Advertisement

UV Fusion: ಪರಿಸರ ಸ್ನೇಹಿ ಸಗಣಿ ಹುಳು

02:23 PM Sep 10, 2023 | Team Udayavani |

ಸಗಣಿ ಎಂಬ ಪದ ಕಿವಿ ತಲುಪಿದ್ದೆ ಮುಖ ಮುರಿಯುವವರು, ಆಡಿಕೊಂಡು ನಗುವರೇ ಜಾಸ್ತಿ. ಒಂದು ಕಾಲದಲ್ಲಿ ಮನೆಯ ಅಂಗಳದಲ್ಲಿ ಸಾರಿಸಿ ಮನೆಗೆ ಕಳೆಯನ್ನು ತಂದು ಕೊಡುತಿದ್ದ ಸಗಣಿ ಇಂದು ಬೀದಿಯಲ್ಲಿ ಬಿದ್ದಿರುವ ಹೇಸಿಗೆಯ ವಸ್ತುವಂತೆ ಜನರು ನೋಡುತ್ತಿದ್ದಾರೆ. ಆದರೆ ಜನರು ಸಗಣಿಯನ್ನು ಮರೆತಿದ್ದರೂ ಸಗಣಿ ಹುಳುಗಳು ಮಾತ್ರ ಪ್ರಕೃತಿಯ ಜೊತೆ ಒಡನಾಟವಿಟ್ಟುಕೊಂಡು ಪರಿಸರ ಸ್ನೇಹಿಯಂತೆ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದೆ.

Advertisement

ಸಗಣಿ ಜೀರುಂಡೆಗಳು ಎಂದು ಕರೆಯಲ್ಪಡುವ ಇವುಗಳು ಪ್ರಕೃತಿಯಲ್ಲಿನ ಕಾಡು, ಹುಲ್ಲುಗಾವಲು, ತೋಟ ಹೀಗೆ ನಾನಾ ಕಡೆಯಲ್ಲಿ ಕಂಡು ಬರುತ್ತದೆ. ಸ್ಕಾರಬೇಯೋಡಿಯೋ ಎಂಬ ವಂಶಕ್ಕೆ ಸೇರಿದ ಇವುಗಳು ಯಾವುದೇ ರೀತಿಯ ದ್ರವ್ಯವನ್ನು ಸೇವಿಸುವುದಿಲ್ಲ. ಬದಲಾಗಿ ಸಗಣಿಯಿಂದಲೇ ತಮಗೆ ಬೇಕಾದ ಪೋಷಕಗಳನ್ನು ಪಡೆದುಕೊಳ್ಳುತ್ತದೆ. ಇವುಗಳ ವಾಸನಾ ಗ್ರಹಣ ಶಕ್ತಿ ಅನುಪಮವಾಗಿರುತ್ತದೆ.ಇವುಗಳು ಸಗಣಿಯನ್ನು ತಮ್ಮದಾಗಿಸಿಕೊಂಡ ಅನಂತರ ಅದನ್ನು ಸಣ್ಣ ಉಂಡೆಗಳಾಗಿ ಮಾಡಿಕೊಂಡು ಭೂಮಿಯಲ್ಲಿ ಹುದುಗಿಸಿ ಮಣ್ಣಿನ ಫ‌ಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇತ್ತೀಚಿನ ಸಂಶೋಧನೆಯಲ್ಲಿ ತಿಳಿದು ಬಂದ ವಿಷಯವೆಂದರೆ ಸಗಣಿ ಹುಳುಗಳು ತಮ್ಮ ತೂಕದ ಹತ್ತು ಪಟ್ಟು ಭಾರದ ಸಗಣಿಯ ಭಾರವನ್ನು ಹೊರುತ್ತದೆ ಅಂದರೆ ಒಬ್ಬ ಮನುಷ್ಯ ಭಾರಿ ಗಾತ್ರದ ಲಾರಿಯನ್ನು ತಳ್ಳುವುದಕ್ಕೆ ಸಮಾನವಾಗಿರುತ್ತದೆ. 2003 ರ ಸಂಶೋಧನೆಯೊಂದರ ಪ್ರಕಾರ ಆಫ್ರಿಕಾದ ಸ್ಕಾರಬಾಯಸ್‌ ತಾಂಬೇಲಿಯಾನಸ್‌ ಜಾತಿಯವು ಚಂದ್ರನ ಧ್ರುವೀಕರಣ ಕ್ರಮವನ್ನು ಅನುಸರಿಸಿ ಮುನ್ನಡೆಯುತ್ತವೆಯಂತೆ. ಇನ್ನೂ ಕೆಲವು ಸಂಶೋಧನೆಗಳ ಪ್ರಕಾರ ಇವುಗಳು ಮಿಲ್ಕಿ ವೇ (ಆಕಾಶಗಂಗೆ ) ಇರುವ ಸಮಯಗಳಲ್ಲಿ ಮಾತ್ರ ತಮ್ಮ ಪಯಣವನ್ನು ಮುಂದುವರೆಸುತ್ತವೆಯಂತೆ.ಇವು ತಮ್ಮ ವಂಶಾಭಿವೃದ್ಧಿ ಕ್ರಿಯೆಯಲ್ಲೂ ಸಗಣಿಯನ್ನು ಬಳಸಿಕೊಳ್ಳುತ್ತವೆ.

