ಕಲಬುರಗಿ: ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ-ಯುಕೆಜಿ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸುವ ರಾಜ್ಯದ ಸರ್ಕಾರದ ನೀತಿ ಖಂಡಿಸಿ ಭಾರತ ಕಮ್ಯುನಿಸ್ಟ್ (ಮಾರ್ಕ್‌ವಾದ)ಪಕ್ಷದ ವತಿಯಿಂದ ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ-ಯುಕೆಜಿ ಹಾಗೂ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಿಸಲು ಹೊರಟಿರುವುದು ಖಂಡನೀಯ. ಸರ್ಕಾರದ ನಿರ್ಧಾರ ಕನ್ನಡ ವಿರೋಧಿಯಾಗಿದೆ. ಈಗಾಗಲೇ ಅಖಲಿ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಕೂಡ ಖಂಡಿಸಿದೆ. ಆದರೂ, ಸರ್ಕಾರ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರದ ಪ್ರಮುಖ ಭಾಷೆಗಳಲ್ಲಿ ಒಂದಾಗಿರುವ ಕನ್ನಡವನ್ನು ಎಲ್ಲೆಡೆ ಆಡಳಿತ ಭಾಷೆಯಾಗಿ ಸಾಮಾನ್ಯ ಜನರನ್ನು ತಲುಪುವಂತೆ ಮಾಡಬೇಕು. ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಮತ್ತಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಾದ ಸರ್ಕಾರವೇ ಆಂಗ್ಲ ಶಿಕ್ಷಣದ ಮೂಲಕ ಕನ್ನಡದ ಮೇಲೆ, ಕನ್ನಡಿಗರ ಮೇಲೆ ಹಾಗೂ ಭಾಷಾವಾರು ಪ್ರಾಂತ ರಚನೆ ಘನ ಉದ್ದೇಶ ಮೇಲೆ ದಾಳಿ ನಡೆಸಲು ಮುಂದಾಗಿದೆ ಎಂದು ಕಿಡಿಕಾರಿದರು.
ಪರಕೀಯ ಭಾಷೆಯಲ್ಲಿ ವಿಷಯ ಗ್ರಹಿಸುವಂತೆ ಒತ್ತಡ ಹೇರುವುದು ಮಕ್ಕಳ ಮಾನಸಿಕ ವಿಕಾಸದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇಂಗ್ಲಿಷ್ ಭಾಷೆ ವ್ಯಾಮೋಹದ ಹುಸಿ ಭಾವನೆ ಶಮನಗೊಳಿಸಲು ಸಂಪೂರ್ಣ ಆಂಗ್ಲ ಶಿಕ್ಷಣದ ಬದಲಿಗೆ ಒಂದು ಭಾಷೆಯನ್ನಾಗಿ ಒಂದನೇ ತರಗತಿಯಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಸಬೇಕು ಎಂದು ಒತ್ತಾಯಿಸಿದರು.
ಅದೇ ರೀತಿ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ-ಯುಕೆಜಿ ಆರಂಭಿಸುವ ಬದಲಿಗೆ ಅಂಗನವಾಡಿ ಕೇಂದ್ರಗಳಲ್ಲೇ ಎಲ್ಕೆಜಿ-ಯುಕೆಜಿ ಆರಂಭಿಸಬೇಕು. ಎಲ್ಕೆಜಿ-ಯುಕೆಜಿ ತರಗತಿ ಆರಂಭಿಸಲು ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಸೌಕರ್ಯ, ಸೌಲಭ್ಯ ಒದಗಿಸಿ ಮೇಲ್ದರ್ಜೆಗೇರಿಸಲು ಕ್ರಮಕೈಕೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮಾರುತಿ ಮಾನ್ಪಡೆ, ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ, ಗಂಗಮ್ಮ ಬಿರಾದಾರ, ನಾಗಯ್ಯಸ್ವಾಮಿ, ಶಾಂತಪ್ಪ ಪಾಟೀಲ, ಸಿದ್ದು ಪಾಳಾ, ಮಲ್ಲಣ್ಣಗೌಡ ಬನ್ನೂರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.