ಶ್ರೀರಂಗಪಟ್ಟಣ: ವಿಶ್ವ ಪ್ರಸಿದ್ಧ
ಕೆಆರ್‌ಎಸ್ ಬೃಂದಾವನಕ್ಕೆ ಆಗಮಿಸುವ ಪ್ರವಾಸಿಗರಿಗೆ ಕೊರೊನಾ ಸೋಂಕಿನ ಆತಂಕ ಹೋಗಲಾಡಿಸಲು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಜಾಗೃತಿ ಮೂಡಿಸಿದರು.
ನಿಗಮದ ಕಾರ್ಯಪಾಲಕ ಎಂಜಿನಿಯರ್ ರಾಜು ನೇತೃತ್ವದಲ್ಲಿ ಕೆಆರ್‌ಎಸ್ ಟಿಕೆಟ್ ಕೌಂಟರ್ ಬಳಿ ಭಿತ್ತಿಪತ್ರಪ್ರದರ್ಶಿಸಿ, ಪ್ರವಾಸಿಗರಿಗೆ ಕರಪತ್ರ ವಿತರಿಸಿ ಅಧಿಕಾರಿಗಳು ಪ್ರವಾಸಿಗರಿಗೆ ಜಾಗೃತಿ ಮೂಡಿಸಿದರು.
ಕೊರೊನಾ ಸೋಂಕು ಕುರಿತು ಆತಂಕ ಪಡುವ ಬದಲು ಎಚ್ಚರ ವಹಿಸಬೇಕು. ನೆಗಡಿ, ಸೀನು, ಕೆಮ್ಮು ಇರುವವರಿಂದ ಎರಡು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಆಗಾಗ್ಗೆ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ವಿದೇಶ ಪ್ರವಾಸ ಹೋಗು ವವರು ಮುಂದೂಡಬೇಕು. ವಿದೇಶ ಪ್ರವಾಸದಿಂದ ವಾಪಸ್ ಬಂದವರ ಆರೋಗ್ಯದ ಮೇಲೆ ನಿಗಾ ವಹಿಸುವಂತೆ ಹಾಗೂ ಅನುಮಾನವಿದ್ದಲ್ಲಿ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಸಂಪರ್ಕಿಸುವಂತೆ ಎಚ್ಚರಿಕೆ ಸಂದೇಶ ನೀಡಲಾಯಿತು.
ಸ್ವಚ್ಚತೆಗೆ ಆದ್ಯತೆ: ಕೆಆರ್‌ಎಸ್ ಪ್ರಾಥಮಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಿ.ಎಸ್.ಸೌಮ್ಯ ಮಾತನಾಡಿ, ಪ್ರವಾಸಿಗರಲ್ಲಿನ ಭಯ ಹೋಗಲಾಡಿಸಲು ನಿಗಮದ ಜೊತೆ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕೆಆರ್‌ಎಸ್ ಬೃಂದಾವನದ ಆವರಣದಲ್ಲಿ ಪ್ರವಾಸಿಗರು ಕೂರುವ ಸ್ಥಳಗಳು, ಆಸನಗಳನ್ನು ಸ್ವತ್ಛಗೊಳಿಸಿ ಅಲ್ಲಲ್ಲಿ ಕೊರೊನಾ ಜಾಗೃತಿಯ ಭಿತ್ತಿ ಪತ್ರ ಪ್ರದರ್ಶಿಸಲಾಗಿದೆ. ಕೆಮ್ಮು, ಸೀನುವಾಗ ಬಟ್ಟೆ ಮುಚ್ಚಿಕೊಂಡು ಸೀನಬೇಕು, ಕೈ ತೊಳೆಯುವ ಹಾಗೂ ಸ್ವತ್ಛತೆ ಕಾಪಾಡುವ ಕಡೆ ಗಮನ ನೀಡಬೇಕು, ಸಂಶಯ ಇರುವ ಸ್ಥಳಗಳಲ್ಲಿ ಗುಂಪು ಸೇರಬಾರದು, ವೈದ್ಯರ ಮಾಹಿತಿ ಇಲ್ಲದೆ ಸುಳ್ಳು ಸುದ್ದಿ ಹಬ್ಬಿಸಬಾರದು ಎಂದು ತಿಳಿಸಿದರು.
ಜಾಗೃತಿ ವೇಳೆ ಎಇಇ. ತಮ್ಮಣ್ಣೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ವಿಜಯಕುಮಾರ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ವಿಭಾಗದ ತಿಮ್ಮರಾಜು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ, ಮೇಲ್ವಿಚಾರಕರಾದ ಜಿ.ಮೋಹನ್, ಸಲೀಂಪಾಷಾ, ಸರ್ಕಾರಿ ನೌಕರರ ಯೋಜನಾ ಶಾಖೆಯ ಅಧ್ಯಕ್ಷ ಶಿವಪ್ಪ, ಶುಶ್ರೂಶಕಿ ಮಂಜಮ್ಮ, ಆರೋಗ್ಯ ಸಹಾಯಕಿಯರಾದ ಗೀತ, ಜಯಶೀಲ, ಸೌಮ್ಯ ಮತ್ತು ಆಶಾ ಕಾರ್ಯಕರ್ತರು ಹಾಗೂ ಪೊಲೀಸ್ ಅಧಿಕಾರಿಗಳು, ನಿಗಮದ ಸಿಬ್ಬಂದಿ ಮೊದಲಾದವರು ಹಾಜರಿದ್ದರು.