ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೋವಿಡ್ ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆನಡೆಸಿ, ಕೆಲವೊಂದು ಹಬ್ಬಗಳನ್ನು ಆಚರಿಸಲು ನಿಷೇಧಿಸಿ ಪರಿಷ್ಕೃತ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಹಬ್ಬವನ್ನು ಸರಳವಾಗಿ ಆಚರಿಸಿ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮಂಚೇನಹಳ್ಳಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿಮಾತನಾಡಿ, ಮಹಾರಾಷ್ಟ್ರದಲ್ಲಿ 35 ಸಾವಿರ ಮಂದಿಗೆ ಕೋವಿಡ್ ವ್ಯಾಪಿಸಿದೆ. ಕೆಲವೊಂದು ನಗರಗಳನ್ನು ಲಾಕ್‌ಡೌನ್ ಮಾಡಲಾಗಿದೆ. ರಾಜ್ಯದ ಜನರ ಆರೋಗ್ಯದ ಹಿತದೃಷ್ಟಿಯಿಂದ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ, ಮಾರ್ಗಸೂಚಿ ಹೊರಡಿಸಲಾಗಿದೆ. ಜನರು ಮುಂದಿನ ಎರಡು ತಿಂಗಳ ಕಾಲ ಹಬ್ಬ- ಜಾತ್ರೆಗಳನ್ನು ನಿಲ್ಲಿಸಿ, ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಸೋಂಕಿಗೆ ಉದಾಸೀನ ಬೇಡ: ಸಮಾಜದಲ್ಲಿ ಪ್ರತಿಯೊಬ್ಬರ ಜೀವ ಅಮೂಲ್ಯ. ಮನೆಯಲ್ಲಿರುವ ಹಿರಿಯ ಮತ್ತು ಕಿರಿಯರ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಸೋಂಕಿನ ಪ್ರಭಾವದಿಂದ ನಮ್ಮ ಕಣ್ಣೆದುರು ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ನಾಗರಿಕರು ಸೋಂಕಿನ ಬಗ್ಗೆ ಉದಾಸೀನ ಮಾಡುವುದು ಬೇಡ. ಸ್ವಯಂ ಪ್ರೇರಿತ ರಾಗಿ ಕಟ್ಟುನಿಟ್ಟಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು.
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ: ಪ್ರಧಾನಿ ಮೋದಿ ನಾಯಕತ್ವದಿಂದ 10 ತಿಂಗಳ ಅವಧಿಯಲ್ಲಿ ಕೋವಿಡ್ ಲಸಿಕೆ ಬಂದಿದೆ. 45 ವರ್ಷ ಮೇಲ್ಪಟ್ಟ ನಾಗರಿಕರು ಲಸಿಕೆ ಪಡೆದುಕೊಂಡು ಆರೋಗ್ಯಕಾಪಾಡಿಕೊಳ್ಳಬೇಕು. ನೆರೆಯ ಕೇರಳ, ಮಹಾರಾಷ್ಟ್ರ, ಪಂಜಾಬ್ ಹೀಗೆ ಬೇರೆ ರಾಜ್ಯದಿಂದ ಬರುವ ಪ್ರವಾಸಿಗರಿಗೆ ಆರೋಗ್ಯ ತಪಾಸಣೆ ಮಾಡುತ್ತಿದ್ದೇವೆ. ಇತ್ತೀಚಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ಹೆಚ್ಚಾಗಿರುವ ಕುರಿತು ಪರಿಶೀಲಿಸಲಾಗಿ, ಶೇ.60ರಷ್ಟು ಹೊರರಾಜ್ಯಗಳಿಂದ ಬಂದ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿಹೊರರಾಜ್ಯಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ವ್ಯಕ್ತಿಗಳ ಆರೋಗ್ಯ ತಪಾಸಣೆ ಕಡ್ಡಾಯ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನಾರಾಯಣಸ್ವಾಮಿ, ತಾಪಂ ಸದಸ್ಯ ಬಾಲಕೃಷ್ಣ, ಕೋಚಿಮುಲ್ ನಿರ್ದೇಶಕ ಸುಬ್ಟಾರೆಡ್ಡಿ, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಹನುಮೇಗೌಡ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷಜಿ.ಆರ್.ರಾಜಶೇಖರ್, ಮುಖಂಡರಾದ ಮಂಚೇನಹಳ್ಳಿರಿಯಾಝ್, ಯುವ ಮುಖಂಡ ಯತೀಶ್‌ರೆಡ್ಡಿ, ಮಧುಸುಧನ್‌ರೆಡ್ಡಿ, ಚಿಕ್ಕಬಳ್ಳಾಪುರ ನಗರ ಬಿಜೆಪಿ ಮಂಡಲ ಉಪಾಧ್ಯಕ್ಷ ಆನಂದ್, ಮುಖಂಡ ರಿಯಾಝ್ ಉಪಸ್ಥಿತರಿದ್ದರು.