Advertisement

ಸದ್ದಿಲ್ಲದೆ ಸಾಗಿದೆ ಪುಣ್ಯಕೋಟಿ ದಾನ ಸೇವೆ

05:15 PM Oct 04, 2021 | Team Udayavani |

ವರದಿ: ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ದೇಸಿ ಹಸುಗಳ ಸಂರಕ್ಷಣೆ-ಸಂವರ್ಧನೆ ನಿಟ್ಟಿನಲ್ಲಿ ಹಲವರು ಗೋಶಾಲೆ ತೆರೆಯುತ್ತಾರೆ ಇಲ್ಲವೆ ನೆರವು ನೀಡುತ್ತಾರೆ. ಕೆಲವರು ಒಂದೆರಡು ಹಸುಗಳನ್ನು ದಾನವಾಗಿಯೂ ನೀಡುತ್ತಾರೆ. ಆದರೆ, ಬೆಳಗಾವಿ ಜಿಲ್ಲೆ ಸವದತ್ತಿಯ ವ್ಯಕ್ತಿಯೊಬ್ಬರು ಗೋವಿನ ಬ್ಯಾಂಕ್‌ ಮೂಲಕ ಸುಮಾರು 1,000ಕ್ಕೂ ಅಧಿಕ ಹಸುಗಳನ್ನು ದಾನವಾಗಿ ನೀಡುವ ಮೂಲಕ ಪುಣ್ಯಕೋಟಿಯ ಸಂತತಿ ವೃದ್ಧಿಗೆ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ವಸಿಷ್ಠ ಮಹಾಋಷಿಯ ಪರಿಕಲ್ಪನೆಯ ಗೋವಿನ ಸೋಮಯಾಗ ಮಂಟಪ ನಿರ್ಮಾಣದ ಚಿಂತನೆಯಲ್ಲಿದ್ದಾರೆ.

ಸವದತ್ತಿಯ ಜಯಶಂಕರ ಹೊನ್ನೂರು ಅವರು ಕಳೆದ 17 ವರ್ಷಗಳಿಂದಲೂ ಗೋವಿನ ಬ್ಯಾಂಕ್‌ ಸ್ಥಾಪಿಸಿದ್ದು, ಹಸು ಸಾಕುವವರಿಗೆ, ರಾಜ್ಯದ ವಿವಿಧ ಗೋಶಾಲೆಗಳಿಗೆ ದೇಸಿ ಗೋವುಗಳನ್ನು ಉಚಿತವಾಗಿ ನೀಡಿದ್ದಾರೆ. ಗೋ ಹತ್ಯೆ ತಡೆ ಹಾಗೂ ಸಮರ್ಪಕ ಅನುಷ್ಠಾನ ನಿಟ್ಟಿನಲ್ಲಿ ತಮ್ಮದೇಯಾದ ರೀತಿಯಲ್ಲಿ ಹೋರಾಟ ಮಾಡುತ್ತಿದ್ದು, ರೈತರಲ್ಲಿ ಜಾಗೃತಿ ಕಾರ್ಯಕ್ಕೆ ಮುಂದಾಗಿದ್ದಾರೆ.

