ಬೀದರ್: ಕಳೆದೊಂದು ವಾರದಿಂದ ಗಡಿ ಜಿಲ್ಲೆಯಲ್ಲಿ ಆರ್ಭಟಿಸಿ ಮರಣ ಮೃದಂಗ ಬಾರಿಸಿರುವ ಕೋವಿಡ್ ಸೋಮವಾರ ಕೊಂಚ ತಗ್ಗಿದ್ದು, ಸಾವಿನ ಸರಣಿ ನಿಲ್ಲಿಸಿದೆ.
5 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 502ಕ್ಕೆ ಏರಿಕೆ ಆಗಿದೆ.
ಜಿಲ್ಲೆಯಲ್ಲಿ ಕಳೆದ ಎಂಟು ದಿನಗಳಲ್ಲಿ 134 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದರೆ, 9 ಜನರನ್ನು ಮಹಾಮಾರಿ ಬಲಿ ಪಡೆದಿದೆ. ಈ ಒಂದೇ ವಾರದಲ್ಲಿ ಬೀದರ್ ಶಹಾಗಂಜ್‌ನ 49 ವರ್ಷದ ವ್ಯಕ್ತಿ (ಪಿ-7524), ತಾಲೂಕಿನ ಮಲ್ಕಾಪುರ ಗ್ರಾಮದ 26 ವರ್ಷದ ಯುವಕ (ಪಿ-7695), ಚಿಟಗುಪ್ಪದ 55 ವರ್ಷದ ವ್ಯಕ್ತಿ (ಪಿ-7776), ಬೀದರ್ ಮಾಂಗರವಾಡಿ ಗಲ್ಲಿಯ 45 ವರ್ಷದ ವ್ಯಕ್ತಿ (ಪಿ-7959), ಬಸವಕಲ್ಯಾಣ ಧಾರಾಗಿರಿಯ 70 ವರ್ಷದ ವ್ಯಕ್ತಿ (ಪಿ-7962), ಕಲಬುರಗಿ ಬಸವೇಶ್ವರ ನಗರದ 51 ವರ್ಷದ ಮಹಿಳೆ (ಪಿ-8423), ಬಗದಲ್‌ನ 65 ವರ್ಷದ ವ್ಯಕ್ತಿ, ಬೀದರ ಗವಾನ್ ಚೌಕ್‌ನ 70 ವರ್ಷದ ವ್ಯಕ್ತಿ (ಪಿ-9149), ತಾಲೂಕಿನ ಮಾಳೆಗಾಂವ ಗ್ರಾಮದ 46 ವರ್ಷದ ವ್ಯಕ್ತಿ ಜೀವ ಕಳೆದುಕೊಂಡಿದ್ದಾರೆ.
ಆದರೆ, ಸೋಮವಾರ ಸಾವಿನ ರಣಕೇಕೆ ನಿಲ್ಲಿಸಿದ್ದಲ್ಲದೇ ಸೋಂಕಿತರ ಸಂಖ್ಯೆಯೂ ಸ್ವಲ್ಪ ತಗ್ಗಿದೆ. ಜಿಲ್ಲೆಯಲ್ಲಿ ಹೊಸದಾಗಿ ಪತ್ತೆಯಾಗಿರುವ 5 ಕೇಸ್‌ಗಳಲ್ಲಿ ಚಿಟಗುಪ್ಪ ಪಟ್ಟಣದ 23 ವರ್ಷದ ಮಹಿಳೆ (ಪಿ-9737), ಕಮಲನಗರದ 34 ವರ್ಷದ ಪುರುಷ (ಪಿ-9738), ಹುಮನಾಬಾದ ತಾಲೂಕಿನ ಡಾಕುಳಗಿ ಗ್ರಾಮದ 44 ವರ್ಷದ ಪುರುಷ (ಪಿ-9769), ಔರಾದ ಲಿಡ್ಕರ್ ಕಾಲೋನಿಯ 15 ವರ್ಷದ ಯುವತಿ (ಪಿ-9770) ಮತ್ತು ಭಾಲ್ಕಿ ತಾಲೂಕಿನ ಮಳಚಾಪುರದ 16 ವರ್ಷದ ಯುವತಿ (ಪಿ-9771)ಗೆ ಸೋಕು ವಕ್ಕರಿಸಿದೆ. ಇವರಲ್ಲಿ ಇಬ್ಬರು ಮಹಾರಾಷ್ಟ್ರ, ಇನ್ನೊಬ್ಬರು ತೆಲಂಗಾಣದ ಸಂಪರ್ಕ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ 502 ಆದಂತಾಗಿದೆ. ಒಟ್ಟು 15 ಜನ ಸಾವನ್ನಪ್ಪಿದ್ದರೆ, 324 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 163 ಸಕ್ರೀಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.