Advertisement

2021: ಜಗತ್ತನ್ನೇ ಕಾಡಿದ ಕೋವಿಡ್ ಆತಂಕದ ನಡುವೆ ಎಲ್ಲವನ್ನೂ ಮೀರಿ ಬದುಕು ಕಟ್ಟಿಕೊಳ್ಳಬೇಕು…

06:49 PM Dec 31, 2020 | Team Udayavani |

ಮತ್ತೆ ಇಡೀ ಜಗತ್ತು ಹೊಸ ವರ್ಷದ ಸಂಭ್ರಮದಲ್ಲಿದೆ. ಹೊಸ ವರ್ಷ ಎಲ್ಲರಿಗೂ ಸುಖ, ಶಾಂತಿ ತರಲಿ. ಆದರೆ 2020ರ ಕೋವಿಡ್ ಕಾಲ ನಮಗೊಂದು ಪಾಠವಾಗಿದೆ. 2020ನೇ ಇಸವಿ ಹಿಂದೆಂದೂ ಕಾಣದ ರೀತಿಯಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳಿಗೆ ಸಾಕ್ಷಿಯಾಗಿದೆ. ಅದಕ್ಕೆ ಕಾರಣ ಜಗತ್ತನ್ನೇ ಕಾಡಿದ “ಕೋವಿಡ್”!

Advertisement

ಕೋವಿಡ್ ರೋಗಾಣು ಜಗತ್ತಿನಲ್ಲಿ ಕಾಣಿಸಿಕೊಂಡಾಗ ಜಗತ್ತಿನ ಹೆಚ್ಚಿನೆಲ್ಲಾ ದೇಶಗಳು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಲ್ಲಿ ಮಾಡಿದ ವಿಳಂಬಕ್ಕೆ ಭಾರೀ ಬೆಲೆ ತೆರಬೇಕಾಯಿತು. ಇದಕ್ಕೆ ಕಾರಣ ಜಗತ್ತಿನ ಹಾವ ದೇಶವೂ 1919ರ ನಂತರ ಈ ರೀತಿಯ ಸಾಂಕ್ರಾಮಿಕ ರೋಗವನ್ನು ಎದುರಿಸಿದ ಅನುಭವ ಇಲ್ಲದಿರುವುದೇ ಆಗಿದೆ. ಮತ್ತೊಂದು ಕಾರನ ಪ್ರಜಾಪ್ರಭುತ್ವ ದೇಶಗಳು ತಕ್ಷಣಕ್ಕೆ ತೀವ್ರವಾದ ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಂಡರೆ ಅಪಾಯದ ತೀವ್ರತೆಯ ಅರಿವಲ್ಲದ ಪ್ರಜೆಗಳು ಅಂತಹ ತೀವ್ರವಾದ ಪ್ರತಿಬಂಧಕ ಕ್ರಮಗಳಿಂದ ಸರ್ಕಾರದ ವಿರುದ್ಧ ತಿರುಗಿ ಬೀಳಬಹುದು ಎನ್ನುವ ಆತಂಕದಿಂದ ಪರಿಸ್ಥಿತಿ ಉಲ್ಬಣಗೊಳ್ಳುವವರೆಗೆ ತೀವ್ರ ಕ್ರಮ ತೆಗೆದುಕೊಳ್ಳುವುದಕ್ಕೆ ಮುಂದಾಗಲಿಲ್ಲ.

