ಹುಮನಾಬಾದ: ಕೊವೀಡ್ ಮಹಾ ಮಾರಿಯಿಂದ ಹುಮನಾಬಾದ ಹಾಗೂ ಚಿಟಗುಪ್ಪ ತಾಲೂಕಿನ ಜನರು ತತ್ತರಿಸುತ್ತಿದ್ದಾರೆ. ಪ್ರತಿನಿತ್ಯ ಸರಾಸರಿ 10ರಿಂದ 30 ಪ್ರಕರಣಗಳು ಪತ್ತೆಯಾಗುತ್ತಿದ್ದು, ಜನರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲದೆ, ಕುಲದೇವ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳ ಬಾಗಿಲು ಮುಚ್ಚಿಕೊಂಡಿವೆ. ಕೊರೊನಾ ಪಾಸಿಟಿವ್ ಪತ್ತೆಯಾಗುವ ವ್ಯಕ್ತಿಗಳಿಗೆ ಹುಮನಾಬಾದ, ಚಿಟಗುಪ್ಪ, ಮನ್ನಾಎಖೇಳ್ಳಿ, ಹಳ್ಳಿಖೇಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿಟಗುಪ್ಪ ಹೊರತುಪಡಿಸಿ ಉಳಿದ ಎಲ್ಲ ಆಸ್ಪತ್ರೆಗಳಲ್ಲಿ ಸದ್ಯ ಆಕ್ಸಿಜನ್ ವ್ಯವಸ್ಥೆಗಳಿವೆ. ಹೆಚ್ಚಿನ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಬೀದರ ಬ್ರಿಮ್ಸ್ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಲಾಗುತ್ತಿದೆ. ಹುಮನಾಬಾದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ಕೇಂದ್ರ ತೆರೆಯಲಾಗಿದ್ದು, ಒಟ್ಟು 50 ಬೆಡ್‌ಗಳ ವ್ಯವಸ್ಥೆಯಿದೆ. ಈ ಪೈಕಿ 28 ಬೆಡ್‌ಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಐಸಿಯು ಘಟಕವೂ ಲಭ್ಯವಿದ್ದು, 5 ವೆಂಟಿಲೇಟರ್‌ಗಳ ವ್ಯವಸ್ಥೆ ಇಲ್ಲಿದೆ.
ಆದರೆ, ಐಸಿಯು ಘಟಕದ ನೂರಿತ ಸಿಬ್ಬಂದಿ ಅವಶ್ಯಕತೆ ಇಲ್ಲಿದ್ದು, ಎರೆಡು ದಿನಗಳಲ್ಲಿ ಸಿಬ್ಬಂದಿ ಭರ್ತಿ ಮಾಡುವ ಕಾರ್ಯವೂ ನಡೆಯಲ್ಲಿದೆ. ಪ್ರತಿನಿತ್ಯ 100ಕ್ಕೂ ಅಧಿಕ ಜನರ ಪರೀಕ್ಷೆ ನಡೆಸುತ್ತಿದ್ದು, ಪ್ರತಿನಿತ್ಯ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದಾಗಿ ಕೆಲವರು ಒತ್ತಾಯಿಸಿ ಬೇರೆ ಕಡೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ. ಉಳಿದಂತೆ ಗಂಭೀರವಲ್ಲದ ಪ್ರಕರಣಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ| ನಾಗನಾಥ ಹುಲಸೂರೆ ಮಾಹಿತಿ ನೀಡಿದ್ದಾರೆ.
