Advertisement

ಬೇಡುವ ಸ್ಥಿತಿಯಲ್ಲಿ ಕೋವಿಡ್ ವಾರಿಯರ್ಸ್‌!:108 ಆ್ಯಂಬುಲೆನ್ಸ್‌ ಸಿಬಂದಿಗೆ ದೊರಕಿಲ್ಲ ವೇತನ

01:25 AM May 06, 2021 | Team Udayavani |

ಕಾರ್ಕಳ: ನಮಗೆ ಸಮ್ಮಾನ, ಬಿರುದು ಯಾವುದು ಬೇಡ. ನಿಗದಿಯಾಗಿರುವ ವೇತನವನ್ನು ಸಕಾಲಕ್ಕೆ ಕೊಟ್ಟರೆ ಅಷ್ಟೇ ಸಾಕು…

Advertisement

ಇದು ಎರಡು ತಿಂಗಳಿಂದ ವೇತನ ಸಿಗದೆ ಕಂಗೆಟ್ಟಿರುವ ರಾಜ್ಯದ ಆರೋಗ್ಯ ಕವಚ 108 ಆ್ಯಂಬುಲೆನ್ಸ್‌ನ ಪೈಲಟ್‌ಗಳು ಮತ್ತು ಆರೋಗ್ಯ ಸಿಬಂದಿ ರಾಜ್ಯ ಸರಕಾರಕ್ಕೆ ಇಡುತ್ತಿರುವ ಮೊರೆ.

ಆರೋಗ್ಯ ಇಲಾಖೆಯಿಂದ ಗುತ್ತಿಗೆ ಪಡೆದು ಕೊಂಡಿ ರುವ ಜಿವಿಕೆ ಇಎಂಎಆರ್‌ಐ ಸಂಸ್ಥೆಯು ತನ್ನ ಸಿಬಂದಿಗೆ ಮಾರ್ಚ್‌, ಎಪ್ರಿಲ್‌ ತಿಂಗಳ ವೇತನ ನೀಡಿಲ್ಲ. ಸರಕಾರ ಈ ಹಿಂದೆ ಮೂರು ತಿಂಗಳ ಹಣ ವನ್ನು ಮುಂಗಡ ನೀಡುತ್ತಿತ್ತು. ಈಗ ಕೊಡುತ್ತಿಲ್ಲ; ಮುಂದೆಯೂ ಸರಕಾರದಿಂದ ಸಿಗುವ ಭರವಸೆ ಯಿಲ್ಲ. ಹಾಗಿರುವಾಗ ವೇತನ ಕೊಡುವುದಕ್ಕೆ ಹೇಗೆ ಸಾಧ್ಯ ಎಂದು ಜಿವಿಕೆ ಸಂಸ್ಥೆಯವರು ಕೈ ಚೆಲ್ಲಿದ್ದಾರೆ.

ನಾವು ಸರಕಾರದ ಕೈಹಿಡಿದರೆ ಸರಕಾರ ನಮ್ಮ ಕೈಬಿಟ್ಟಿತು! :

ಕೋವಿಡ್ ಸೋಂಕಿತರ ಬಳಿ ಸಂಬಂಧಿಕರೇ ಸುಳಿಯುವುದಿಲ್ಲ. ಹಾಗಿರುವಾಗ ಜೀವದ ಹಂಗು ತೊರೆದು ಕೋವಿಡ್ ವಾರಿಯರ್‌ಗಳಾಗಿ ಸರಕಾರದ ಜತೆ ನಿಂತು ಕೆಲಸ ಮಾಡುತ್ತಿದ್ದೇವೆ. ಸಂಕಷ್ಟದಲ್ಲಿ ಸರಕಾರದ ಕೈ ಹಿಡಿದಿದ್ದೇವೆ. ಸರಕಾರ ನಮ್ಮನ್ನು ನಡುನೀರಿನಲ್ಲಿ ಕೈಬಿಟ್ಟಿದೆ. ತುತ್ತಿಗೂ ಪರದಾಡುತ್ತಿದ್ದೇವೆ. ರೋಗಿಗಳ ಸಂಬಂಧಿಕರು ಕೊಟ್ಟರೆ ಊಟ ಇಲ್ಲದಿದ್ದರೆ ಉಪವಾಸ. ನಮ್ಮನ್ನೇ ನಂಬಿ ಮನೆಯಲ್ಲಿರುವವರ ಪರಿಸ್ಥಿತಿ ಇನ್ನೂ ಚಿಂತಾಜನಕ. ಜೀವನೋಪಾಯಕ್ಕಾಗಿ ಕಂಡವರಲ್ಲಿ ಬೇಡುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ವೇತನ ವಂಚಿತ ಸಿಬಂದಿ.

