Advertisement

ಠಾಣೆಯಲ್ಲಿ ಸತ್ಯ ಪರೀಕ್ಷೆ! ಹಸುವಿನ ನಿಜವಾದ ಮಾಲೀಕರು ಯಾರು, ಪೊಲೀಸರಿಗೆ ಗೊಂದಲ

04:08 PM Nov 07, 2020 | Nagendra Trasi |

ಕೋರಾಪುಟ್(ರಾಜಸ್ಥಾನ್):ದನ ಕಳ್ಳತನವಾಗಿದೆ, ಕೊಟ್ಟಿಗೆಯಲ್ಲಿದ್ದ ದನ ಕದ್ದೊಯ್ದಿದ್ದಾರೆ ಎಂಬ ಸುದ್ದಿ ಓದಿರುತ್ತೀರಿ. ಆದರೆ ರಾಜಸ್ಥಾನದ ಕೋರಾಪುಟ್ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪ್ರಕರಣದಿಂದ ಪೊಲೀಸರಿಗೆ ತಲೆನೋವಾಗಿದೆ. ದನದ ಮಾಲೀಕರು ತಾವು ಎಂದು ಇಬ್ಬರು ಹೇಳಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಈಗ ದನ ಠಾಣೆ ಸೇರುವಂತಾಗಿದೆ ಎಂದು ವರದಿ ತಿಳಿಸಿದೆ.

Advertisement

ಇಬ್ಬರು ತಮಗೆ ಸೇರಿದ್ದು ಎಂದು ಹೇಳಿಕೊಳ್ಳುತ್ತಿದ್ದ ಪರಿಣಾಮ ಪ್ರಕರಣ ಠಾಣೆಯ ಮೆಟ್ಟಿಲೇರಿತ್ತು. ಅಂತೂ ಈ ಪ್ರಕರಣ ಬಗೆಹರಿಸಲು ಪೊಲೀಸರು ನಿರ್ಧಾರ ತೆಗೆದುಕೊಂಡಿದ್ದರು.

ಏನಿದು ಘಟನೆ:

ಅಕ್ಟೋಬರ್ 31ರಮದು ಕೋರಾಪುಟ್ ನಗರದ ಅಶೋಕ್ ನಗರ್ ನಿವಾಸಿ ಕಮಲಾ ಮುದ್ಲಿ ಎಂಬಾಕೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ತನ್ನ ಮನೆಯ ನಾಗಮಣಿ ಎಂಬ ಹೆಸರಿನ ಹಸುವನ್ನು ಪ್ರಮೋದ್ ರೌಟ್ ಕದ್ದೊಯ್ದು, ಬಲವಂತವಾಗಿ ತನ್ನ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿಕೊಂಡಿದ್ದಾನೆ. ನಾನು ಹಲವು ಬಾರಿ ಮನವಿ ಮಾಡಿಕೊಂಡರು ಸಹ ಹಸುವನ್ನು ಮರಳಿಸಲಿಲ್ಲ ಎಂದು ದೂರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರಿಗೆ ಪ್ರಯೋದ್, ತಾನು ಈ ಹಸುವನ್ನು ನಬರಂಗ್ ಪುರ್ ಎಂಬಲ್ಲಿ ಖರೀದಿಸಿದ್ದು, ಇದರ ಹೆಸರು ಲಕ್ಷ್ಮಿ ಎಂದು ತಿಳಿಸಿದ್ದರು. ತನಿಖೆಯನ್ನು ಆರಂಭಿಸಿದ್ದ ತನಿಖಾಧಿಕಾರಿ ಸಿಬಾ ಪ್ರಸಾದ್ ಮಜಿಹಿ ಅವರು, ಹಸುವನ್ನು ಠಾಣೆಗೆ ತರುವಂತೆ ಪ್ರಮೋದ್ ಗೆ ಸೂಚಿಸಿದ್ದರು.

Advertisement

ಇದನ್ನೂ ಓದಿ:ನಟ ವಿಜಯ್ V/S ತಂದೆ: ಮಗನ ಹೆಸರಿನಲ್ಲಿ ರಾಜಕೀಯ ಪಕ್ಷದ ಹೆಸರು ನೋಂದಣಿ, ಏನಿದು ಜಟಾಪಟಿ?

