Advertisement

ಮೂರು ತಾಸು ಮಳೆಯಲ್ಲೇ ಅನಾಥವಾಗಿದ್ದ ಶವ!

02:28 AM Jul 04, 2020 | Sriram |

ಬೆಂಗಳೂರು: ಕೋವಿಡ್ ದೃಢಪಟ್ಟ ಕೆಲವೇ ತಾಸುಗಳ ಅಂತರದಲ್ಲಿ ಹಿರಿಯ ನಾಗರಿಕರೊಬ್ಬರು ರಸ್ತೆಯಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ಶುಕ್ರವಾರ ನಡೆದಿದೆ.

Advertisement

ಆದರೆ ಇವರ ಶವ ಮಳೆಯಲ್ಲೇ ಸುಮಾರು ಮೂರು ತಾಸು ರಸ್ತೆ ಯಲ್ಲಿ ಬಿದ್ದಿದ್ದರೂ ಆ್ಯಂಬುಲೆನ್ಸ್‌ ಸಹಿತ ಯಾರೊಬ್ಬರೂ ನೆರವಿಗೆ ಬರಲಿಲ್ಲ. ಹನುಮಂತನಗರದಲ್ಲಿ ಈ ಘಟನೆ ನಡೆದಿದೆ. ಸೋಂಕು ದೃಢಪಟ್ಟ 65 ವರ್ಷದ ವ್ಯಕ್ತಿ ಶುಕ್ರವಾರ ಮಧ್ಯಾಹ್ನ ಆ್ಯಂಬುಲೆನ್ಸ್‌ಗಾಗಿ ಕರೆ ಮಾಡಿದ್ದಾರೆ.

ಬಾರದಿರುವುದರಿಂದ ಆಟೋ ಹಿಡಿದು ಆಸ್ಪತ್ರೆಗೆ ಹೋಗಲು ಸಿದ್ಧರಾಗಿ ಕೊಡೆ ಹಿಡಿದು ಹೊರಟಿದ್ದರು.

3.35ಕ್ಕೆ ಮನೆಯಿಂದ ಹೊರಟಿದ್ದು, 3.45ಕ್ಕೆ ಕುಸಿದು ಬಿದ್ದು ಸಾವನ್ನಪ್ಪಿದರು. ಸೋಂಕು ಇರುವುದರಿಂದ ಸ್ಥಳೀಯರು ಮೃತದೇಹ ಮುಟ್ಟಲಿಲ್ಲ. ಆ್ಯಂಬುಲೆನ್ಸ್‌ ಸಹಾಯವಾಣಿ, ಅಧಿಕಾರಿಗಳಿಗೆ ಕರೆ ಮಾಡಿದರೂ ಬರಲಿಲ್ಲ. ಮೃತ ದೇಹದ ಮೇಲೆ ಪ್ಲಾಸ್ಟಿಕ್‌ ಕವರ್‌ ಹಾಕಿದ್ದರು. ಸಂಜೆ 7.30ಕ್ಕೆ ಆ್ಯಂಬುಲೆನ್ಸ್‌ ಬಂದಿದ್ದು, ಅದುವರೆಗೂ ಮೃತದೇಹ ಮಳೆಯಲ್ಲಿಯೇ ಬಿದ್ದಿತ್ತು ಎಂದು ಸ್ಥಳೀಯರೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

“ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್‌ ಬಂದಿದ್ದರೆ, ಪತಿ ಬದುಕುತ್ತಿದ್ದರು. ಅಧಿಕಾರಿಗಳ ಲೋಪದಿಂದಲೇ ಅವರು ಮೃತಪಟ್ಟಿದ್ದಾರೆ’ ಎಂದು ಸೋಂಕುಪೀಡಿತ ವ್ಯಕ್ತಿಯ ಪತ್ನಿ ಆರೋಪಿಸಿದ್ದಾರೆ.