Advertisement

ಕೋವಿಡ್ ಬಾಧಿತರನ್ನು ಸಾಗಿಸುವ ಸಿಬಂದಿಗೆ ಕೋವಿಡ್‌ ಇನ್ಸೆಂಟಿವ್‌ ಎಂದು ಕಳೆದ ವರ್ಷ ದಿನಕ್ಕೆ 500 ರೂ. ಪಾವತಿಸುತ್ತಿದ್ದರು. ಈಗ ಅದೂ ಇಲ್ಲ. ಮೂರು ವರ್ಷದ ಅರಿಯರ್ಸ್‌ ಇಲ್ಲ. ಎರಡು ವರ್ಷದ ಇನ್‌ಕ್ರಿಮೆಂಟ್‌ ಕೂಡ ನೀಡಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ “108′ ಸಿಬಂದಿ.

ಕೆಟ್ಟರೆ ತ್ರಿಶಂಕು ಸ್ಥಿತಿ :

ಆ್ಯಂಬುಲೆನ್ಸ್‌ಗಳಿಗೆ ಟಯರ್‌ ಸರಬರಾಜು ಸರಿಯಾಗಿಲ್ಲ, ಇದರಿಂದಾಗಿ ದಾರಿಯಲ್ಲಿ ಕೆಟ್ಟು ನಿಂತರೆ ರೋಗಿಗಳ ಸ್ಥಿತಿ ತ್ರಿಶಂಕು. ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎನ್ನುತ್ತಾರೆ ಅವರು.

ಎರಡೇ ದಿನಗಳಲ್ಲಿ ಪರಿಹಾರ :

ಆ್ಯಂಬುಲೆನ್ಸ್‌ ನೌಕರರ   ವೇತನ ವಿಚಾರವನ್ನು ಇದುವರೆಗೆ ನನ್ನ ಗಮನಕ್ಕೆ ಯಾರೂ ತಂದಿರಲಿಲ್ಲ. ನಿಮ್ಮಿಂದಲೇ ಮಾಹಿತಿ ಸಿಕ್ಕಿರುವುದು. ಖಂಡಿತವಾಗಿ ನಾವು ಅವರ ಜತೆ ನಿಲ್ಲಬೇಕಿದೆ. ಎರಡು ದಿನದೊಳಗೆ  ಮುಖ್ಯಮಂತ್ರಿ, ಆರೋಗ್ಯ ಸಚಿವರ ಜತೆ ವೇತನ ಸಂಬಂಧ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವೆ. ಶಿವರಾಮ ಹೆಬ್ಟಾರ್‌, ಕಾರ್ಮಿಕ ಸಚಿವ

ಶೀಘ್ರ ಇತ್ಯರ್ಥ :

ತುರ್ತು ಸೇವೆಯಲ್ಲಿ ನಿರತರಾಗಿರುವ 108 ಸಿಬಂದಿ ವೇತನವಿಲ್ಲದೆ ಬಳಲುತ್ತಿರುವ ಕುರಿತು ಸರಕಾರದ ಗಮನಕ್ಕೂ ತರಲಾಗಿದ್ದು,  ಶೀಘ್ರ ಇತ್ಯರ್ಥವಾಗಲಿದೆ. ಹನುಮಂತಪ್ಪ, ಸಿಇಒ, ಜಿವಿಕೆ ಇಎಂಎಆರ್‌ಐ, ಬೆಂಗಳೂರು

 

-ಬಾಲಕೃಷ್ಣ  ಭೀಮಗುಳಿ‌

Advertisement

Udayavani is now on Telegram. Click here to join our channel and stay updated with the latest news.

Next