Advertisement

ಗೋ ಮೂತ್ರ ಔಷಧ ಆಗರ-72 ಸಾವಿರ ನಾಡಿಗಳ ಶುದ್ಧೀಕರಣ ಸಾಧ್ಯ: ಡಾ| ಜೀವನಕುಮಾರ

05:46 PM May 13, 2024 | Team Udayavani |

■ ಉದಯವಾಣಿ ಸಮಾಚಾರ
ಸಿದ್ದಾಪುರ: ತಾಲೂಕಿನ ಭಾನ್ಕುಳಿ ರಾಮದೇವಮಠದಲ್ಲಿ ನಡೆಯುತ್ತಿರುವ  ಶಂಕರಪಂಚಮೀ ಉತ್ಸವದಲ್ಲಿ ಗೋಪಾಲ ಗೌರವ ಪ್ರಶಸ್ತಿ ಪುರಸ್ಕೃತರನ್ನೊಳಗೊಂಡು ವಿಚಾರ ಸಂಕಿರಣ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.ಮುಂಬೈನ ದಿನೇಶ ಶಹರಾ ಫೌಂಡೇಶನ್‌ನ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ದಿನೇಶ ಶಹರಾ ಶ್ರೀರಾಮಚಂದ್ರಾಪುರ ಮಠದ ಗೋ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement

ದೊಡ್ಡಬಳ್ಳಾಪುರ ಘಾಟಿಸುಬ್ರಹ್ಮಣ್ಯದಲ್ಲಿ ರಾಷ್ಟ್ರೋತ್ಥಾನ ಗೋ ಶಾಲೆ ಪ್ರಾರಂಭಿಸಿ, ಗವ್ಯ ಉತ್ಪನ್ನಗಳಿಂದ ಔಷಧ ತಯಾರಿಸಿ ರೋಗಿಗಳಿಗೆ ನೀಡುತ್ತಿರುವ ಡಾ| ಜೀವನಕುಮಾರ ಮಾತನಾಡಿ, ಗೋ ಮೂತ್ರವು ಔಷಧಗಳ ಆಗರ. ಗೋ ಮೂತ್ರ ಚಿಕಿತ್ಸೆಯಿಂದ ಮನುಷ್ಯನ 72 ಸಾವಿರ ನಾಡಿಗಳ ಶುದ್ಧೀಕರಣ ಸಾಧ್ಯ. ಭವಿಷ್ಯದಲ್ಲಿ ಗೋ ಆಧಾರಿತ ಕೃಷಿ ಹಾಗೂ ಗೋ ಆಧಾರಿತ ಚಿಕಿತ್ಸೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಗದಾಂಬಾ ಮಾ ಗೋ ಪ್ರಾಡಕ್ಟ್ಸ್ ಮೂಲಕ ಗವ್ಯ‌ ಉತ್ಪನ್ನಗಳನ್ನು ತಯಾರಿಸಿ ಚಿಕಿತ್ಸೆ ನೀಡುತ್ತಿರುವ ಕಾಸರಗೋಡಿನ ನೆಕ್ಕಲಕೆರೆಯ ಸುಬ್ರಹ್ಮಣ್ಯ ಪ್ರಸಾದ ಮಾತನಾಡಿ, ಗೋವಿನ ಸೆಗಣಿಯಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ. ಬಿಸಿಲು, ಮಳೆ, ಗಾಳಿ, ಕಸ ತಗಲದಂತೆ ಸೆಗಣಿಯನ್ನು ಸಂರಕ್ಷಿಸಿ ಅದನ್ನೇ ಮೂಲವಾಗಿಟ್ಟುಕೊಂಡು ವಿವಿಧ ರೀತಿಯ ಕಾಯಿಲೆಗಳಿಗೆ ಔಷಧ ತಯಾರಿಸಬಹುದು. ಆರ್ಥಿಕ ನಷ್ಟವಿಲ್ಲದೇ ಗೋ ಉದ್ಯಮ ನಡೆಸಬಹುದು ಎಂದರು.

ತಮ್ಮ ಪರಂಪರಾ ಗೋಕುಲಂ ಗೋ ಶಾಲೆಯಲ್ಲಿ 300 ಕ್ಕೂ ಹೆಚ್ಚು ಗೋವುಗಳನ್ನು ಸಾಕಿ ಸಲಹುತ್ತಿರುವ, ಗೋ ಆಧಾರಿತ ಕೃಷಿ, ಗವ್ಯ ಉತ್ಪನ್ನ ತಯಾರಿಕೆಯಲ್ಲಿ ಹೆಸರು ಮಾಡಿರುವ ಕೇರಳ ಕಾಸರಗೋಡಿನ ಪೆರಿಯದ ನಾಗರತ್ನಾ ವಿಷ್ಣು ಹೆಬ್ಬಾರ ಮಾತನಾಡಿ, ಹಸುಗಳೂ ಸಹ ಸಂಗೀತವನ್ನು ಆಸ್ವಾದಿಸುತ್ತವೆ. ಈ ಹಿನ್ನೆಲೆಯಲ್ಲಿ ಪ್ರತಿ ತಿಂಗಳೂ ನಮ್ಮ ಗೋಶಾಲೆಯಲ್ಲಿ ಒಂದು ದಿನ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದೇವೆ. ನಾವು ನಂಬಿರುವ ಗೋ ಮಾತೆ ನಮ್ಮ ಕೈ ಬಿಟ್ಟಿಲ್ಲ ಎಂದರು.