ಗೋವಿನ ಬ್ಯಾಂಕ್‌: ದೇಶದಲ್ಲಿ ಸುಮಾರು 73ಕ್ಕೂ ಹೆಚ್ಚು ದೇಸಿ ತಳಿ ಹಸುಗಳಿದ್ದವು. ಇದೀಗ ಕೇವಲ 31 ತಳಿಗಳು ಮಾತ್ರ ಉಳಿದಿದ್ದು, ಇದರಲ್ಲಿಯೂ ಹಲವು ತಳಿಗಳು ಅಳಿವಿನಂಚಿಗೆ ಸಾಗಿವೆ. ಗೋವುಗಳ ಸಾಕಣೆಯಲ್ಲಿ ರೈತರಲ್ಲಿ ಬದಲಾದ ಮನೋಭಾವ, ಹೆಚ್ಚಿದ ವ್ಯವಹಾರಿಕ ದೃಷ್ಟಿ, ಜರ್ಸಿ, ಎಚ್‌ ಎಫ್‌ ತಳಿಗಳ ಪರಿಣಾಮ ದೇಸಿ ಹಸುಗಳ ಸಂತತಿ ನಶಿಸುತ್ತಿದ್ದು, ಅದರ ಸಂರಕ್ಷಣೆ, ಸಂವರ್ಧನೆ ಇಂದಿನ ಅನಿವಾರ್ಯವಾಗಿದೆ. ಇಲ್ಲವಾದರೆ ಭವಿಷ್ಯದಲ್ಲಿ ಭಾರತೀಯ ಕೃಷಿ, ಜನರು ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಉದ್ದೇಶದಿಂದ ಜಯಶಂಕರ ಅವರು ತಮ್ಮ ಕೈಲಾದ ಅಳಿಲು ಸೇವೆಗೆ ಮಹತ್ವದ ಹೆಜ್ಜೆ ಇರಿಸಿದ್ದಾರೆ. ಇದಕ್ಕಾಗಿಯೇ ಸವದತ್ತಿನಲ್ಲಿ ಸುಮಾರು 17 ವರ್ಷಗಳ ಹಿಂದೆಯೇ ಗೋವಿನ ಬ್ಯಾಂಕ್‌ ಆರಂಭಿಸಿದ್ದು, ಗೋವಿನ ಬ್ಯಾಂಕ್‌ ಮೂಲಕ ಗೋವುಗಳನ್ನು ಸಾಕಲು ಸಾಧ್ಯವಾಗದವರು, ಬೇಡವಾದವರು ಹಾಗೂ ದಾನಿಗಳಿಂದ ಗೋವುಗಳನ್ನು ಪಡೆದು, ಗೋವುಗಳು ಸಾಕಲು ಬೇಕೆನ್ನುವವರು ಹಾಗೂ ಗೋಶಾಲೆಗಳಿಗೆ ಹಸುಗಳನ್ನು ನೀಡುವ ಕಾರ್ಯ ಮಾಡುತ್ತಿದ್ದು, ಇದುವರೆಗೂ ಸುಮಾರು 1,000ಕ್ಕೂ ಅಧಿಕ ದೇಸಿ ಗೋವುಗಳನ್ನು ನೀಡಿದ್ದು, ಈಗಲೂ ಆ ಕಾರ್ಯ ಮುಂದುವರಿಸಿದ್ದಾರೆ. ಗೋವುಗಳು ಬೇಕಾದವರು ಗೋ ಬ್ಯಾಂಕ್‌ಗೆ ತಮ್ಮ ಹೆಸರು ನೋಂದಾಯಿಸುತ್ತಿದ್ದು, ಆದ್ಯತೆ ಆಧಾರದಲ್ಲಿ ಗೋವುಗಳನ್ನು ಉಚಿತವಾಗಿಯೇ ನೀಡಲಾಗುತ್ತದೆ. ಗೋವನ್ನು ಪಡೆದವರು ಅವುಗಳನ್ನು ಉತ್ತಮವಾಗಿ ಸಾಕಣೆ ಮಾಡಬೇಕು. ಯಾವುದೇ ಕಾರಣಕ್ಕೂ ಅವುಗಳನ್ನು ಕಟುಕರಿಗೆ ಕೊಡಬಾರದು ಎಂಬ ಷರತ್ತಿನೊಂದಿಗೆ ಗೋವುಗಳನ್ನು ನೀಡಲಾಗುತ್ತದೆ. ಸೋಮಯಾಗ