ಒಂದೊಮ್ಮೆ ಕೋವಿಡ್ ರೋಗಾಣು ಬೇರೆ, ಬೇರೆ ದೇಶಗಳಲ್ಲಿ ಕಾಣಿಸಿಕೊಂಡ ತಕ್ಷಣ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ನಿರ್ಬಂಧ ಹೇರಿದ್ದರೆ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ವಿಮಾನ ನಿಲ್ದಾಣದ ಸುತ್ತಮುತ್ತ ಕ್ವಾರಂಟೈನ್ ಮಾಡಿದ್ದರೆ ಜಗತ್ತು ಈ ರೀತಿಯಲ್ಲಿ ಭಾರೀ ಆರ್ಥಿಕ ನಷ್ಟ ಅನುಭವಿಸುವುದರಿಂದ ಬಚಾವ್ ಆಗುತ್ತಿತ್ತು. ಈ ವಿಷಯವನ್ನು ಮತ್ತಷ್ಟು ಚರ್ಚೆ ಮಾಡುವ ಕಾಲ ಈಗ ಮೀರಿ ಹೋಗಿದೆ.

ಆದರೆ ಕೋವಿಡ್ ನಿಂದ ಜಗತ್ತಿಗೆ ಆದ ನಷ್ಟ ಊಹಿಸಲೂ ಸಾಧ್ಯವಿಲ್ಲದಷ್ಟು, ಅನೇಕ ದೇಶಗಳು ಇನ್ನೂ ಲಾಕ್ ಡೌನ್ ನಿರ್ಬಂಧದಲ್ಲಿಯೇ ಇದೆ. ಭಾರತದ ದೃಷ್ಟಿಯಲ್ಲಿ ಹೇಳುವುದಿದ್ದರೆ, ಶ್ರೀಮಂತರಿಂದ ಹಿಡಿದು ಬಡಕುಟುಂಬದವರೆಗೂ ಕಷ್ಟ ಅನುಭವಿಸುವಂತಾಯಿತು. ಶ್ರೀಮಂತರು ಕೂಡಾ ಬ್ಯಾಂಕಿನಿಂದ ಸಾಲ ಪಡೆದೇ ತಮ್ಮ ವ್ಯವಹಾರ ಮಾಡುವವರೇ ಸುಮಾರು ಐದಾರು ತಿಂಗಳ ಕಾಲ ಉತ್ಪಾದನೆಯೇ ನಿಂತು ಹೋಗಿದ್ದು, ಆ ಸಮಯದಲ್ಲಿ ಬ್ಯಾಂಕಿನ ಸಾಲದ ಕಂತು ಕಟ್ಟುವುದಕ್ಕೆ ವಿನಾಯಿತಿ ನೀಡಿದರೂ ಹಾಗೆ ವಿನಾಯಿತಿ ನೀಡಿದ ಸಾಲದ ಕಂತುಗಳನ್ನು ಮುಂದೆ ಹೊಂದಾಣಿಕೆ ಮಾಡಿಕೊಂಡು ಕಟ್ಟಬೇಕಾಗಿರುವುದರಿಂದ ಈಗ ಅದರ ಸಮಸ್ಯೆ ಎದುರಿಸುವುದು ಪ್ರಾರಂಭವಾಗುತ್ತದೆ. ಬಡವರು ಕೂಲಿ ಮಾಡಿಕೊಂಡು ಬದುಕುವವರಿಗೂ ಸುಮಾರು ನಾಲ್ಕೈದು ತಿಂಗಳು ಕೆಲಸವೇ ಇಲ್ಲದೇ ಸಮಸ್ಯೆ ಎದುರಿಸಬೇಕಾಯಿತು. ಮಧ್ಯಮ ವರ್ಗದ ವ್ಯಾಪಾರಸ್ಥರು ಅತೀ ಹೆಚ್ಚು ತೊಂದರೆಗೀಡಾದವರು, ಹೋಟೆಲ್ ಉದ್ಯಮದಲ್ಲಿ ಕೆಲವರು ವ್ಯವಹಾರವನ್ನೇ ಕೈ ಬಿಟ್ಟ ನಿದರ್ಶನಗಳಿವೆ. ವ್ಯವಹಾರ ಪ್ರಾರಂಭವಾದರೂ ಸಹಜ ಸ್ಥಿತಿಗೆ ಬರಲು ಇನ್ನೂ ಕೆಲವು ಸಮಯ ಹಿಡಿಯಬಹುದು.

