Advertisement
ವಾರದ ಸಂತೆಯ ದಿನವಾದ ಶನಿವಾರ ನಗರದ ಮಾರುಕಟ್ಟೆಗಳು ಗಿಜಿಗುಡುತ್ತಿದ್ದವು. ಆದರೆ ಜನಸಂಚಾರ ಹೆಚ್ಚಾಗಿ ಕಂಡು ಬರಲಿಲ್ಲ. ಎರಡನೇ ಶನಿವಾರ ಹಿನ್ನೆಲೆಯಲ್ಲಿ ಕೋರ್ಟ್ ಆವರಣವಂತೂ ಖಾಲಿ ಖಾಲಿಯಾಗಿತ್ತು. ಮಾರುಕಟ್ಟೆಗಳಲ್ಲಿ ಜನ ಇಲ್ಲದೇ ವ್ಯಾಪಾರ ಅಷ್ಟಕ್ಕಷ್ಟೇ ಎಂಬಂತಿತ್ತು. ರವಿವಾರ ಪೇಟೆಯಲ್ಲಿ ಗ್ರಾಹಕರು, ವಾಹನಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರಲಿಲ್ಲ.
Related Articles
Advertisement
ಮಾರುಕಟ್ಟೆಯಲ್ಲಿರಾಶಿ-ರಾಶಿ ತರಕಾರಿ : ಇಲ್ಲಿಯ ಎಪಿಎಂಸಿಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬಂದಿದ್ದು, ಕೊಳ್ಳುವವರು ಇಲ್ಲದೇ ಮಾರುಕಟ್ಟೆಗಳಲ್ಲಿ ತರಕಾರಿ ಬಿದ್ದು ದರ ಇಳಿಮುಖವಾಗಿದೆ. ಎಪಿಎಂಸಿ ಮಾರುಕಟ್ಟೆಯ ತುಂಬ ತರಕಾರಿ ರಾಶಿ-ರಾಶಿಯಾಗಿ ಬಿದ್ದಿತ್ತು. ಆದರೆ ಕೇಳುವವರೇ ಇರಲಿಲ್ಲ. ಜಿಲ್ಲೆಯಲ್ಲಿ ಬೆಳೆದ ತರಕಾರಿ ಗೋವಾ, ಮಹಾರಾಷ್ಟ್ರ ಸೇರಿದಂತೆ ಬೇರೆ-ಬೇರೆ ಕಡೆಗಳಲ್ಲಿ ಸರಬರಾಜು ಮಾಡಲಾಗುತ್ತದೆ. ಶನಿವಾರ ತರಕಾರಿ ಹೆಚ್ಚಾಗಿ ಬಂದಿದ್ದು, ದಲ್ಲಾಳಿಗಳು, ವ್ಯಾಪಾರಸ್ಥರು ಇಲ್ಲದೇ ಬೆಲೆ ಭಾರೀ ಪ್ರಮಾಣದಲ್ಲಿ ಪಾತಾಳಕ್ಕೆ ಬಿದ್ದಿದೆ.
ಮಾಸ್ಕ್ ಹಾಕಿದವರ ದರ್ಶನ : ಸಾರ್ವಜನಿಕರು ಮಾಸ್ಕ್ ಧರಿಸಿಕೊಂಡು ಓಡಾಡುತ್ತಿರುವುದು ಕಂಡು ಬಂತು. ಕೆಲವು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಲಿದ್ದರೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಸಂಚರಿಸುತ್ತಿದ್ದರು. ತರಕಾರಿ ಮಾರುಕಟ್ಟೆ, ಜನನಿಭಿಡ ಪ್ರದೇಶಗಳಲ್ಲಿ ಮಾಸ್ಕ್ ಹಾಕಿದವರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಔಷಧ ಅಂಗಡಿಗಳಲ್ಲಿ ನಿನ್ನೆಯಿಂದ ಮಾಸ್ಕ್ ಮಾರಾಟದಲ್ಲಿ ಏರಿಕೆ ಆಗಿದೆ.
ಜಾತ್ರೆಗೂ ತಟ್ಟಿದ ಬಿಸಿ : ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರೆಗೂ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಬಿಸಿ ತಟ್ಟಿದೆ. ದೇವಿ ದರ್ಶನ ಪಡೆಯಲು ಶುಕ್ರವಾರದವರೆಗೆ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿದ್ದ ಭಕ್ತರ ಸಂಖ್ಯೆ ಶನಿವಾರ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಆಗಿತ್ತು. ಆದರೆ ಜಾತ್ರೆ ಯಥಾ ಪ್ರಕಾರ ನಡೆದಿದ್ದು, ಧಾರ್ಮಿಕ ವಿಧಿ-ವಿಧಾನಗಳನ್ನು ಕೈಗೊಳ್ಳಲಾಗಿದೆ. ಜಾತ್ರೆಗೆ ಭಕ್ತರು ಆಗಮಿಸುತ್ತಿದ್ದು, ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಕಮಿಟಿಯವರು ಜಾತ್ರಾ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡು ಭಕ್ತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
21ರ ವರೆಗೆ ಪಬ್, ಕ್ಲಬ್‌ಗಳು ಬಂದ್ : ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಿಂದಾಗಿ ಮಾ.14ರಿಂದ ಬೆಳಗ್ಗೆ 6ಗಂಟೆಯಿಂದ ಮಾ.21ರಂದು ಮಧ್ಯರಾತ್ರಿವರೆಗೆ ಪಬ್‌ಗಳು, ಕ್ಲಬ್‌ಗಳನ್ನು ಬಂದ್ ಮಾಡಲು ಅಬಕಾರಿ ಇಲಾಖೆ ನಿರ್ಧರಿಸಿದೆ. ಪಬ್‌ಗಳು, ಕ್ಲಬ್‌ಗಳು, ಹೆಚ್ಚಿನ ಪ್ರಮಾಣದಲ್ಲಿ ಸೇರುವ ಕಾರ್ಯಕ್ರಮಗಳನ್ನು ಮಾಡದಂತೆ ಆದೇಶದಲ್ಲಿ ತಿಳಿಸಲಾಗಿದೆ.