ಮಹಾವೀರ ಲಿಂಬ್‌ ಸೆಂಟರ್‌ ಸ್ಥಾಪಕರಾಗಿ ವಿಕಲಚೇತನರಿಗೆ ಈವರೆಗೆ ಸುಮಾರು 50 ಸಾವಿರಕ್ಕೂ ಮಿಕ್ಕಿ ಕೃತಕ ಕಾಲುಗಳನ್ನು ಉಚಿತವಾಗಿ ಪೂರೈಸಿದ್ದಲ್ಲದೇ, ಇತ್ತೀಚಿನ ವರ್ಷಗಳಲ್ಲಿ ಅಪಘಾತಗಳಲ್ಲಿ ಕಾಲು ಕಳೆದುಕೊಂಡ ಹಸುಗಳಿಗೂ ಕೃತಕ ಕಾಲುಗಳನ್ನು ತಯಾರಿಸಿ ಉಚಿತವಾಗಿ ಪೂರೈಸುತ್ತಿರುವ ಹುಬ್ಬಳ್ಳಿಯ ಸಮಾಜ ಸೇವಕ ಮಹೇಂದ್ರ ಹಸ್ತಿಮಲ್‌ಜಿ ಸಿಂಘಿ ಮಾತನಾಡಿ, ಹಸುಗಳಿಗೆ ಕೃತಕ ಕಾಲುಗಳನ್ನು ಪೂರೈಸುವಲ್ಲಿ ನಮ್ಮ ಸಂಘಟನೆ ಸದಾ ಸಿದ್ಧವಿದೆ. ನಮ್ಮನ್ನು ಸಂಪರ್ಕಿಸಿದಲ್ಲಿ ನಮ್ಮ ಜನರೇ ಬಂದು ಗೋವಿನ ಕಾಲಿನ ಅಳತೆ ತೆಗೆದುಕೊಂಡು ಕೃತಕ ಕಾಲು ತಯಾರಿಸಿ, ಉಚಿತವಾಗಿ ಪೂರೈಸುತ್ತೇವೆ. ನೀಡಿರುವ ಕೃತಕ ಕಾಲು ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ ತಿಳಿಸಿ ಎಂದರು.

Advertisement

ಗೋ ಆಧಾರಿತ ಕೃಷಿ ಜತೆಯಲ್ಲಿ ಸಾವಯವ ಕೃಷಿ ತಜ್ಞರಾಗಿ ನಾಡಿನೆಲ್ಲೆಡೆ ಮಾರ್ಗದರ್ಶನ ನೀಡುತ್ತಿರುವ ಬೈಲಹೊಂಗಲದ ಬಾಬುರಾವ್‌ ಪಾಟೀಲ ಮಾತನಾಡಿ, ಗೋ ಆಧಾರಿತ ಕೃಷಿ, ಜೀವಾಮೃತ ಬಳಕೆಯಿಂದ ಹೆಚ್ಚಿನ ಇಳುವರಿ ಪಡೆಯಬಹುದು. ನಾವು ನಡೆಸುತ್ತಿರುವ ಕೃಷಿಯ ಜತೆಯಲ್ಲಿ ನಾವು ಬೆಳೆಯುತ್ತಿರುವ ಗಿಡಮರ, ಸಸಿಗಳೊಂದಿಗೆ ಸಂವಹನ ನಡೆಸಬೇಕು. ಇದರಿಂದಲೂ ಉತ್ತಮ ಸ್ಪಂದನೆ ದೊರೆಯುವುದು ಅನುಭವಕ್ಕೆ ಬಂದಿದೆ ಎಂದರು.

ದಿನೇಶ ಶಹರಾ ಫೌಂಡೇಶನ್‌ನ ಮೀರಾಜಿ ಮಾತನಾಡಿದರು. ಕಾಮದುಘಾ ಟ್ರಸ್ಟಿನ ಪ್ರಮುಖ ಡಾ| ವೈ.ವಿ. ಕೃಷ್ಣಮೂರ್ತಿ ಮಾತನಾಡಿದರು. ಸಾರ್ವಜನಿಕರು ಸಂಪನ್ಮೂಲ ವ್ಯಕ್ತಿಗಳಲ್ಲಿ ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆದು ಸಂಶಯ ನಿವಾರಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next