Advertisement

ಆಳೆತ್ತರದ ಬೆಂಕಿಯ ಜ್ವಾಲೆಯಿಂದ ಹಾರಿಬಂದ ರಾಸುಗಳು

09:41 PM Jan 15, 2020 | Lakshmi GovindaRaj |

ಮೈಸೂರು: ಮಕರ ಸಂಕ್ರಾಂತಿಯ ಅಂಗವಾಗಿ ಬುಧವಾರ ಸಂಜೆ ಸಿದ್ದಲಿಂಗಪುರದಲ್ಲಿ ನಡೆದ ರಾಸುಗಳಿಗೆ ಕಿಚ್ಚು ಹಾಯಿಸುವ ಸಂಪ್ರದಾಯ ವಿಶೇಷವಾಗಿತ್ತು. ಧಗಧಗನೆ ಉರಿಯೋ ಬೆಂಕಿಯ ಜ್ವಾಲೆಯನ್ನು ಲೆಕ್ಕಿಸದೇ ಹಾರಿ ಬರುವ ದನಗಳ ಮೈನವಿರೇಳಿಸೋ ದೃಶ್ಯಗಳನ್ನು ಸಾವಿರಕ್ಕೂ ಹೆಚ್ಚು ಮಂದಿ ಕಣ್ತುಂಬಿಕೊಂಡರು.

Advertisement

ಸಂಪ್ರದಾಯದಂತೆ ಸಂಕ್ರಾಂತಿ ದಿನ ಪ್ರತಿವರ್ಷ ಈ ಗ್ರಾಮದಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸಲಾಗುತ್ತದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಚಂದ್ರಮೌಳೇಶ್ವರ ದೇಗುಲದ ಎದುರು ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಸೂರ್ಯ ಅಸ್ತಂಗತವಾಗುತ್ತಿದ್ದಂತೆ ರಸ್ತೆಯ ಮೇಲೆ ಮೂರು ಸಾಲಿನಂತೆ ಭತ್ತದ ಹುಲ್ಲನ್ನು ಇಟ್ಟು ಪೂಜೆ ಸಲ್ಲಿಸಿ ನಂತರ ಬೆಂಕಿ ಹಚ್ಚಲಾಗುತ್ತದೆ. ಇದಕ್ಕೂ ಮೊದಲೆ ರಾಸುಗಳ ಮಾಲೀಕರು ತಮ್ಮ ದನಗಳಿಗೆ ಕಿಚ್ಚು ಹಾಯಿಸಲೆಂದೇ ವಿಶೇಷವಾಗಿ ಸಿಂಗರಿಸಿದ್ದು ವಿಶೇಷವಾಗಿತ್ತು.

ಶೃಂಗಾರಗೊಂಡ ರಾಸುಗಳಿಗೆ ಚಂದ್ರಮೌಳೇಶ್ವರ ದೇಗುಲದ ಅರ್ಚಕರು ಪೂಜೆ ಸಲ್ಲಿಸಿದ ಬಳಿಕ ಎಲ್ಲಾ ರಾಸುಗಳನ್ನು ಕಿಚ್ಚು ಹಾಯಿಸುವ ಸ್ಥಳಕ್ಕೆ ಕರೆತರಲಾಯಿತು. ಬಳಿಕ ಮಾರು ಸಾಲಿನ ಹುಲ್ಲಿನ ರಾಶಿಗೆ ಪೂಜೆ ಸಲ್ಲಿಸಿ ಬೆಂಕಿ ಹಚ್ಚಲಾಯಿತು. ಸಿಂಗಾರಗೊಂಡು ಸರದಿಗಾಗಿ ಎದುರು ನೋಡುತ್ತಿದ್ದ ರಾಸುಗಳು ಕಿಚ್ಚು ಹಾಯುತ್ತಿದ್ದಂತೆ ಎಲ್ಲೆಡೆ ಹರ್ಷೋದ್ಗಾರ ಕೇಳಿಬಂತು. ಬೆಂಕಿಯನ್ನು ಸೀಳಿ ಓಡುವ ರಾಸುಗಳನ್ನು ನೋಡಲು ಸಾವಿರಾರು ಜನರು ಜಮಾಯಿಸಿದ್ದರು. ಈ ದೃಶ್ಯವನ್ನು ವಿದೇಶಿಗರೂ ವೀಕ್ಷಿಸಿದರು.

ಸುಗ್ಗಿಯ ಸಂಭ್ರಮವನ್ನು ಜಾನುವಾರುಗಳೊಂದಿಗೆ ಆಚರಿಸುವ ಸಂಪ್ರದಾಯವನ್ನು ಸಿದ್ದಲಿಂಗಪುರದ ರೈತರು 70 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಈ ಹಬ್ಬಕ್ಕಾಗಿ ದುಬಾರಿ ಬೆಲೆಯ ಎತ್ತುಗಳನ್ನು ಖರೀದಿಸುವುದು ಇಲ್ಲಿ ಪ್ರತಿಷ್ಠೆಯ ವಿಷಯ.

ಮೈತೊಳೆದು ಶುಚಿಗೊಳಿಸಿದ ರಾಸುಗಳ ಕೊಂಬುಗಳಿಗೆ ಬಣ್ಣ ಬಳಿದು ಅಂದ ಹೆಚ್ಚಿಸಿದರು. ಹೂಮಾಲೆಗಳಿಂದ ಅಲಂಕರಿಸಿ, ಬಲೂನುಗಳನ್ನೂ ಕಟ್ಟಿದರು. ಕಿಚ್ಚು ಹಾದು ಬಂದ ರಾಸುಗಳು ಗ್ರಾಮದ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದವು. ಈ ವೇಳೆ ಗ್ರಾಮಸ್ಥರು ರಾಸುಗಳ ಪಾದಪೂಜೆ ಮಾಡಿ, ಪ್ರಸಾದ ನೀಡಿ ಮನೆ ತುಂಬಿಕೊಂಡರು.

Advertisement

ಕಿಚ್ಚು ಹಾಯಿಸುವ ವೇಳೆ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಂಚಾರ ಸಮಸ್ಯೆ ಉಂಟಾಯಿತು. ಅರ್ಧಗಂಟೆ ಕಾಲ ಟ್ರಾಫಿಕ್‌ ಜಾಮ್‌ ಉಂಟಾದ ಕಾರಣ ವಾಹನ ಚಾಲಕರು, ಸವಾರರು ತೊಂದರೆ ಅನುಭವಿಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next