ಕಲಬುರಗಿ: ಕೋವಿಡ್ ವಾರಿಯರ್ಸ್ ಗೆ ಪ್ರಥಮ ಹಂತದಲ್ಲಿ ಲಸಿಕೆ ನೀಡುವ ನಿಟ್ಟಿನಲ್ಲಿ ಜಿಲ್ಲೆಗೆ ಗುರುವಾರ 29,500 ಡೋಸ್ ಕೋವಿಶೀಲ್ಡ್ ಲಸಿಕೆ ಆಗಮಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳಿಗೆ ಹಂಚಿಕೆಯಾಗಲಿದೆ.
ಬೆಂಗಳೂರಿನಿಂದ ವಾಹನದಲ್ಲಿ ಕೋವಿಶೀಲ್ಡ್ ಲಸಿಕೆ ಪೊಲೀಸ್ ಭದ್ರತೆಯಲ್ಲಿ ಕಲಬುರಗಿಗೆ ತರಲಾಗಿದ್ದು, ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಕೋಲ್ಡ್ ರೂಮ್ ನಲ್ಲಿ ದಾಸ್ತಾನು ಮಾಡಲಾಯಿತು.
ಬೆಂಗಳೂರು ಪೊಲೀಸ್ ಭದ್ರತೆಯಲ್ಲಿ ಬಂದ ಲಸಿಕೆಯನ್ನು ಯಾದಗಿರಿ ಜಿಲ್ಲಾ ಗಡಿಯಲ್ಲಿ ಕಲಬುರಗಿ ಪೊಲೀಸರ ಭದ್ರತೆ ಒದಗಿಸಿ ವ್ಯಾಕ್ಸಿನ್ ತರಲಾಯಿತು. ಡಿಎಚ್ಒ ಡಾ.ರಾಜಶೇಖರ್ ಹಾಗೂ ಹಿರಿಯ ಅಧಿಕಾರಿಗಳು ಸ್ವೀಕರಿಸಿದರು.
ಇದನ್ನೂ ಓದಿ:ಹಣೆಯಲ್ಲಿ ಬರೆದಿದ್ದರೆ ಸಚಿವ ಸ್ಥಾನ ಸಿಗುತ್ತದೆ, ಇಲ್ಲಾಂದ್ರೆ ಇಲ್ಲ: ಮುನಿರತ್ನ
ಒಟ್ಟು 29,500 ಡೋಸ್ ಕೋವಿಶೀಲ್ಡ್ ಲಸಿಕೆಯಲ್ಲಿ ಕಲಬುರಗಿ ಜಿಲ್ಲೆಗೆ 12 ಸಾವಿರ ಡೋಸ್, ರಾಯಚೂರ ಜಿಲ್ಲೆಗೆ 9 ಸಾವಿರ, ಬೀದರ್ ಜಿಲ್ಲೆಗೆ 5,500 ಡೋಸ್ ಮತ್ತು ಯಾದಗಿರಿ ಜಿಲ್ಲೆಗೆ 3 ಸಾವಿರ ಡೋಸ್ ಹಂಚಿಕೆಯಾಗಿದೆ. ಇಂದು ಸಂಜೆ ವೇಳೆಗೆ ಮೂರು ಜಿಲ್ಲೆಗೆ ಲಸಿಕೆ ರವಾನೆಯಾಗಲಿದೆ.
ಕೋವಿಡ್ ವಿರುದ್ಧದ ಮುಂಚೂಣಿ ಹೋರಾಟಗಾರರಾದ ಆರೋಗ್ಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಲಸಿಕೆ ಫಲಾನುಭವಿಗಳಾಗಿದ್ದಾರೆ. ಜಿಲ್ಲೆಯಲ್ಲಿ 21,774 ವಾರಿಯರ್ಸ್ ವಿವರ ಕೋವಿಡ್ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದರು.