Advertisement

ಬಿಂಕದಕಟ್ಟಿ ಸಣ್ಣ ಮೃಗಾಲಯಕ್ಕೂ ತಟ್ಟಿದ ವೈರಸ್‌ ಬಿಸಿ

04:11 PM Mar 16, 2020 | Suhan S |

ಗದಗ: ಹಚ್ಚ ಹಸಿರು ಸೊಬಗಿನ ಮಧ್ಯೆ ಅಪರೂಪದ ವನ್ಯಜೀವಿಗಳಿಂದ ಚಿಣ್ಣರು ಹಾಗೂ ಸಾರ್ವಜನಿಕರ ಪ್ರಮುಖ ಆಕರ್ಷಣೀಯ ತಾಣವಾಗಿರುವ ಬಿಂಕದಕಟ್ಟಿ ಸಣ್ಣ ಮೃಗಾಲಯಕ್ಕೂ ಇದೀಗ ಕೊರೊನಾ ಬಿಸಿ ತಟ್ಟಿದೆ.

Advertisement

ಎಲ್ಲೆಡೆ ಕೊರೊನಾ ವೈರಸ್‌ ಹರಡುವ ಭೀತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಮಾ.15ರಿಂದ 23ರ ವರೆಗೆ ಸಾರ್ವಜನಿಕರ ಪ್ರವೇಶ ನಿಷಿದ್ಧಿಸಿ, ಬಾಗಿಲು ಮುಚ್ಚಿದೆ. ಹೀಗಾಗಿ ಸದಾ ಸಾರ್ವಜನಿಕರಿಂದ ತುಂಬಿ ತುಳುಕುತ್ತಿದ್ದ ಬಿಂಕದಕಟ್ಟಿ ಸಣ್ಣ ಮೃಗಾಲಯ ಇದೀಗ ಜನರಿಲ್ಲದೇ ಬಿಕೋ ಎನ್ನುತ್ತಿದೆ. ಕಳೆದ ಹಿಂಗಾರಿನಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಬಿಂಕದಕಟ್ಟಿ ವನ್ಯಜೀವಿ ಸಂಗ್ರಹಾಲಯ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಝೂನಲ್ಲಿ ಪ್ರಾಣಿ, ಪಕ್ಷಿಗಳ ಕಲರವ ಜೋರಾಗಿದ್ದು, ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಹೀಗಾಗಿ ದಿನದಿಂದ ದಿನಕ್ಕೆ ಝೂಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳವಾಗಿದೆ.

ಬಿಂಕದಕಟ್ಟಿ ಸಣ್ಣ ಮೃಗಾಲಯ ಕಳೆದ 4 ದಶಕಗಳ ಹಿಂದ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಹೆಚ್ಚುತ್ತಿರುವ ವನ್ಯಜೀವಿಗಳಿಂದಾಗಿ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ. ಕಳೆದ ಸಂಕ್ರಾಂತಿ ದಿನದಂದು ಸುಮಾರು 3 ಸಾವಿರಕ್ಕಿಂತ ಹೆಚ್ಚಿನ ಜನರು ಭೇಟಿ ನೀಡಿದ್ದಾರೆ. ಇನ್ನುಳಿದಂತೆ ರವಿವಾರ ಹಾಗೂ ರಜಾ ದಿನಗಳಲ್ಲಿ ಸಾವಿರಕ್ಕಿಂತ ಹೆಚ್ಚಿನ ಜನರು ಸಂದರ್ಶಿಸುತ್ತಾರೆ.

