Advertisement
ರಾಯಿಟರ್ಸ್ ಪರವಾನಿಗೆಯನ್ನು 3 ತಿಂಗಳ ಮಟ್ಟಿಗೆ ರದ್ದುಪಡಿಸಿದ್ದು, ತಪ್ಪು ಮಾಹಿತಿ ನೀಡಿದ್ದಕ್ಕೆ 25 ದಶಲಕ್ಷ ದಿನಾರ್ (21,000 ಡಾಲರ್) ದಂಡ ವಿಧಿಸಲಾಗಿದೆ ಎಂದು ಇರಾಕ್‌ನ ಮಾಧ್ಯಮ ನಿಯಂತ್ರಕರು ಹೇಳಿದ್ದಾರೆ. ರಾಯಿಟರ್ಸ್ ವರದಿಯು ಸಾಮಾಜಿಕ ಆರೋಗ್ಯ ಮತ್ತು ಸುರಕ್ಷತೆಯ ಮೇಲೆ ಗಂಭೀರವಾದ ಪ್ರತಿಕೂಲ ಪರಿಣಾಮಗಳನ್ನು ಬೀರಿರುವುದರಿಂದ ಈ ಕ್ರಮ ಕೈಗೊಂಡಿದ್ದೇವೆ ಎಂದು ಸುದ್ದಿಸಂಸ್ಥೆಗೆ ಬರೆದ ಪತ್ರದಲ್ಲಿ ಸಂವಹನ ಮತ್ತು ಮಾಧ್ಯಮ ಆಯೋಗ ತಿಳಿಸಿದೆ. ಆದರೆ ಆರೋಪವನ್ನು ಅಲ್ಲಗಳೆದಿರುವ ರಾಯಿಟರ್ಸ್, ಇರಾಕ್ ಸರಕಾರದ ಕ್ರಮಕ್ಕಾಗಿ ವಿಷಾದಿಸುತ್ತೇವೆ. ವರದಿಗೆ ನಾವು ಈಗಲೂ ಬದ್ಧ. ವೈದ್ಯಕೀಯ ಮತ್ತು ರಾಜಕೀಯ ಕ್ಷೇತ್ರದ ಅನೇಕ ಮಂದಿಯನ್ನು ಭೇಟಿಯಾಗಿ ಸಂಗ್ರಹಿಸಿದ ಮಾಹಿತಿ ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿತ್ತು. ಈ ವಿವಾದ ಆದಷ್ಟು ಬೇಗ ಬಗೆಹರಿಯಲಿದೆ ಎನ್ನುವುದು ನಮ್ಮ ನಿರೀಕ್ಷೆ ಎಂದು ಸರಕಾರಕ್ಕೆ ಪ್ರತಿಕ್ರಿಯಿಸಿದೆ.
ಎ.2ರಂದು ಪ್ರಕಟವಾದ ವರದಿಯಲ್ಲಿ ಇರಾಕ್‌ನಲ್ಲಿ ಸಾವಿರಾರು ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಆದರೆ ಇರಾಕ್ ಸರಕಾರ ಬರೀ 772 ಮಂದಿ ಮಾತ್ರ ಸಾವಿಗೀಡಾಗಿದ್ದಾರೆ ಎಂಬ ಲೆಕ್ಕವನ್ನು ತೋರಿಸುತ್ತಿದೆ ಎಂದು ಹೇಳಲಾಗಿತ್ತು. ವರದಿಗೆ ಆಧಾರವಾಗಿ ಮೂವರು ವೈದ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ನೀಡಿದ ಹೇಳಿಕೆಯನ್ನು ಬಳಸಿಕೊಳ್ಳಲಾಗಿತ್ತು. ಆರೋಗ್ಯ ಸಚಿವಾಲಯದ ನಿರಾಕರಣೆಯನ್ನು ಬಳಿಕ ವರದಿಯ ಜತೆಗೆ ಸೇರಿಸಿ ಪ್ರಕಟಿಸಲಾಗಿತ್ತು.