Advertisement

ಶಾಶ್ವತ ನೀರಾವರಿ ಹೋರಾಟ ಆರಂಭಿಸಿದ್ದೇ ಸಿಪಿಎಂ

05:37 PM Mar 28, 2019 | Team Udayavani |
ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಜನ ಸಾಮಾನ್ಯರಲ್ಲಿ ಒಲವು ಇಲ್ಲ. ವಿಶೇಷವಾಗಿ ಮಹಿಳೆಯರು ಕೂಡ ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಸಾಕಷ್ಟು ಅಸಮಾಧಾನಗೊಂಡಿದ್ದಾರೆ. ವೀರಪ್ಪ ಮೊಯ್ಲಿ ಸುಳ್ಳು ಹೇಳಿಕೊಂಡೇ ಹತ್ತು ವರ್ಷ ಈ ಕ್ಷೇತ್ರದ ಸಂಸದರಾಗಿ ಶಾಶ್ವತ ನೀರಾವರಿಯನ್ನು ಕಲ್ಪಿಸದೇ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಸಿಪಿಎಂ ಅಭ್ಯರ್ಥಿ ಎಸ್‌.ವರಲಕ್ಷ್ಮೀ ದೂರಿದರು.
ಲೋಕಸಭಾ ಚುನಾವಣೆಗೆ ಸಲ್ಲಿಸಿದ್ದ ತಮ್ಮ ಉಮೇದುವಾರಿಕೆ ಬುಧವಾರ ಕ್ರಮಬದ್ಧವಾದ ಬಳಿಕ ನಗರದ ಸಿಪಿಎಂ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಸಿಪಿಎಂ ಪಕ್ಷ ಮಹಿಳೆಯನ್ನು ಕಣಕ್ಕೆ ಇಳಿಸಿದ್ದು, ಈ ಭಾಗದಲ್ಲಿ ಪಕ್ಷ ದಶಕಗಳಿಂದಲೂ ರೈತಾಪಿ ಕೂಲಿ ಕಾರ್ಮಿಕರ ಪರವಾಗಿ ಅನೇಕ ಹೋರಾಟಗಳನ್ನು ನಡೆಸಿದೆ ಎಂದರು.
ಸಿಪಿಎಂನಿಂದ ಪ್ರಸ್ತಾಪ: ಬಯಲು ಸೀಮೆ ಜಿಲ್ಲೆಗಳಿಗೆ ಕೋಲಾರ, ಚಿಕ್ಕಬಳ್ಳಾಫ‌ುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಗಳನ್ನು ಕಲ್ಪಿಸಬೇಕು. ಮುಖ್ಯವಾಗಿ ಡಾ.ಜಿ.ಎಸ್‌.ಪರಮಶಿವಯ್ಯ ವರದಿ ಆಧಾರಿತ ನೀರಾವರಿ ಯೋಜನೆಗಳನ್ನು ಅನುಷ್ಠಾನ ಗೊಳಿಸಬೇಕೆಂದು ಮೊಟ್ಟ ಮೊದಲ ಬಾರಿಗೆ ವಿಧಾನಸಭೆ ಯಲ್ಲಿ ಧ್ವನಿ ಎತ್ತಿ ಹೋರಾಟ ನಡೆಸಿದ ಕೀರ್ತಿ ಸಿಪಿಎಂ ಪಕ್ಷಕ್ಕೆ ಸಲುತ್ತದೆ ಎಂದರು.
ಈಗಿನ ಸರ್ಕಾರಗಳು ಅವೈಜ್ಞಾನಿಕವಾದ ನೀರಾವರಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಪೈಪ್‌ಲೈನ್‌ ಲಾಬಿಯಲ್ಲಿ ಮುಳುಗಿದ್ದಾರೆ. ಎತ್ತಿನಹೊಳೆ ಯೋಜನೆಯಿಂದ ಒಂದು ಹನಿ ನೀರು ಈ ಭಾಗಕ್ಕೆ ಹರಿಯುವುದಿಲ್ಲ ಎಂದರು.
ಪಾರದರ್ಶಕವಾಗಿ ನಡೆಸಲಿ: ಚುನಾವಣೆ ಜನರ ಸಮಸ್ಯೆ, ಅಭಿವೃದ್ಧಿ ಮೇಲೆ ನಡೆಯಬೇಕು. ಆದರೆ ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ಪಕ್ಷಗಳು ಮತದಾರರಿಗೆ ಹಣ, ಹೆಂಡದ ಹೊಳೆ ಹರಿಸಲು ಸಿದ್ಧವಾಗಿವೆ. ಈ ಬಗ್ಗೆ ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕ್ರಮ ವಹಿಸಬೇಕು.
ಜಿಲ್ಲಾಡಳಿತ ಕ್ಷೇತ್ರದಲ್ಲಿ ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾದ ಚುನಾವಣೆ ನಡೆಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳ ಬೇಕೆಂದು ಎಸ್‌.ವರಲಕ್ಷ್ಮೀ ಆಗ್ರಹಿಸಿದರು. ಹಣ, ಹೆಂಡದ ರಾಜಕೀಯ ನಾವು ಮಾಡುವುದಿಲ್ಲ. ದೇಶದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಜನರ ಐಕ್ಯತೆಯನ್ನು ಒಡೆದು ಆಳುವ ಶಕ್ತಿಗಳನ್ನು ಸೋಲಿಸಿ ಪರ್ಯಾಯವಾದ ಜಾತ್ಯತೀತ ಶಕ್ತಿಗಳನ್ನು ಈ ಚುನಾವಣೆಯಲ್ಲಿ ಮತದಾರರು ಗೆಲ್ಲಿಸಬೇಕೆಂದು ಮನವಿ ಮಾಡಿದರು.
Advertisement

Udayavani is now on Telegram. Click here to join our channel and stay updated with the latest news.

Next