ತುಮಕೂರು: ಪೆಟ್ರೋಲ್, ಡೀಸೆಲ್, ಗ್ಯಾಸ್, ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿ ರುವ ಬಿಜೆಪಿ ನೇತೃತ್ವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ಧೋರಣೆಯ ಮೂಲಕ ಭಾವನಾತ್ಮಕ ವಿಚಾರ ಮುಂದಿಟ್ಟು ಬೆಲೆ ಏರಿಕೆ ಮರೆಸಲು ಯತ್ನಿಸುತ್ತಿವೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರೋಪಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮ ವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರು ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಸುವುದಾಗಿ, ನಿರುದ್ಯೋಗ ನಿವಾರಣೆ ಮಾಡುವುದಾಗಿ ಹಾಗೂ ಭ್ರಷ್ಟಾಚಾರ ತಡೆಗಟ್ಟುವುದಾಗಿ ವಾಗ್ಧಾನ ನೀಡಿ ಅಧಿಕಾರ ದಕ್ಕಿಸಿಕೊಂಡ ಬಿಜೆಪಿ ಸರ್ಕಾರದ ದುರಾಡಳಿತದಿಂದಾಗಿ ಜನಸಾಮಾನ್ಯರು ಬೆಲೆ ಏರಿಕೆಯನ್ನು ಹೊರೆಯನ್ನು ಹೊರಬೇಕಾಗಿದೆ ಎಂದು ದೂರಿದರು.
ಸರ್ಕಾರ ಹೊಣೆಗೇಡಿತನ: ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡಾಗ ಒಂದು ಲೀ. 70 ರೂ. ಪೆಟ್ರೋಲ್ ಬೆಲೆ 112ರೂ.ಗೆ ಏರಿಕೆ ಯಾಗಿದೆ. ಡೀಸೆಲ್ 58ರಿಂದ 98 ಕ್ಕೆತಲುಪಿದೆ. 400 ರೂ.ಗಳಿದ್ದ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಸಾವಿರ ರೂ. ಸಮೀಪಿಸಿದೆ. ಜನ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ ಸಹ ಬೆಲೆ ಏರಿಕೆಗೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ಕೇಂದ್ರ ಸರ್ಕಾರ ಹೊಣೆಗೇಡಿತನ ಪ್ರದರ್ಶಿಸುತ್ತಿದೆ. ದೇಶದ ಜನರು ಬೆಲೆ ಏರಿಕೆಯಲ್ಲಿ ಬೇಯುತ್ತಿರುವಾಗ ಪ್ರಧಾನಿ ಮೋದಿ ಸ್ನೇಹಿತರ ಸಂಪತ್ತು ಮಾತ್ರ ಬೆಲೆ ಏರಿಕೆಯಂತೆಯೇ ಏರಿಕೆಯಾಗುತ್ತಿದೆ ಎಂದು ಲೇವಡಿ ಮಾಡಿದರು.
ಸಿಪಿಐ ಮುಖಂಡ ಕಂಬೇಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬ್ಬಲ್ ಇಂಜಿನ್ ಸರ್ಕಾರದಿಂದಾಗಿ ಇಂದು ರಸಗೊಬ್ಬರಗಳ ಬೆಲೆ ಏರಿಸಿ ರೈತ ಸಮೂಹವನ್ನು ವಂಚಿಸುತ್ತಿದೆ. ಆಹಾರಧಾನ್ಯ, ಅಡುಗೆ ಎಣ್ಣೆ, ವಿದ್ಯುತ್ ದರ ಸೇರಿದಂತೆ ದಿನನಿತ್ಯ ಉಪಯೋಗಿಸುವ ಪದಾರ್ಥಗಳ ಬೆಲೆಗಳು ಸಹ ಗಗನಮುಟ್ಟಿವೆ.
ಕೋಮು ದ್ವೇಷದ ರಾಜಕಾರಣಕ್ಕೆ ಉತ್ತೇಜನ: ಉಚಿತ ಆರೋಗ್ಯ ಸೇವೆ ನೀಡುವ ಜವಾಬ್ದಾರಿ ಯಿಂದ ನುಣುಚಿಕೊಂಡಿರುವ ಸರ್ಕಾರ, ಸುಮಾರು 800 ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆ ಏರಿಸಿ ಜನಸಾಮ್ಯಾನರನ್ನು ಸಂಕಷ್ಟಕ್ಕೆ ತಳ್ಳಿದೆ. ಜನತೆ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಮರೆಮಾಚಲು ಹಾಗೂ ಮುಂಬರುವ ಚುನಾವಣೆ ಯಲ್ಲಿ ಜಯಿಸಲು ಭಾವನಾತ್ಮಕ, ಧಾರ್ಮಿಕ ಆಚಾರ-ವಿಚಾರಗಳನ್ನು ಹುಟ್ಟುಹಾಕಿ ಕೋಮು ದ್ವೇಷದ ರಾಜಕಾರಣವನ್ನು ಉತ್ತೇಜನಗೊಳಿಸುವ ಪಿತೂರಿಗಳು ಸಹನೀಯ ವಿಚಾರವಲ್ಲ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸಹ ಕಾಯ ದರ್ಶಿ ಅಶ್ವತ್ಥನಾರಾಯಣ, ಬಾಲೇನಹಳ್ಳಿ ಸೀನಪ್ಪ, ಅಜ್ಜನಹಳ್ಳಿ ವಸಂತರಾಜು, ದುರ್ಗದಹಳ್ಳಿ ರುದ್ರಪ್ಪ, ಯಶೋಧಮ್ಮ, ಚಿಕ್ಕಣ್ಣ, ರಾಮಣ್ಣ, ಗಂಗಾಧರಪ್ಪ, ಪುನೀತ್, ಹನುಮಂತರಾಯಪ್ಪ ಸೇರಿದಂತೆ ಇತರರಿದ್ದರು.