ಶಿವಮೊಗ್ಗದ ಸಾಗರ ತಾಲೂಕಿನ ಆನಂದಪುರಂ ಪಟ್ಟಣದ ಹೊಸಳ್ಳಿ ಸದಾನಂದ 16-17 ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ.
ಪಟ್ಟಣದ ರಂಗನಾಥ ಸ್ವಾಮಿ ದೇವಾಲಯ ರಸ್ತೆಯ ತಮ್ಮ ಸ್ವಂತ ಕೊಟ್ಟಿಗೆಯಲ್ಲಿ ಹೈನುಗಾರಿಕೆ ನಡೆಸುತ್ತಿದ್ದಾರೆ. ಭತ್ತದ ಗದ್ದೆ ಕೈ ಕೊಟ್ಟಾಗ ಒಂದು ಹಸು ಖರೀದಿಸಿ ಹೈನುಗಾರಿಕೆ ಆರಂಭಿಸಿದರು. ಇದರಿಂದ ಹಾಲಿನ ಉತ್ಪನ್ನದ ಜೊತೆಗೆ ಕೃಷಿಗೆ ಪೂರಕವಾದ ಸಗಣಿ ಗೊಬ್ಬರ ಸಹ ದೊರೆತಂತಾಯಿತು.
ಮರುವರ್ಷವೇ ಇನ್ನೂ ಎರಡು ಹಸು ಖರೀದಿಸಿದರು. 4 ನೇ ವರ್ಷದಿಂದ ಮೊದಲು ಸಾಕಿದ ಹಸು ಕರು ಹಾಕಿ ಆ ಕರುಗಳು ದೊಡ್ಡವಾಗಿ ಹೈನುಗಾರಿಕೆಯ ಪ್ರಮಾಣ ಹೆಚ್ಚಳವಾಗತೊಡಗಿತು. ಒಂದು ಜರ್ಸಿ ಹಸು, 4 ಮಿಶ್ರ ತಳಿ ಹಸು ಸೇರಿ ಈಗ 5 ಹಸುಗಳು ಮತ್ತು 4 ಕರು ಇವರ ಕೊಟ್ಟಿಗೆಯಲ್ಲಿವೆ. ತಮ್ಮ ಭತ್ತದ ಗದ್ದೆಯ ಒಣ ಹುಲ್ಲು, ಬ್ಯಾಣದಲ್ಲಿನ ಹಸಿರು ಹುಲ್ಲು ಮತ್ತು ಪಶು ಆಹಾರವನ್ನು ಅಗತ್ಯ ಪ್ರಮಾಣದಲ್ಲಿ ನೀಡುತ್ತಿದ್ದಾರೆ. ಪ್ರತಿ ನಿತ್ಯ ಒಂದು ಹಸುವಿಗೆ ಸರಾಸರಿ 4 ಕಟ್ಟು ಒಣಹುಲ್ಲು, 3 ಕಟ್ಟು ಹಸಿ ಹುಲ್ಲು,3.5 ಕೆ.ಜಿ.ಯಷ್ಟು ಪಶು ಆಹಾರ ನೀಡುತ್ತಾರೆ.
ಲಾಭದ ಲೆಕ್ಕಾಚಾರ
ಪ್ರತಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಸೇರಿ ಸರಾಸರಿ 40 ಲೀಟರ್ ಹಾಲು ಮಾರುತ್ತಾರೆ. ಒಂದು ಲೀಟರ್ ಗೆ ರೂ. 26 ರಂತೆ ದರ ಸಿಗುತ್ತದೆ. ಜೊತೆಗೆ ಪ್ರತಿ ಲೀಟರ್‌ಗೆ ರೂ.5 ಪ್ರೋತ್ಸಾಹ ಧನ ಸಹ ದೊರೆಯುತ್ತದೆ. ಹೀಗೆ ಲೀಟರ್ ಒಂದಕ್ಕೆ 31ರೂ. ಆದಾಯವಿದೆ. ದಿನವೊಂದಕ್ಕೆ ಇವರಿಗೆ 40 ಲೀ.ಹಾಲು ಮಾರಾಟ ಮಾಡಿದರೆ 1,240 ರೂ. ಆದಾಯ. ಆಹಾರ, ಮೇವು ಹೀಗೆ ಎಲ್ಲ ರೀತಿಯ ಲೆಕ್ಕ ಹಾಕಿದರೆ ದಿನವೊಂದಕ್ಕೆ ರೂ.600 ಖರ್ಚು ತಗಲುತ್ತದೆ. ತಿಂಗಳ ಸರಾಸರಿ ರೂ.18 ಸಾವಿರ ಲಾಭ ಮಾಡುತ್ತಿದ್ದಾರೆ.
ವರ್ಷಕ್ಕೆ ಸುಮಾರು 10 ಲೋಡ್ (ಕ್ಯಾಂಟರ್)ಸಗಣಿ ಗೊಬ್ಬರಸಿಗುತ್ತದೆ.ಒಂದು ಲೋಡ್ ಗೆ ರೂ.7000 ದಂತೆ ಲೆಕ್ಕ ಹಾಕಿದರೆ ರೂ.70 ಸಾವಿರ ಆದಾಯ ದೊರೆಯುತ್ತದೆ. ತಮ್ಮ ಹೊಲಕ್ಕೆ ಈ ಗೊಬ್ಬರ ಬಳಸುವ ಕಾರಣ ಗೊಬ್ಬರ ಖರೀದಿಯ ಹಣ ಉಳಿತಾಯವಾಗುತ್ತದೆ. ಇವರ ಕಾರ್ಯಕ್ಕೆ ಇವರ ಪತ್ನಿ ಗೀತಾ ಸಹಕರಿಸುತ್ತಿದ್ದು ನಿತ್ಯ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಎನ್.ಡಿ.ಹೆಗಡೆ ಆನಂದಪುರಂ