Advertisement
ಬಕ್ರೀದ್ ಹಬ್ಬದ ನಿಮಿತ್ತ ಕುರ್ಬಾನಿಗಾಗಿ ಎಂದು ಅನುಮಾನಿಸಿ ಅನಧಿಕೃತವಾಗಿ ಗೋವುಗಳನ್ನು ಹಾಗೂ ಸಣ್ಣ ಕರುಗಳನ್ನು 3ನಂ ಗೇಟ್ ವ್ಯಾಪ್ತಿಯ ಪಂಪ್ ಹೌಸ್ ಹತ್ತಿರ ಖಾಲಿ ಜಾಗದಲ್ಲಿ ಕಟ್ಟಿ ಇಟ್ಟಿರಬಹುದೆಂದು ಹಿಂದೂಪರ ಸಂಘಟನೆಯವರು ಪೋಲಿಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮವನ್ನು ಕೈಗೊಂಡಿದ್ದಾರೆ.
Related Articles
Advertisement
ಇದಕ್ಕೂಮುನ್ನ ಕೆಲ ಗಂಟೆಗಳ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೋಲಿಸರು ಬಿಗಿ ಬಂದೊಬಸ್ತ್ ಮಾಡಿದ್ದರು. ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಪೋಲಿಸರ ನಡುವೆ ಮಾತಿನ ಚಕಮಕಿ ನಡೆಯಿತು.
ಪೊಲೀಸರೊಂದಿಗೆ ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷರಾದ ವಾಸುದೇವ ಪ್ರಭು, ಮುಖಂಡರಾದ ರೋಶನ್ ನೇತ್ರಾವಳಿ, ಗುರು ಮಠಪತಿ, ಬುದ್ಧಿವಂತ ಗೌಡ ಪಾಟೀಲ್ ಅವರು ಯಾವುದೇ ಕಾರಣಕ್ಕೂ ಜಾನುವಾರುಗಳನ್ನು ವಧೆ ಮಾಡುವಂತಿಲ್ಲ. ಅವುಗಳ ಜೀವದ ರಕ್ಷಣೆಗೆ ಅಗತ್ಯ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಂತರ ಮಾಧ್ಯಮದ ಜೊತೆ ಮಾತನಾಡಿದ ಹಿಂದೂ ಸಮಾಜದ ಮುಖಂಡರಾದ ರೋಶನ್ ನೇತ್ರಾವಳಿ ಅವರು 05 ಕರು ಹಾಗೂ 17 ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ಇದಕ್ಕೆ ಪೊಲೀಸರು ನೇರ ಕಾರಣರಾಗುತ್ತಾರೆ. ಇವುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಸಂಪೂರ್ಣ ಜವಾಬ್ದಾರಿ ಪೋಲಿಸ್ ಇಲಾಖೆಯದಾಗಿದ್ದು, ಗೋಶಾಲೆಗೆ ಕಳುಹಿಸಿ ಉಳಿದಿರುವ 17 ಜಾನುವಾರುಗಳ ಬಗ್ಗೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಚಿತ್ರ ಸಹಿತ ಸೂಕ್ತ ದಾಖಲಾತಿಗಳೊಂದಿಗೆ, ಯಾರಿಗೆ ಮತ್ತು ಎಲ್ಲಿಗೆ ನೀಡಲಾಯಿತು ಎನ್ನುವುದರ ಬಗ್ಗೆಯೂ ಸೂಕ್ತ ದಾಖಲಾತಿಯೊಂದಿಗೆ ಮಾಹಿತಿಯನ್ನು ನೀಡಬೇಕು. ಒಂದು ವೇಳೆ ಇವುಗಳ ರಕ್ಷಣೆಗೆ ಅಗತ್ಯ ಕ್ರಮವನ್ನು ಕೈಗೊಳ್ಳದೆ ಇದ್ದ ಪಕ್ಷದಲ್ಲಿ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.
ಇಷ್ಟಾದರೂ ಯಾವುದೇ ರೀತಿಯ ಶಾಂತಿ ಕದಡದೆ ಪರಸ್ಪರ ಸಮನ್ವಯತೆಯಿಂದ ಸಮಸ್ಯೆಯೊಂದು ತಕ್ಕಮಟ್ಟಿಗೆ ಬಗೆಹರಿದಂತಾಗಿದೆ. ಮುಖಂಡರಾದ ಇಕ್ಬಾಲ್ ಶೇಖ ಅವರ ನೇತೃತ್ವದಲ್ಲಿ ಅಷ್ಪಾಕ್ ಶೇಖ, ರಫೀಕ್ ಹುದ್ದಾರ್, ಉಸ್ಮಾನ್ ಮುನ್ನ ವಹಾಬ್, ದಾದಾಪೀರ್ ನದೀಮುಲ್ಲಾ ಮೊದಲಾದವರ ಸಮ್ಮುಖದಲ್ಲಿ ಮುಸ್ಲಿಂ ಧರ್ಮ ಬಾಂಧವರು ಪೊಲೀಸರ ಸೂಚನೆಗೆ ಗೌರವವನ್ನು ನೀಡಿ, ಪೊಲೀಸರ ಸೂಚನೆಯನ್ನು ಪಾಲಿಸಿದರು.
ಸ್ಥಳದಲ್ಲಿ ದಾಂಡೇಲಿ ಸಿಪಿಐ ಭೀಮಣ್ಣ.ಎಂ.ಸೂರಿ, ಹಳಿಯಾಳ ಸಿಪಿಐ ಜಯಪಾಲ್ ಪಾಟೀಲ್, ಪಿಎಸ್ಐಗಳಾದ ಐ.ಆರ್.ಗಡ್ಡೆಕರ, ಕೃಷ್ಣ ಅರಕೇರಿ, ಜಗದೀಶ, ರವೀಂದ್ರ ಬಿರದಾರ್, ಅಮೀನ್ ಅತ್ತಾರ್, ರಾಜಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸ್ಥಳಕ್ಕೆ ಪ್ರಭಾರಿ ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ ಅವರು ಭೇಟಿ ನೀಡಿದರು.
ಉಳಿದ 17 ಜಾನುವಾರುಗಳ ಜೀವದ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಸಂಪೂರ್ಣ ಜವಾಬ್ದಾರಿ ಪೊಲೀಸ್ ಇಲಾಖೆಯದ್ದಾಗಿದ್ದು, ಇದರಲ್ಲಿ ವಿಫಲವಾದಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಶಾಸಕರಾದ ಸುನಿಲ್ ಹೆಗಡೆ ಅವರು ಪೊಲೀಸರಿಗೆ ಎಚ್ಚರಿಕೆಯನ್ನು ನೀಡಿದರು.
ಇದನ್ನೂ ಓದಿ: VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