ಚನ್ನಪಟ್ಟಣ: ನಾನು ನಿಮ್ಮ ಮನೆಯ ಮಗ, ನಾನು ತಪ್ಪು ಮಾಡಿದರೆ ಬಯ್ಯುವ, ಹೊಡೆಯುವ, ಏನೇ ಶಿಕ್ಷೆ ಕೊಡುವ ಹಕ್ಕು ನಿಮ್ಮಗಿದೆ.. “ಹೀಗೆಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಭಾವೋದ್ವೇಗಕ್ಕೆ ಒಳಗಾಗಿ ಮತದಾರರ ಮುಂದೆ ಪರಿ ಪರಿಯಾಗಿ ಬೇಡಿಕೊಂಡರು.
ತಾಲೂಕಿನ ನಾಗವಾರ ಗ್ರಾಮದಲ್ಲಿ ಸ್ವಾಭಿಮಾನಿ ಸಂಕಲ್ಪ ನಡಿಗೆಯ ಸಂದರ್ಭದಲ್ಲಿ ಗ್ರಾಮದ ಜನತೆ ಸೇರಿಕೊಂಡು ಆಯೋಜನೆ ಮಾಡಲಾಗಿದ್ದ ಹೆಲಿಕ್ಯಾಪ್ಟರ್ ಮೂಲಕ ಟನ್‌ಗಟ್ಟಲೇ ಗುಲಾಬಿ ಹೂಮಾಳೆ ಸುರಿಸಿದ್ದನ್ನು ಕಂಡು ಮೂಕವಿಸ್ಮಿತರಾಗಿ ನಂತರ ಅವರ ಅಭಿಮಾನದ ಕಟ್ಟೆ ಹೊಡೆದು, ತಮ್ಮಲ್ಲಿರುವ ನೋವನ್ನು ಹೊರಹಾಕಿದರು.
ಮತದಾರರಿಗೆ ಪ್ರಶ್ನೆ: ಕಳೆದ 20 ವರ್ಷದಿಂದ ನಿಮ್ಮಗಳ ಕೂಲಿ ಮಾಡಿದ್ದೇನೆ. ನನಗೆ ಕೂಲಿ ಕೊಡಿ. ನಿಮ್ಮ ಮನೆಯ ಮಗ ನಾನು ನಾನು ತಪ್ಪು ಮಾಡಿದ್ದರೆ ಬೈದು ಬುದ್ಧಿ ಹೇಳಿ, ಅಲ್ಲದೆ ಹೊಡೆದು ಬುದ್ದಿ ಕಲಿಸುವ ಹೋಣೆಗಾರಿಕೆ ನಿಮ್ಮ ಮೇಲಿದೆ. ಆದರೆ, ಕ್ಷೇತ್ರದಲ್ಲೆ ಗುರುತರವಾದ ಅಭಿವೃದ್ಧಿಯ ಸಾಕ್ಷಿಗುಡ್ಡೆಯನ್ನು ಬಿಟ್ಟುಹೋದ ನನ್ನ ಮೇಲೆ ಮುನಿಸೇಕೆ ಎಂದು ಮತದಾರರಿಗೆ ಪ್ರಶ್ನೆ ಹಾಕಿದರು.
ಪೊಳ್ಳು ಭರವಸೆ ನಂಬಿ ಗೆಲ್ಲಿಸಿದ್ದೀರಿ: ಮನೆ ಮಗ ತಪ್ಪು ಮಾಡಿದರೆ ಅವನನ್ನು ದೂರ ತಳ್ಳುವಿರೋ ಎಲ್ಲೋ ಇದ್ದವರು ಈ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದವರು ದೂರದ ಜಿಲ್ಲೆಯವರಾದ ಕುಮಾರಸ್ವಾಮಿಯ ಪೊಳ್ಳು ಭರವಸೆಗಳನ್ನು ನಂಬಿ ಅವರನ್ನು ಗೆಲ್ಲಿಸಿದ್ದಿರಿ ಅವರು ಮುಖ್ಯಮಂತ್ರಿಯಾಗಿಯೂ ಐಶಾರಾಮಿಯಾಗಿ ಸ್ಟಾರ್ ಹೋಟೆಲ್‌ನಲ್ಲಿ ಅಧಿಕಾರ ಕೂಡ ನಡೆಸಿದರು. ಆದರೆ, ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಗಳು ಏನು ಎಂದು ಪ್ರಶ್ನೆ ಮಾಡಿದರು.
ಕಳೆದ ಚುನಾವಣೆಯಲ್ಲಿ ಸ್ತ್ರೀಶಕ್ತಿ ಸಾಲಮನ್ನ ಮಾಡುತ್ತೇನೆ ಎಂದು ಕ್ಷೇತ್ರದ ಮುಗ್ಧ ಮಹಿಳೆಯರನ್ನು ನಂಬಿಸಿದ ಮಾರಾಯ ಗೆದ್ದ ಮೇಲೆ ಕ್ಷೇತ್ರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಕ್ಷೇತ್ರದ ಕೆಲ ಗುತ್ತಿಗೆದಾರರಿಗೆ ಹಣ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಎಲ್ಲರೂ ತಿಳಿದ ವಿಚಾರವಾಗಿದೆ ಎಂದರು.
ಸೋಲುವುದು ಖಚಿತ: ಕ್ಷೇತ್ರದ ಜನರು ಎಚ್ಚೆತ್ತುಕೊಂಡಿದ್ದು ಈ ಭಾರಿ ಕುಮಾರಸ್ವಾಮಿರವರ ಆಟ ಏನು ನೆಡೆಯದು. ರಾಜ್ಯ ಮುಖ್ಯಮಂತ್ರಿಯಾಗಿ ಕ್ಷೇತ್ರಕ್ಕೆ ಅನ್ಯಾಯವನ್ನೇ ಎಸೆಗಿರುವ ಕುಮಾರಸ್ವಾಮಿಗೆ ಜನತೆ ತಕ್ಕ ಪಾಠ ಕಲಿಸಲು ಸನ್ನದ್ಧರಾಗಿದ್ದು, ಕಾಲ ಕೂಡಿ ಬಂದಿದೆ. ಜೆಡಿಎಸ್ ಮುಳುಗುವ ಹಡಗಾಗಿದ್ದು, ಕುಮಾರಸ್ವಾಮಿರವರು ಕ್ಷೇತ್ರದಲ್ಲಿ ಸೋಲುವುದು ಖಚಿತವಾಗಿದೆ. ಹಿನ್ನೆಯಲ್ಲಿ ಮುಖ್ಯಮಂತ್ರಿಯ ಕನಸು ಎಂದು ವ್ಯಂಗ್ಯವಾಡಿದರು.
ಬಮೂಲ್ ನಾಮಿನಿ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಹರೂರು ರಾಜಣ್ಣ, ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಂಪುರ ಮಲವೇಗೌಡ, ನಗರ ಬಿಜೆಪಿ ಘಟಕದ ಅಧ್ಯಕ್ಷ ಶಿವು, ನಾಗವಾರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.