ಮಂಟಪ ಚಿಂತನೆ: ಗೋವಿನ ಬ್ಯಾಂಕ್‌ ಸ್ಥಾಪನೆಯೊಂದಿಗೆ ಗೋವುಗಳ ನೀಡಿಕೆ ಕಾರ್ಯದಲ್ಲಿ ತೊಡಗಿರುವ ಜಯಶಂಕರ ಅವರು, ಗೋವಿನ ಸೋಮಯಾಗ ಮಂಟಪ ನಿರ್ಮಾಣದ ಚಿಂತನೆ ಹೊಂದಿದ್ದಾರೆ. ವಸಿಷ್ಠ ಮಹಾಋಷಿ ಗೋವಿನ ಸೋಯಮಾಗ ಮಂಟಪದ ಕಾರ್ಯಕೈಗೊಂಡಿದ್ದರು ಎನ್ನಲಾಗುತ್ತಿದ್ದು, ಅದೇ ಪರಿಕಲ್ಪನೆಯಡಿ ಸವದತ್ತಿಯಲ್ಲಿ ಗೋವಿನ ಸೋಮಯಾಗ ಮಂಟಪ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಮಂಟಪದಲ್ಲಿ 100ಕ್ಕೂ ಹೆಚ್ಚು ಗೋವುಗಳು ಇರಿಸಲಾಗುತ್ತಿದ್ದು, ಅಲ್ಲಿನ ಗೋವುಗಳು ಅಷ್ಟ ದಿಕ್ಕುಗಳನ್ನು ನೋಡುವಂತಿರಬೇಕು. ಮಧ್ಯದಲ್ಲಿ ಸಂಸ್ಕೃತ ಪಾಠಶಾಲೆ, ಗುರು ಬೋಧನೆ, ಸಂಗೀತ ಕಾರ್ಯಕ್ರಮ, ನಿತ್ಯಪೂಜೆ, ಗೋ ಉತ್ಸವ, ಗೋವುಗಳ ಮಹತ್ವದ ಕುರಿತಾಗಿ ಉಪನ್ಯಾಸ, ಸಂವಾದ, ಚಿತ್ರ ಪ್ರದರ್ಶನ, ಅನ್ನ ದಾಸೋಹ ಕೈಗೊಳ್ಳಲು ಚಿಂತಿಸಲಾಗಿದೆ. 365 ದಿನವೂ ಮಂಟಪದಲ್ಲಿ ಒಂದಿಲ್ಲ ಒಂದು ಕಾರ್ಯಕ್ರಮ ನಡೆಯುವಂತಾಗಬೇಕು.

Advertisement

ಪಾಲಕರು ತಮ್ಮ ಹಾಗೂ ಮಕ್ಕಳ ಜನ್ಮದಿನಾಚರಣೆ, ವಿವಾಹ ವಾರ್ಷಿಕೋತ್ಸವ, ನಾಮಕರಣ, ಹರಕೆ ಕಟ್ಟುವುದು ಸೇರಿದಂತೆ ವಿವಿಧ ಶುಭ ಕಾರ್ಯಕ್ರಮಗಳನ್ನು ಮಂಟಪದಲ್ಲಿಯೇ ಆಚರಿಸಿಕೊಳ್ಳುವಂತಾಗಬೇಕು. ಬ್ರಾಹ್ಮಿ ಮಹೂರ್ತದಲ್ಲಿ ಗೋವುಗಳ ಮುಂದೆ ಕೂಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆ ಆಗಲಿವೆ ಎಂಬ ಅನಿಸಿಕೆ ಇದ್ದು, ಇದನ್ನು ಕೈಗೊಳ್ಳಲು ಯೋಜಿಸಲಾಗಿದೆ. ಯುವಕರು ಸೇರಿದಂತೆ ಯಾರಾದರೂ ಒಂದೆರಡು ದಿನಕ್ಕೆ ಗೋವಿನ ಸೇವೆ ಮಾಡಲು ಇಲ್ಲವೆ ಮಂಟಪದಲ್ಲಿ ತಂಗಲು ಆಗಮಿಸಲು ಬಯಸಿದರೆ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲು ಸಹ ಯೋಜಿಸಲಾಗಿದೆ. ಗೋವಿನ ಸೋಮಯಾಗ ಮಂಟಪ ನಿರ್ಮಾಣಕ್ಕೆ ನೆರವಾಗಲು ಸುಮಾರು 100ಕ್ಕೂ ಹೆಚ್ಚು ಜನರು ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಸವದತ್ತಿಯಲ್ಲಿ ಅಪರೂಪದ ಮಂಟಪವೊಂದು ತಲೆಎತ್ತಲಿದೆ.

Advertisement

Udayavani is now on Telegram. Click here to join our channel and stay updated with the latest news.

Next