Advertisement

ಹೊರಬರಲು ಹಿಂದೇಟು ಹಾಕಿದ ಜನ

06:01 PM Mar 27, 2020 | Suhan S |

ಗದಗ: ಕೋವಿಡ್ 19 ವೈರಾಣು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಲಾಕ್‌ಡೌನ್‌ಗೆ ಜಿಲ್ಲೆಯ ಜನತೆ ದಿನದಿಂದ ದಿನಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಎರಡು ದಿನಗಳಿಗೆ ಹೋಲಿಸಿದರೆ ಗುರುವಾರ ಮನೆಯಿಂದ ಹೊರ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ರೋಣದಲ್ಲಿ ಗುರುವಾರ ನಡೆದ ಸಂತೆಯಲ್ಲಿ ಜನ ಸಂದಣಿ ಉಂಟಾದ ಹೊರತಾಗಿ, ಇತರೆಡೆ ಶಿಸ್ತು ಬದ್ಧವಾಗಿ ಸರತಿಯಲ್ಲಿ ನಿಂತು ಅಗತ್ಯ ವಸ್ತು ಖರೀದಿಸುತ್ತಿದ್ದಾರೆ.

Advertisement

ಎರಡು ದಿನಗಳಿಂದ ಇಲ್ಲಿನ ತರಕಾರಿ ಮಾರುಕಟ್ಟೆ, ಪಂಚರ ಹೊಂಡ ಪ್ರದೇಶದಲ್ಲಿ ಜನರ ತರಕಾರಿ ಖರೀದಿಗೆ ಮುಗಿ ಬೀಳುತ್ತಿದ್ದರು. ಹೀಗಾಗಿ ಗುಂಪು ಚದುರಿಸಲು ಪೊಲೀಸ್‌ ಸಿಬ್ಬಂದಿ ಆಗಾಗ ಲಾಠಿ ಚಾರ್ಜ್‌ ನಡೆಸುತ್ತಿದ್ದರು. ಈ ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತ, ಪಂಚರಹೊಂಡ ಬಳಿ ಬೀದಿಬದಿ ಹಾಗೂ ಗ್ರೇನ್‌ ಮಾರುಕಟ್ಟೆ ಗುರುವಾರದಿಂದ ಸ್ಥಗಿತಗೊಳಿಸಿದೆ. ಜೊತೆಗೆ ಕಿರಾಣಿ ಅಂಗಡಿಗಳ ಅವಧಿಯನ್ನು ಬೆಳಗ್ಗೆ 7 ರಿಂದ 10ರ ವರೆಗೆ ನಿಗದಿಗೊಳಿಸಿದೆ. ಈ ನಿರ್ಧಾರ ಅರಿಯದೇ ಗುರುವಾರ ಮಾರುಕಟ್ಟೆಗೆ ಬಂದಿದ್ದ ಕೆಲವರು ಪರದಾಡುವಂತಾಯಿತು.

ವಾರ್ಡ್‌ ವಾರು ಮಾರಾಟ: ತಾಲೂಕಿನ ವಿವಿಧ ಗ್ರಾಮಗಳಿಂದ ಎಂದಿನಂತೆ ಟಂಟಂ, ಕ್ಯಾಂಟರ್‌ ವಾಹನಗಳು ಹೊತ್ತು ತಂದ ತರಕಾರಿಯನ್ನು ಎಪಿಎಂಸಿಗೆ ರವಾನಿಸಲಾಯಿತು. ಅಲ್ಲಿ ವರ್ತಕರಿಗೆ ಹರಾಜು ಮಾಡಿ, ಅಲ್ಲಿಂದ ವಾರ್ಡ್‌ವಾರು ಮಾರಾಟಕ್ಕೆ ಕಳುಹಿಸಲಾಯಿತು. ಈ ಮೂಲಕ ಮನೆ ಬಾಗಿಲಿಗೆ ತರಕಾರಿ ತಲುಪಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಗದಗ- ಬೆಟಗೇರಿ ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳ ಪ್ರಮುಖ ರಸ್ತೆ ಹಾಗೂ ಬಯಲು ಜಾಗೆಗಳಲ್ಲಿ ತರಕಾರಿ ಮಾರಾಟಕ್ಕೆ ನಗರಸಭೆ ವ್ಯವಸ್ಥೆ ಕಲ್ಪಿಸಿದೆ. ಬೆಟಗೇರಿ ಭಾಗದ 10 ವಾರ್ಡ್‌ ಹಾಗೂ ಗದಗ ಭಾಗದ 25 ವಾರ್ಡ್‌ಗಳಲ್ಲಿ ಸೂಚಿತ ಪ್ರದೇಶಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಅಲ್ಲೂ ಒಂದು ಮೀಟರ್‌ ಅಂತರದಲ್ಲಿ ಗುರುತು ಹಾಕಿದ್ದು, ಜನರು ಸರದಿ ಸಾಲಿನಲ್ಲಿ ನಿಂತು, ತರಕಾರಿ ಕೊಳ್ಳುತ್ತಿರುವುದು ಕಂಡು ಬಂದಿತು. ಈ ನಡುವೆ ಜಿಲ್ಲಾ ಕಾರಿ ಎಂ.ಜಿ.ಹಿರೇಮಠ ಅವರು ಎಸ್‌ಪಿ ಯತೀಸ್‌ ಅವರೊಂದಿಗೆ ಬೆಳಗ್ಗೆ ಮಾರುಕಟ್ಟೆ ಪ್ರದೇಶದಲ್ಲಿ ಸಂಚರಿಸಿ, ಪರಿಸ್ಥಿತಿ ಅವಲೋಕಿಸಿದರು.

ಗಗನಕ್ಕೇರಿದ ಮಟನ್‌ ಬೆಲೆ: ಹೊಸ ತೊಡಕು ಅಂಗವಾಗಿ ಜಿಲ್ಲಾಡಳಿತ ಕೇವಲ 3 ಗಂಟೆ ಮಾತ್ರ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಿತ್ತು. ಈ ಹಿನ್ನೆಲೆಯಲ್ಲಿ ಮಾಂಸ ಖರೀದಿಗೆ ಜನ ಮುಗಿಬಿದ್ದಿದ್ದರು. ಮಾಂಸಕ್ಕೆ ಬೇಡಿಕೆ ಹೆಚ್ಚಿದ್ದರಿಂದ ಚಿಕನ್‌ ಕೆಜಿಗೆ 180ರಿಂದ 200 ರೂ., ಮಟನ್‌ ಕೆಜಿಗೆ 650-800 ರೂ. ವರೆಗೆ ಮಾರಾಟವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next