ಚಂಡೀಗಢ್: ನೇಪಾಳ ಗಡಿಭಾಗದಲ್ಲಿರುವ ಉತ್ತರಪ್ರದೇಶದ ಜಿಲ್ಲೆಯಲ್ಲಿ ಏಪ್ರಿಲ್ 15ರಂದು ನಡೆಯಲಿರುವ ತನ್ನದೇ ಮದುವೆಗಾಗಿ ಊರನ್ನು ತಲುಪುವ ನಿಟ್ಟಿನಲ್ಲಿ 25 ವರ್ಷದ ಯುವಕ ತನ್ನ ಗೆಳೆಯರೊಂದಿಗೆ ಪಂಜಾಬ್ ನ ಲುಧಿಯಾನಾದಿಂದ ಸೈಕಲ್ ನಲ್ಲಿ ಹೊರಟು 850 ಕಿಲೋ ಮೀಟರ್ ದೂರ ಸಾಗಿ ಬಂದರೂ ಕೊನೆಗೆ ಮನೆ ಸೇರುವ ಮುನ್ನ ಬಲ್ ರಾಂಪುರ್ ದಲ್ಲಿರುವ ಕ್ವಾರಂಟೈನ್ ಸೆಂಟರ್ ಸೇರಿರುವ ಘಟನೆ ನಡೆದಿದೆ.
850ಕಿಲೋ ಮೀಟರ್ ದೂರ ಸೈಕಲ್ ನಲ್ಲಿ ಬಂದು ಕ್ವಾರಂಟೈನ್ ಸೆಂಟರ್ ಸೇರಿದ!
ಸುಮಾರು ಒಂದು ವಾರಗಳ ಕಾಲ ಸೋನು ಕುಮಾರ್ ಚೌಹಾಣ್ ತನ್ನ ಮೂವರು ಗೆಳೆಯರೊಂದಿಗೆ ಸೈಕಲ್ ನಲ್ಲಿ ಬರೋಬ್ಬರಿ 850 ಕಿಲೋ ಮೀಟರ್ ದೂರ ಸಾಗಿ ಬಂದಿದ್ದ. ಆದರೆ ಅಷ್ಟೆಲ್ಲಾ ಶ್ರಮ ಪಟ್ಟರೂ ಕೊನೆಗೆ ಈತ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಕ್ವಾರಂಟೈನ್ ಸೆಂಟರ್ ಸೇರುವಂತಾಗಿದೆ. ಈ ಸೋನು ಕುಮಾರ್ ಇನ್ನೇನು 150 ಕಿಲೋ ಮೀಟರ್ ದೂರ ಸಾಗಿದ್ದರೆ ಮಹಾರಾಜ್ ಗಂಜ್ ಜಿಲ್ಲೆಯ ರಸುಲ್ ಪುರ್ ಪಿಪ್ರಾ ಪ್ರದೇಶದಲ್ಲಿರುವ ಮನೆ ಸೇರುತ್ತಿದ್ದ ಎಂದು ವರದಿ ವಿವರಿಸಿದೆ.
ಸೋನು ಕುಮಾರ್ ಲುಧಿಯಾನಾದಲ್ಲಿರುವ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಕೋವಿಡ್ 19 ತಡೆಗಟ್ಟುವ ಹಿನ್ನೆಲೆಯಲ್ಲಿ ಪಂಜಾಬ್ ಸೇರಿದಂತೆ ದೇಶಾದ್ಯಂತ ಮೇ 3ರವರೆಗೆ ಲಾಕ್ ಡೌನ್ ಮುಂದುವರಿಸಲಾಗಿತ್ತು. ಯಾವುದೇ ಸಾರಿಗೆ ಸಂಚಾರದ ವ್ಯವಸ್ಥೆ ಇಲ್ಲದ ನಿಟ್ಟಿನಲ್ಲಿ ಸೋನು ಮತ್ತು ಇತರ ಮೂವರು ಗೆಳೆಯರು ಒಟ್ಟು ಸೇರಿ ಸೈಕಲ್ ನಲ್ಲಿ ಹೊರಟಿದ್ದರು. ಏ.15ರಂದು ಉತ್ತರಪ್ರದೇಶದ ರಸುಲ್ ಪುರ ಮನೆಯಲ್ಲಿ ಸೋನು ಕುಮಾರ್ ವಿವಾಹ ನಿಗದಿಯಾಗಿತ್ತು!
ಸೋನು ಸೇರಿದಂತೆ ನಾಲ್ವರು ಒಂದು ವಾರಗಳ ಕಾಲ ರಾತ್ರಿ, ಹಗಲು ಸೈಕಲ್ ತುಳಿದು 850 ಕಿಲೋ ಮೀಟರ್ ದೂರ ಕ್ರಮಿಸಿದ್ದರು. ಆದರೆ ಭಾನುವಾರ ನಾಲ್ವರು ಬಲ್ ರಾಂಪುರ್ ಜಿಲ್ಲೆ ಪ್ರವೇಶಿಸುತ್ತಿದ್ದಂತೆ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಂಡಿರುವುದಾಗಿ ವರದಿ ತಿಳಿಸಿದೆ. “150 ಕಿಲೋ ಮೀಟರ್ ದೂರ ಸಾಗಿದ್ದರೆ ನಾನು ಮನೆ ತಲುಪುತ್ತಿದ್ದೆ. ಅಲ್ಲಿ ನಿಗದಿತ ದಿನ ಯಾವುದೇ ಆಡಂಬರ ಇಲ್ಲದೆ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರೂ ಕೂಡಾ ನನಗೆ ಮನೆಗೆ ಹೋಗಲು ಅನುಮತಿ ನೀಡಿಲ್ಲ” ಎಂದು ಚೌಹಾಣ್ ಪಿಟಿಐಗೆ ತಿಳಿಸಿದ್ದಾನೆ.
ಏತನ್ಮಧ್ಯೆ ನಮಗೆ ಎಲ್ಲಕ್ಕಿಂತ ಆರೋಗ್ಯ ಮುಖ್ಯ, ಹೀಗಾಗಿ ಮದುವೆ ನಂತರ ನಡೆಯಲಿ ಯಾವುದೇ ತೊಂದರೆ ಇಲ್ಲ ಎಂದು ಬಳಿಕ ಪಿಟಿಐಗೆ ತಿಳಿಸಿರುವುದಾಗಿ ವರದಿ ವಿವರಿಸಿದೆ. ಚೌಹಾಣ್ ಹಾಗೂ ಆತನ ಮೂವರು ಗೆಳೆಯರು ಜಿಲ್ಲೆಯನ್ನು ಪ್ರವೇಶಿಸಿದಾಗ ಅವರನ್ನು ತಡೆದು ಕ್ವಾರಂಟೈನ್ ಸೆಂಟರ್ ಗೆ ಕಳುಹಿಸಲಾಗಿದೆ ಎಂದು ಬಲ್ ರಾಂಪುರ್ ಎಸ್ಪಿ ದೇವರಾಜನ್ ವರ್ಮಾ ತಿಳಿಸಿದ್ದಾರೆ.