ನ್ಯಾಯಾಲಯಗಳು ಒಂದು ರೀತಿಯಲ್ಲಿ ಬಾಗಿಲು ಮುಚ್ಚೊಕೊಂಡು ಕುಳಿತಂತೆ ಭಾಸವಾಗುತ್ತಿದೆ. ಊರೆಲ್ಲ ಸಹಜ ಸ್ಥಿತಿಗೆ ಬಂದರೂ ನ್ಯಾಯಾಲಯಗಳು ಇನ್ನೂ ಪೂರ್ಣ ಬಾಗಿಲು ತೆರೆಯಲಿಲ್ಲ. ಏತನ್ಮಧ್ಯೆ ಈ ರೀತಿಯ ವಿಷಯ ಸ್ಥಿತಿಯನ್ನು ಕೂಡ ಸರಕಾರದಲ್ಲಿರುವವರು ತಮ್ಮ ಲಾಭಕ್ಕೆ ಉಪಯೋಗಿಸಿಕೊಂಡಿದ್ದಾರೆನ್ನುವ ಆರೋಪ ವ್ಯಾಪಕವಾಗಿ ಕೇಳಿ ಬಂದಿತ್ತು. ಸ್ಯಾನಿಟೈಸರ್, ರಕ್ಷಣಾ ಕಿಟ್ ಮತ್ತು ಇತರ ಸಲಕರಣೆಗಳನ್ನು ಖರೀದಿಯಲ್ಲಿಯೂ ಆರೋಪ ಹರಡಿತ್ತು. ಆ್ಯಂಬುಲೆನ್ಸ್ ಹಾಗೂ ಸೀಲ್ ಡೌನ್ ನಲ್ಲಿಯೂ ಇದೇ ಆರೋಪ ಸುಳಿದಾಡಿತ್ತು. ಇದು ಸತ್ಯ ಎಂದಾದರೆ ಇದನ್ನು ದೇವರೂ ಕೂಡಾ ಮೆಚ್ಚಲಾರ.

Advertisement

ಇನ್ನು ಸಮಾಜದಲ್ಲಿ ಒಂದು ಹಂತದಲ್ಲಿ ಜೀವನವೇ ಒಂದು ರೀತಿಯಲ್ಲಿ ಅತಂತ್ರ ಯಾವಾಗ ಏನಾಗಬಹುದೆಂದು ಊಹಿಸಲೂ ಸಾಧ್ಯವಿಲ್ಲವೆಂದು ನಾವು ಜಾತಿ, ಧರ್ಮ ಇತ್ಯಾದಿ ಕಾರಣದಿಂದ ಹೊಡೆದಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎನ್ನುವ ಭಾವನೆ ವ್ಯಾಪಕವಾಗಿ ಬಂದಿತ್ತು. ಆದರೆ ಇದು ತಾತ್ಕಾಲಿಕ ಮತ್ತು ನಾವು ಇದನ್ನು ಮೀರಿ ಬದುಕುವ ಹಂತದಿಂದ ದೂರ ಬಂದಿದ್ದೇವೆ ಎನ್ನುವುದು ಇತ್ತೀಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸಾಬೀತಾಗಿದೆ. ಮನುಷ್ಯರಾದ ನಾವು ನಮ್ಮ ಕ್ರೋಧ, ಮದ, ಮತ್ಸರಗಳನ್ನು ತೊರೆಯುವ ಕಾಲ ಯಾವತ್ತೂ ಬರುವಂತೆ ಕಾಣುತ್ತಿಲ್ಲ. ಇನ್ನಾದರು ಹಿಂದಿನ ಪಾಠ ನಮಗೆ ಹೊಸ ವರ್ಷಕ್ಕೆ ದಾರಿ ದೀಪವಾಗಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

ಟಿಬಿ ಶೆಟ್ಟಿ ವಕೀಲರು

ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next