Advertisement
ಶುಕ್ರವಾರ ಒಂದೇ ದಿನ ಬ್ರಜಿಲ್‌ನಲ್ಲಿ 909 ಸಾವುಗಳು ಸಂಭವಿಸಿದ್ದು, 41,828 ಪ್ರಕರಣಗಳು ವರದಿಯಾಗಿದ್ದವು. ಈ ಮೂಲಕ ಸಂಖ್ಯೆ ಲೆಕ್ಕಾಚಾರದಲ್ಲಿ ಬ್ರಿಟನ್ ಅನ್ನು ಬ್ರಜಿಲ್ ಮೀರಿಸಿದೆ. ಮೊದಲನೇ ಸ್ಥಾನಿಯಾಗಿ ಅಮೆರಿಕವಿದೆ. ಅಧಿಕೃತ ಮೂಲಗಳು ಪ್ರಕಾರ, ಕಳೆದ ಹಲವು ದಿನಗಳಿಂದ ಬ್ರಜಿಲ್‌ನಲ್ಲಿ ಕೋವಿಡ್ ಸೋಂಕು ಪೀಡಿತರ ಸಂಖ್ಯೆ ತೀವ್ರವಾಗಿ ಏರುತ್ತಿದೆ. ಅಲ್ಲದೇ ನೈಜ ಪರಿಸ್ಥಿತಿಯು ಈಗಿನ ಅಂಕಿ ಅಂಶಕ್ಕಿಂತ 10-15 ಪಟ್ಟು ಹೆಚ್ಚಿರಬಹುದು ಎಂದು ಹೇಳಲಾಗಿದೆ. ದಕ್ಷಿಣ ಅಮೆರಿಕದ ಅತಿ ದೊಡ್ಡ ದೇಶವಾಗಿರುವ ಮತ್ತು ಆರ್ಥಿಕವಾಗಿಯೂ ಬಲಿಷ್ಠವಾಗಿರುವ ಬ್ರಜಿಲ್‌ನಲ್ಲಿ ಕೋವಿಡ್ ಸೋಂಕು ಲೆಕ್ಕಕ್ಕೇ ಸಿಗದಂತೆ ಹಬ್ಬುತ್ತಿರುವುದು ಅಲ್ಲಿನ ಆಡಳಿತಕ್ಕೆ ತೀವ್ರ ಆತಂಕ ತಂದಿದೆ. ಒಟ್ಟು ಸೋಂಕು ಪ್ರಕರಣಗಳು 8,28,810ಕ್ಕೇರಿವೆ.
ಪ್ರಕರಣಗಳ ಸಂಖ್ಯೆ ಏರುತ್ತಿದ್ದರೂ ಬ್ರಜಿಲ್ ಕ್ಯಾರೇ ಅಂದಿಲ್ಲ. ಅದು ಆರ್ಥಿಕ ಹಿನ್ನಡೆಯ ಆತಂಕ ಎದುರಿಸುತ್ತಿರುವುದರಿಂದ ಒಂದೊಂದಾಗಿ ವ್ಯವಹಾರ, ಉದ್ಯಮ ವಲಯಗಳನ್ನು ತೆರೆಯುತ್ತಿದೆ. ಪ್ರಮುಖ ನಗರಗಳಾದ ರಿಯೋ ಡಿ ಜನೈರೋ ಮತ್ತು ಸಾವೋ ಪೌಲೋ ನಗರದಲ್ಲಿ ಆರ್ಥಿಕತೆ ಪುನರಾರಂಭಿಸುವ ಎಲ್ಲ ಕ್ರಮಗಳನ್ನು ಮುಕ್ತವಾಗಿರಿಸಲಾಗಿದೆ. ಇನ್ನು ಇದೇ ನಗರಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣವೂ ಅತಿ ಹೆಚ್ಚಾಗಿದ್ದು, ಸರಕಾರ ಲಾಕ್‌ಡೌನ್ ಸಡಿಲಗೊಳಿಸಿದ ಕ್ರಮಗಳು ತೀವ್ರ ಆತಂಕವನ್ನೂ ಸೃಷ್ಟಿಸಿವೆ. ಸಾವೋ ಪೌಲೋದಲ್ಲಿ 46 ಲಕ್ಷ ನಿವಾಸಿಗಳಿದ್ದು, ಇವರಲ್ಲಿ 1.67 ಲಕ್ಷ ಮಂದಿಗೆ ಕೋವಿಡ್ ತಗುಲಿದೆ. ಈ ನಗರದಲ್ಲಿ ಈವರೆಗೆ 10,368 ಮಂದಿ ಮೃತಪಟ್ಟಿದ್ದಾರೆ. ರಿಯೋ ಡಿ ಜನೈರೋದಲ್ಲಿ 78 ಸಾವಿರ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 7,417 ಸಾವುಗಳು ಸಂಭವಿಸಿವೆ.
Related Articles
Advertisement