Advertisement

ತನಿಖೆಗೆ ಬಿಬಿಎಂಪಿಯ ಆಡಳಿತ ವಿಭಾಗದ ಉಪ ಆಯುಕ್ತ ಲಿಂಗಮೂರ್ತಿ ನೇತೃತ್ವದ ತಂಡ ರಚಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.

ಮೃತ ವ್ಯಕ್ತಿಗೆ ಮಧುಮೇಹ, ರಕ್ತದೊತ್ತಡ
ಸೋಂಕುಪೀಡಿತ ವ್ಯಕ್ತಿಯು ಮಧು ಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದರು. ಈ ಸಂಬಂಧ ನಿರಂತರ ಚಿಕಿತ್ಸೆ ಪಡೆಯುತ್ತಿದ್ದರು. ಆಟೋ ಚಾಲಕರಾಗಿದ್ದ ಮೃತರು ಕಾರಣಾಂತರಗಳಿಂದ ಆಟೋ ಮಾರಿದ್ದರು. ಜೀವನ ನಿರ್ವಹಣೆ ಕಷ್ಟ ವಾದದ್ದರಿಂದ ಹೊಸ ಆಟೋ ಖರೀದಿಗೆ ನಾಲ್ಕು ತಿಂಗಳ ಹಿಂದೆಯೇ ಲಕ್ಷ ರೂ. ಹೊಂದಿಸಿ ಕೊಂಡಿದ್ದರು. ಆಟೋ ಖರೀದಿಸಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್‌ ಆಗಿದ್ದು, ಕೋವಿಡ್ ಮುಗಿದ ಅನಂತರ ಆಟೋ ಖರೀದಿಸಿದರಾಯ್ತು ಅಂದು ಕೊಂಡಿದ್ದರು ಎಂದು ಮೃತವ್ಯಕ್ತಿಯ ಸ್ನೇಹಿತರೊಬ್ಬರು ವಿವರಿಸಿದ್ದಾರೆ.

ಆಟೋ ಚಾಲಕರಾಗಿದ್ದ ಸೋಂಕು ಪೀಡಿತ ವ್ಯಕ್ತಿಗೆ ಉಸಿರಾಟದ ತೊಂದರೆ ಉಂಟಾಗಿದ್ದರಿಂದ ಎರಡು ದಿನಗಳ ಹಿಂದೆ ಪರೀಕ್ಷೆಗೆ ಒಳಗಾಗಿದ್ದಾರೆ. ಶುಕ್ರ ವಾರ ಮಧ್ಯಾಹ್ನ ವರದಿ ಬಂದಿದ್ದು, ಆ್ಯಂಬುಲೆನ್ಸ್‌ಗಾಗಿ ಕರೆ ಮಾಡಿದ್ದರು. ಆದರೆ ಆ್ಯಂಬುಲೆನ್ಸ್‌ ಬಾರದ ಕಾರಣ 15 ದಿನಕ್ಕೆ ಆಗುವಷ್ಟು ಬಟ್ಟೆಗಳನ್ನು ಬ್ಯಾಗ್‌ಗೆ ಹಾಕಿಕೊಂಡು ಆಟೋದಲ್ಲಿ ಹೋಗಲು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ದಿಢೀರ್‌ ಕುಸಿದು ಬಿದ್ದಿದ್ದರು ಎಂದು ಸ್ಥಳೀಯರೊಬ್ಬರು ತಿಳಿಸಿದರು.

ನಡುರಸ್ತೆಯಲ್ಲಿ ಸೋಂಕುಪೀಡಿತ ವ್ಯಕ್ತಿಯು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ರೀತಿ ನಡೆಯದಂತೆ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ.
– ಆರ್‌. ಅಶೋಕ್‌, ಕಂದಾಯ ಸಚಿವರು

 

Advertisement

Udayavani is now on Telegram. Click here to join our channel and stay updated with the latest news.

Next