ಎಂಎಲ್‌ಸಿ ಭೇಟಿ: ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ ಭೇಟಿ ನೀಡಿ ಆಸ್ಪತ್ರೆಯಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರಿ ಆಸ್ಪತ್ರೆಯಿಂದ ರೋಗಿಗಳನ್ನು ಬೇರೆ ಕಡೆಗೆ ಕಳುಹಿಸಬೇಡಿ. ಸೂಕ್ತ ವ್ಯವಸ್ಥೆ ಕಲ್ಪಿಸಿಕೊಂಡು ಇಲ್ಲಿಯೇ ಚಿಕಿತ್ಸೆ ನೀಡುವ ಕೆಲಸ ಆಗಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್‌ಗಳು ಭರ್ತಿಯಾದರೆ ನಮ್ಮ ರಾಜ ರಾಜೇಶ್ವರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ 50 ಬೆಡ್‌ಗಳ ಕೊವೀಡ್ ಕೇರ್ ಕೇಂದ್ರ ಸ್ಥಾಪಿಸಿಕೊಡುತ್ತೇನೆ. ನೂರಿತ ಸಿಬ್ಬಂದಿ ನೇಮಕ ಮಾಡಿಕೊಂಡು ನಮ್ಮ ಭಾಗದವರಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದರು.
ಕೋವಿಡ್ ಪಾಸಿಟಿವ್ ಪತ್ತೆಯಾದ ವ್ಯಕ್ತಿಗಳಿಗೆ ಹುಮನಾಬಾದ, ಚಿಟಗುಪ್ಪ, ಮನ್ನಾಎಖೇಳ್ಳಿ ಹಾಗೂ ಹಳ್ಳಿಖೇಡ(ಬಿ) ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಬೆಡ್‌ಗಳ ಕೊರತೆ ಸದ್ಯಕ್ಕೆ ಇಲ್ಲ. ಆದರೂ ಮುಂಜಾಗೃತವಾಗಿ ಹುಮನಾಬಾದ ರಾಜ ರಾಜೇಶ್ವರಿ ಕಾಲೇಜಿನಲ್ಲಿ 50 ಬೆಡ್, ಚಿಟಗುಪ್ಪ ಬಿಸಿಎಂ ವಸತಿ ನಿಲಯದಲ್ಲಿ 50 ಬೆಡ್‌ಗಳ ಕೊವೀಡ್ ಕೇರ್ ಸೆಂಟರ್ ತೆರೆಯಲಾಗುತ್ತಿದೆ. ಹುಮನಾಬಾದ ಆಸ್ಪತ್ರೆಯಲ್ಲಿ ಐಸಿಯು ಘಟಕ ಇದ್ದು, 5 ವೆಂಟಿಲೇಟರ್‌ಗಳ ವ್ಯವಸ್ಥೆಯೂ ಇದೆ.
ಶಿವಕುಮಾರ ಸಿದ್ದೇಶ್ವರ,
ತಾಲೂಕು ಆರೋಗ್ಯಾಧಿಕಾರಿ
ಪ್ರತಿನಿತ್ಯ ನೂರಾರು ಜನರಿಗೆ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಯಾವುದೇ ಲಕ್ಷಣಗಳು ಇಲ್ಲದ ವ್ಯಕ್ತಿಗಳಿಗೆ ಔಷಧಿಗಳು ನೀಡಿ ಹೋಂ ಐಸೋಲೇಷನ್‌ಗೆ ಸೂಚಿಸಲಾಗುತ್ತಿದೆ. ಲಕ್ಷಣಗಳು ಕಂಡು ಬರುವ ವ್ಯಕ್ತಿಗಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಅನಾರೋಗ್ಯ ಸಮಸ್ಯೆ ಉಂಟಾದಲ್ಲಿ ಬ್ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳು ಇವೆ. ರಕ್ತ ಪರೀಕ್ಷೆ, ಪ್ರತ್ಯೇಕ ಎಕ್ಸರೆ ಘಟಕ ಸೇರಿದಂತೆ ಎಲ್ಲ ಸೌಕರ್ಯಗಳು ಆಸ್ಪತ್ರೆಯಲ್ಲಿ ಇವೆ. ಸಾರ್ವಜನಿಕರು ಆಯವುದಕ್ಕೂ ಆತಂಕ ಪಡುವ ಅವಶ್ಯಕತೆ ಇಲ್ಲ. ನೂರಿತ ವೈದ್ಯರು ಚಿಕಿತ್ಸೆಗೆ ಶ್ರಮಿಸುತ್ತಿದ್ದಾರೆ.
ಡಾ| ನಾಗನಾಥ ಹುಲಸೂರೆ,
ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ
*ದುರ್ಯೋಧನ ಹೂಗಾರ