ಧಾರವಾಡ: ರಸ್ತೆಯಲ್ಲಿ ಬೈಕ್‌ಗಳ ಕರ್ಕಶ ಶಬ್ದ ಮಾಡುತ್ತ ಹವಾ ಮಾಡಿಕೊಳ್ಳುತ್ತಿದ್ದ ಪುಂಡ ಪೋಕರಿಗಳಿಗೆ ಕೊನೆಗೂ ಅವಳಿ ನಗರ ಟ್ರಾಫಿಕ್ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ನಿಯಮಬಾಹಿರವಾಗಿ ಅಳವಡಿಸಿದ್ದ 110 ಬೈಕ್‌ಗಳನ್ನು ಜಪ್ತಿ ಮಾಡಿಕೊಂಡಿರುವ ಧಾರವಾಡ ಸಂಚಾರ ಪೊಲೀಸರು 6 ಲಕ್ಷ ರೂ. ಮೌಲ್ಯದ ಸೈಲೆನ್ಸರ್‌ಗಳನ್ನು ರಸ್ತೆ ರೋಲರ್ ಕೆಳಗೆ ಹಾಕಿ ನುಜ್ಜುಗೊಳಿಸಿ ನಾಶಪಡಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಬೈಕಾಸುರರನ್ನು ಬಂಧಿಸಿದ ಕಥೆಯನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟರು. ಧಾರವಾಡ ನಗರದಲ್ಲಿ ಕಳೆದ 2 ತಿಂಗಳಿಂದ ವಿಶೇಷ ವಾಹನ ತಪಾಸಣೆ ನಡೆಸಿದ ಸಂಚಾರ ಠಾಣೆ ಪೊಲೀಸರು ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಅಳವಡಿಸಿದ್ದ 110 ಬೈಕ್‌ಗಳನ್ನು ಜಪ್ತಿ ಮಾಡಿದ್ದರು. ನಂತರ ಬೈಕ್ ಮಾಲೀಕರನ್ನು ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಿ ಸೈಲೆನ್ಸರ್ ತೆರವು ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆಟೋದಲ್ಲಿ 6 ಮಕ್ಕಳು ಮಾತ್ರ: ಆಟೋ ರಿಕ್ಷಾಗಳಲ್ಲಿ 6ಕ್ಕಿಂತ ಹೆಚ್ಚು ಶಾಲಾ ಮಕ್ಕಳನ್ನು ಹಾಗೂ ಗೂಡ್ಸ್ ವಾಹನಗಳಲ್ಲಿ ಜನರನ್ನು ಕರೆದುಕೊಂಡು ಹೋಗುವುದು ಕಾನೂನು ಬಾಹಿರ. ನಿಯಮ ಉಲ್ಲಂಘಿಸಿದ 1197 ಆಟೋಗಳು ಹಾಗೂ 1689 ಗೂಡ್ಸ್ ವಾಹನಗಳ ಮಾಲೀಕರ ಮೇಲೆ ಕ್ರಮ ಕೈಗೊಂಡು ದಂಡ ವಸೂಲಿ ಮಾಡಲಾಗಿದೆ. ಇನ್ನು ಮುಂದೆಯೂ ಇದು ಉಲ್ಲಂಘನೆ ಆದಲ್ಲಿ ಸಂಬಂಧಪಟ್ಟ ಚಾಲಕರ ಲೈಸನ್ಸ್ ರದ್ದುಗೊಳಿ ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ನಗರದಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯ. ಇದನ್ನು ಎಲ್ಲರೂ ಪಾಲಿಸಲೇಬೇಕು. ಅದೇ ರೀತಿ ರೈಲ್ವೆ ನಿಲ್ದಾಣ ಸೇರಿದಂತೆ ಇತರೆಡೆ ಪ್ರಿಪೇಡ್ ಆಟೋ ವ್ಯವಸ್ಥೆಯನ್ನು ಸರಿಯಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಯಾಣಿಕರಿಂದ ಬೇಕಾಬಿಟ್ಟಿಯಾಗಿ ಶುಲ್ಕ ವಸೂಲಿ ಮಾಡಲು ಇಲಾಖೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಅವಳಿ ನಗರದಲ್ಲಿ ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವ ಕುರಿತಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರದಿಂದ ಅನುಮೋದನೆ ಸಿಕ್ಕ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು. ವಿವಿಧೆಡೆ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಸಿಗ್ನಲ್ಗಳು ಸುಸ್ಥಿತಿಯಲ್ಲಿಲ್ಲ. ಕಾಮಗಾರಿ ಮುಗಿಯುತ್ತಿದ್ದಂತೆಯೇ ದುರಸ್ತಿಗೊಳಿಸಿ ಅನುಕೂಲ ಮಾಡಿಕೊಡಲಾಗುವುದು ಎಂದು ಆಯುಕ್ತ ನಾಗರಾಜ್ ತಿಳಿಸಿದರು. ಡಿಸಿಪಿ ಶಿವಕುಮಾರ ಗುಣಾರೆ, ಎಸಿಪಿ ಎನ್.ಎಂ. ಸಂದಿಗವಾಡ, ಸಂಚಾರಿ ಠಾಣೆ ಇನ್ಸ್‌ಪೆಕ್ಟರ್ ಮುರುಗೇಶ ಚನ್ನಣ್ಣವರ ಮತ್ತಿತರರು ಇದ್ದರು.