ನವದೆಹಲಿ: ಜಗತ್ತಿನಾದ್ಯಂತ ಕೋವಿಡ್-19 ತನ್ನ ಜಾಲವನ್ನು ವಿಸ್ತರಿಸುತ್ತಿದ್ದು 4,22,613 ಜನರು ಸೋಂಕು ಪೀಡಿತರಾಗಿದ್ದಾರೆ. ದುರಂತವೆಂದರೇ ಸಾವನ್ನಪ್ಪುವವರ ಸಂಖ್ಯೆ ಕೂಡ ದಿನೇ ದಿನೇ ಏರುತ್ತಿದ್ದು 18,891 ಜನರು ಮೃತರಾಗಿದ್ದಾರೆ.
ಮಂಗಳವಾರ ಒಂದೇ ದಿನ 40,028 ಜನರಿಗೆ ಸೋಂಕು ತಗುಲಿದೆ. ಇಟಲಿಯಲ್ಲಿ ಕೂಡ 743 ಜನರು ಮೃತರಾಗಿದ್ದು, ಹಾಗಾಗಿ ಅದರ ಪ್ರಮಾಣ 6,820 ಕ್ಕೆ ಏರಿಕೆಯಾಗಿದೆ. ಸಮಾಧಾನಕರ ಸಂಗತಿಯೆಂದರೇ ಸೋಂಕು ಪೀಡಿತರಲ್ಲಿ 1,08,879 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಭಾರತದಲ್ಲಿ ಕೂಡ ಈ ವೈರಸ್ ತನ್ನ ಕಬಂಧಬಾಹುವನ್ನು ಚಾಚುತ್ತಿದ್ದು ಮಂಗಳವಾರ 56 ಜನರು ಸೋಂಕು ಪೀಡಿತರಾಗಿದ್ದಾರೆ. ಆ ಮೂಲಕ ಒಟ್ಟಾರೆಯಾಗಿ 560 ಜನರು ವೈರಾಣುವಿಗೆ ತುತ್ತಾಗಿದ್ದಾರೆ. ಮಾತ್ರವಲ್ಲದೆ ಸಾವನ್ನಪ್ಪಿದವರ ಪ್ರಮಾಣ ಕೂಡ 11ಕ್ಕೆ ಏರಿಕೆಯಾಗಿದೆ. ಪ್ರಧಾನಿ ಮೋದಿ ಕೂಡ ಈ ತುರ್ತು ಪರಿಸ್ಥಿತಿಯಲ್ಲಿ ಇಡೀ ದೇಶವನ್ನು ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ.
ಪರಿಣಾಮವಾಗಿ ದೇಶದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಸ್ತಬ್ಧವಾಗಿದೆ. ಜಮ್ಮು ಕಾಶ್ಮೀರ, ತೆಲಂಗಾಣ, ಪಂಜಾಬ್, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ , ಉತ್ತರಪ್ರದೇಶ, ಮಣಿಫುರದಲ್ಲಿ ಹೊಸ ಸೋಂಕು ಪೀಡಿತರು ಆಸ್ಪತ್ರೆಗೆ ದಾಖಲಾಗಿದ್ದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಭಾರತದಲ್ಲಿ ಸೋಮವಾರ ಏಕಾಏಕಿ 99 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.