

ಪಿಲ್ಲರ್‌ಗಳಿಗೆ, ಅಡಿಭಾಗಕ್ಕೆ ಅಪ್ಪಳಿಸಿರುವ ದಿಣ್ಣೆಗಳು!

Advertisement

ಅರ್ಧ ಶತಮಾನಕ್ಕಿಂತಲೂ ಹಳೆಯ ದಾದ ಸೇತುವೆ ಬಹಳಷ್ಟು ವರ್ಷಗಳ ಕಾಲ ಬಾಳಿಕೆ ಬಂದಿದೆ. ಪ್ರತೀ ಮಳೆ ಗಾಲದ ಅವಧಿಯಲ್ಲಿ ಸೇತುವೆ ಕಟ್ಟಲಾದ ಹೊಳೆಯಲ್ಲಿ ಭಾರೀ ನೆರೆ ಹರಿದು ಬರುತ್ತಿದೆ. ಬೃಹತ್‌ ಗಾತ್ರದ ಮರ ಗಳು ನೆರೆ ನೀರಿನಲ್ಲಿ ಕೊಚ್ಚಿಕೊಂಡು ಬಂದು ಸೇತುವೆ ಬುಡಕ್ಕೆ ಅಪ್ಪಳಿಸುತ್ತಿವೆ. ಪರಿಣಾಮ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ಬಾಳುಗೋಡು – ಹರಿಹರ ರಸ್ತೆ ಮಧ್ಯೆ ಇರುವ ಈ ಸೇತುವೆ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ, ಸುಳ್ಯ ತಾಲೂಕು ಕೇಂದ್ರ ಹಾಗೂ ಇತರೆಲ್ಲ ಪ್ರದೇಶಗಳಿಗೆ ಈ ಭಾಗದಿಂದ ಸಂಪರ್ಕಿಸಲು ಇರುವ ಪ್ರಮುಖ ಕೊಂಡಿ ಈ ಸೇತುವೆಯೇ ಆಗಿದೆ.

ಕುಸಿತಕ್ಕೆ ಮುನ್ನ ಎಚ್ಚೆತ್ತುಕೊಳ್ಳಿ

ಪರ್ಯಾಯ ರಸ್ತೆಯಾಗಿ ಐನಕಿದು ಕೋಟೆ, ಕುಡುಮುಂಡೂರು ಬಾಳು ಗೋಡು ಕಚ್ಚಾ ರಸ್ತೆ ಇದೆ. ಅದು ಬಾಳುಗೋಡು ಭಾಗದ ಎಲ್ಲ ಊರುಗಳನ್ನು ತಲುಪಲು ಪ್ರಯೋಜನಕ್ಕೆ ಬರುವುದಿಲ್ಲ. ಹರಿಹರ – ಬಾಳುಗೋಡು ಸಂಪರ್ಕ ರಸ್ತೆಯೇ ಪ್ರಧಾನವಾಗಿದೆ. ಈ ಸೇತುವೆ ಪೂರ್ಣ ಕುಸಿತವಾಗಿ ಸಂಪರ್ಕ ಕಡಿತವಾಗುವ ಮುನ್ನ ದುರಸ್ತಿ ಕಾರ್ಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ.

ವಾರದೊಳಗೆ ಭೇಟಿ

ಶಿಥಿಲ ಸೇತುವೆಯ ಪರಿಶೀಲನೆಗೆ ವಾರದೊಳಗೆ ಸ್ಥಳಕ್ಕೆ ಭೇಟಿ ನೀಡು ತ್ತೇನೆ. ಪರಿಶೀಲನೆ ವೇಳೆ ವಾಸ್ತವ ಸಂಗತಿ ಅರಿತು ಬಳಿಕ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುವೆ.
– ಆಶಾ ತಿಮ್ಮಪ್ಪ,ಜಿ.ಪಂ. ಸದಸ್ಯೆ

••ಬಾಲಕೃಷ್ಣ ಭೀಮಗುಳಿ
Advertisement

Udayavani is now on Telegram. Click here to join our channel and stay updated with the latest news.

Next