ಸಗಣಿ ಹುಳುಗಳು ವ್ಯವಸಾಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ದನ ಕರುಗಳ ಸಗಣಿಯನ್ನು ಉಂಡೆಯಾಕಾರದಲ್ಲಿ ಮಾಡಿ ನೆಲದಲ್ಲಿ ಹೂಳುತ್ತದೆ. ಇದರಿಂದ ಇವುಗಳು ಮಣ್ಣಿನ ಪೋಷಣೆ ಮತ್ತು ಅವುಗಳ ಮರುಪೂರ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. ಸಗಣಿಗಳನ್ನು ಸಾಗಿಸುವ ವಾಹಕಗಳ ಹಾಗೆ ಕೆಲಸ ಮಾಡುವ ಇವುಗಳು ಪ್ರಾಣಿಗಳು ವಾಸಿಸುವ ಸ್ಥಳವನ್ನು ಸ್ವತ್ಛವಾಗಿಟ್ಟುಕೊಳ್ಳುವುದಲ್ಲದೆ ವಾತಾವರಣವನ್ನು ಶುದ್ಧಗೊಳಿಸಿ ರೋಗ ರುಜಿನಗಳನ್ನು ದೂರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಅಭಿವೃದ್ಧಿಶೀಲ ರಾಷ್ಟ್ರಗಳು ಇವುಗಳನ್ನು ಪಶುಸಂಗೋಪನೆಯಲ್ಲಿ ಬಳಸಿಕೊಳ್ಳುತ್ತವೆ. ಅಮೆರಿಕಾದ ಇನ್ಸ್ಟಿಟ್ಯೂಶನ್‌ ಆಫ್ ಬಯೋಲಾಜಿಕಲ್‌ ಸೈನ್ಸ… ಹೇಳುವ ಪ್ರಕಾರ ಪಶುಸಂಗೋಪನೆಯಲ್ಲಿ ಸಗಣಿ ಹುಳುಗಳನ್ನು ಬಳಸಿಕೊಳ್ಳುವುದರಿಂದ ಅಧಿಕ ಪ್ರಮಾಣದ ಉಳಿತಾಯ ಅಲ್ಲಿನ ಆರ್ಥಿಕತೆಯಲ್ಲಿ ಆಗುತ್ತವೆ.

Advertisement

ಗಾಡ ಕಪ್ಪು ಬಣ್ಣದ ಮಿನುಗುವ ಮೇಲ್ಭಾಗವನ್ನು ಹೊಂದಿರುವ ಇವುಗಳ ಜೀವಿತಾವಧಿ ಕೇವಲ ಮೂರು ವರ್ಷ.ತನ್ನ ಆರು ಕಾಲುಗಳ ಮೂಲಕ ಬಹುಪಾಲು ರಾತ್ರಿ ಸಮಯದಲ್ಲಿ ತಮ್ಮ ಕಾರ್ಯದಲ್ಲಿ ಪಾಲ್ಗೊಳ್ಳುವ ಇವುಗಳು ಎಂತಹ ಕಷ್ಟದ ಸಂದರ್ಭ ಬಂದರೂ ಇನ್ನೊಂದು ಹುಳುವಿನ ಸಹಾಯ ಪಡೆಯುವುದಿಲ್ಲ. ಪ್ರಕೃತಿಯ ಸ್ವತ್ಛತೆ ಮಣ್ಣಿನ ಫ‌ಲವತ್ತತೆಯನ್ನು ಕಾಪಾಡಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸುವ ಇವುಗಳು ಚಟುವಟಿಕೆಯುತ ಕಾರ್ಯದಲ್ಲಿ ಮನುಷ್ಯನಿಗೆ ಮಾದರಿಯಾಗಬಲ್ಲವು. ಇವುಗಳ ಅಳಿಲು ಸೇವೆ ನಿಜವಾಗಿಯೂ ಸೆಗಣಿ ಎಂದರೆ ಮೂಗು ಮುರಿಯುವವರು ಕೂಡ ಮೆಚ್ಚುವಂತಹದು.

 ಶಿಲ್ಪಾ ಪೂಜಾರಿ

ಎಂ. ಎಂ ಕಲಾ ಮತ್ತು ವಿಜ್ಞಾನ

ಮಹಾವಿದ್ಯಾಲಯ ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next