ಈಗ ಹಸುವನ್ನು ಬಿಟ್ಟು ಬಿಡಿ ಅದು ಯಾರ ಮನೆಯ ಕೊಟ್ಟಿಗೆಗೆ ಹೋಗುತ್ತದೆಯೋ ಅವರು ಮಾಲೀಕರು ಎಂದು ತಿಳಿಯಬಹುದಾಗಿದೆ ಎಂದು ತನಿಖಾಧಿಕಾರಿ ಸಲಹೆ ನೀಡಿದ್ದರು. ಆದರೆ ಹಸು ಪೊಲೀಸ್ ಠಾಣೆ ಬಿಟ್ಟು ಕದಲೇ ಇಲ್ಲ.!

ಏತನ್ಮಧ್ಯೆ ಪ್ರಮೋದ್, ಒಂದು ವೇಳೆ ನಾನು ಹಸುವಿನ ಹೆಸರನ್ನು ಕೂಗಿ ಕರೆದರೆ ಅದು ಅದಕ್ಕೆ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದ್ದರು. ಕಮಲಾ ಕೂಡಾ ನಾನು ಕೂಡಾ ನಾಗಮಣಿ ಎಂದು ಕರೆದರೆ ಅದು ಪ್ರತಿಕ್ರಿಯೆ ನೀಡುತ್ತದೆ ಎಂದು ತಿಳಿಸಿದ್ದರು.

ಕೊನೆಗೂ ನಿಜವಾದ ಮಾಲೀಕರನ್ನು ಪತ್ತೆ ಹಚ್ಚುವ ಪರೀಕ್ಷೆ ನಡೆಸಲು ತನಿಖಾಧಿಕಾರಿ ಮುಂದಾಗಿದ್ದು, ಹಸುವಿನ ಹೆಸರು ಕರೆಯುವಂತೆ ಸೂಚಿಸಿದರು. ಆದರೆ ಪೊಲೀಸರಿಗೆ ಅಚ್ಚರಿಯಾಗಿದ್ದು ಏನೆಂದರೆ ಪ್ರಮೋದ್ ಹಾಗೂ ಕಮಲಾ ಕರೆದ ಬೇರೆ, ಬೇರೆ ಹಸರಿಗೂ ಹಸು ಪ್ರತಿಕ್ರಿಯೆ ನೀಡಿತ್ತು!

ನಂತರ ಹಸುವಿಗೆ ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದ ಪಶುವೈದ್ಯಾಧಿಕಾರಿಯನ್ನು ಕರೆಸಲು ನಿರ್ಧರಿಸಿದ್ದರು. ತಾನು ಒಂದೇ ಹಸುವಿಗೆ ಕಮಲಾ ಮತ್ತು ಪ್ರಮೋದ್ ಅವರ ಕೊಟ್ಟಿಗೆಯಲ್ಲಿ ಚಿಕಿತ್ಸೆ ನೀಡಿದ್ದೇನೆ. ಇಬ್ಬರೂ ಹಸುವನ್ನು ಪೋಷಿಸಿದ್ದರಿಂದ ಬೇರೆ, ಬೇರೆ ಹೆಸರಿಗೆ ಪ್ರತಿಕ್ರಿಯೆ ನೀಡುತ್ತದೆ ಎಂದು ವೈದ್ಯಾಧಿಕಾರಿ ಘೋಷಿಸಿದ್ದರಿಂದ ಪೊಲೀಸರು ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದರು.

ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಹಸುವಿನ ನಿಜವಾದ ಮಾಲೀಕರು ಪತ್ತೆಯಾಗುವವರೆಗೆ ಹಸು ಪರಾಜಾ ಬೀದಿಯಲ್ಲಿರುವ ಮತ್ತೊಬ್ಬ ವ್ಯಕ್ತಿಯ ಕೊಟ್ಟಿಗೆಯಲ್ಲಿ ಇರಲಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಹಸುವಿನ ನಿಜವಾದ ಮಾಲೀಕರು ಯಾರು ಎಂಬುದನ್ನು ಪೊಲೀಸರು ಹೇಗೆ ಪತ್ತೆಹಚ್ಚಲಿದ್ದಾರೆ ಎಂಬ ಕುತೂಹಲ ಸ್ಥಳೀಯ ನಿವಾಸಿಗಳದ್ದಾಗಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next