ಸೋಂಕಿನ ಚಿಂತೆ: ಒಂದೆಡೆ ದೇಶಾದ್ಯಂತ ಕೊರೊನಾ ಭೀತಿಯಿಂದ ಜನರು ಮಾರುಕಟ್ಟೆ, ಸಿನಿಮಾಗಳಿಂದ ದೂರವಾಗುತ್ತಿದ್ದರೂ, ಪರಿಶುದ್ಧ ಗಾಳಿ ಹಾಗೂ ಆಹ್ಲಾದಕರ ವಾತಾವರಣ ಅರಸಿ, ಹೆಚ್ಚಿನ ಜನರು ಮೃಗಾಲಯಕ್ಕೆ ಆಗಮಿಸುತ್ತಿದ್ದರು. ಇದರಿಂದ ಮೃಗಾಲಯದ ಸಿಬ್ಬಂದಿಯಲ್ಲಿ ಆತಂಕ ಆವರಿಸಿತ್ತು. ಮೃಗಾಲಯಕ್ಕೆ ಆಗಮಿಸುವವರಲ್ಲಿ ಸೋಂಕಿದ್ದು, ಅದು ಪ್ರಾಣಿಗಳ ಮೇಲೆ ಪರಿಣಾಮ ಉಂಟು ಮಾಡಿದರೆ ಹೇಗೆ ಎಂಬ ಚಿಂತೆಯೂ ಮೃಗಾಲಯದ ಅಧಿಕಾರಿಗಳನ್ನು ಕಾಡುತ್ತಿತ್ತು. ಆದರೆ, ಇದೀಗ ಸರ್ಕಾರವೇ ಮೃಗಾಲಯಕ್ಕೆ ಒಂದು ವಾರದ ಮಟ್ಟಿಗೆ ಸಾರ್ವಜನಿಕರ ಪ್ರವೇಶ ನಿಷೇಧಿ ಸಿದ್ದರಿಂದ ಮೃಗಾಲಯದ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

ಏಳು ಸಾವಿರ ಸಂಗ್ರಹ :  ಇತ್ತೀಚೆಗೆ ವಿವಿಧ ಪರೀಕ್ಷೆಗಳು ಆರಂಭಗೊಂಡಿರುವುದರ ಜೊತೆಗೆ ಕೊರೊನಾ (ಕೋವಿಡ್‌-19) ವೈರಸ್‌ನಿಂದಾಗಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದ್ದರೂ, ಮೃಗಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆ ಇರಲಿಲ್ಲ. ಮೃಗಾಲಯಗಳಿಗೆ ಸಾರ್ವಜನಿಕರ ಪ್ರವೇಶ ಸರ್ಕಾರ ನಿಷಿದ್ಧಗೊಳಿಸಿ, ಆದೇಶ ಹೊರಡಿಸಿದ ಶನಿವಾರವೂ ಮೃಗಾಲಯಕ್ಕೆ ಒಟ್ಟು 250 ಜನರು ಸಂದರ್ಶಿಸಿದ್ದು, ಅವರಿಂದ 7000 ರೂ. ಸಂಗ್ರಹವಾಗಿತ್ತು.

Advertisement

ಸಾರ್ವಜನಿಕ ಆರೋಗ್ಯ ರಕ್ಷಣೆ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ನಿರ್ದೇಶನದನ್ವಯ ಕರ್ನಾಟಕ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಗದಗ ಮೃಗಾಲಯ ಸೇರಿದಂತೆ ಎಲ್ಲ ಬಯಾಲಾಜಿಕಲ್‌, ಝೂಲಾಜಿಕಲ್‌ ಪಾರ್ಕ್‌, ಪ್ರಾಣಿ ಸಂಗ್ರಹಾಲಯ, ಸಫಾರಿ ಹಾಗೂ ಕಿರು ಮೃಗಾಯಗಳ ಸಾರ್ವಜನಿಕ ವೀಕ್ಷಣೆಯನ್ನು ಮಾ.23ರ ವರೆಗೆ ನಿರ್ಬಂಧಿಸಿದೆ. ಜೊತೆಗೆ ಕಪ್ಪತಗುಡ್ಡ ಸಂರಕ್ಷಣೆ ಜನಜಾಗೃತಿ ಅಂಗವಾಗಿ ಹಮ್ಮಿಕೊಂಡಿದ್ದ ಮುಕ್ತ ವಾಲಿಬಾಲ್‌ ಪಂದ್ಯಾವಳಿ ಮುಂದೂಡಲಾಗಿದೆ.  –ಸೂರ್ಯಸೇನ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next