ರಾಮನಗರ: ಕೋವಿಡ್ ನಿಯಂತ್ರಣ, ಸೋಂಕಿತರಿಗೆ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಟಾಫ್ ನರ್ಸ್ಗಳಿಗೆ ಪಕ್ಷದ ಪರ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್ ಕುಮಾರಸ್ವಾಮಿ ವಿತರಿಸಿದರು.
ನಗರದ ಡಿಎಚ್ಒ ಕಚೇರಿ ಆವರಣದಲ್ಲಿ ಸಾಂಕೇತಿಕವಾಗಿ ಕೆಲವರಿಗೆ ವೇಪೋರೈಸರ್ ಮತ್ತು ನಗದು ಗೌರವ ಧನ ವಿತರಿಸಿ, ಉಳಿದವುಗಳನ್ನು ಡಿಎಚ್ಒ ಡಾ.ನಿರಂಜನ್ ಅವರಿಗೆ ಹಸ್ತಾಂತರಿಸಿದರು.
ಆರೋಗ್ಯ ಪಣಕ್ಕಿಟ್ಟು ಕರ್ತವ್ಯ: ತದನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು 430 ಮಂದಿ ವಾರಿಯರ್ಸ್ಗೆ ನೆರವು ಸಿಗುತ್ತಿದೆ. ಕೋವಿಡ್ ನಿಯಂತ್ರಣ, ಚಿಕಿತ್ಸೆ ವಿಚಾರದಲ್ಲಿ ಇವರು ತಮ್ಮ ಆರೋಗ್ಯವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ವಾರಿಯಸ್ ìಗಳೇ ನಿಜವಾದ ಹೀರೋಗಳು. ಕೋವಿಡ್ ವಾರಿಯರ್ಸ್ಗಳಲ್ಲಿ ಆತ್ಮಸ್ಥೈರ್ಯ ತುಂಬುವ ಜೊತೆಗೆ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕು ಎಂಬ ಆಲೋಚನೆ ಇತ್ತು. ಅದು ನೆರವೇರಿದೆ ಎಂದರು.
ಪ್ರೋತ್ಸಾಹ ಧನ ನೀಡಲು ಸರ್ಕಾರ ವಿಫಲ: ರಾಜ್ಯದಲ್ಲಿ ಈಗಾಗಲೇ 16 ಆಶಾ ಕಾರ್ಯಕರ್ತರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯ ಸರ್ಕಾರ ಪ್ರತಿ ಕುಟುಂಬಕ್ಕೆ 50 ಲಕ್ಷ ಪರಿಹಾರ ಕೊಡುವುದಾಗಿ ಘೋಷಿಸಿತ್ತು. ಆದರೆ, ಇಲ್ಲಿವರೆಗೆ ಕೇವಲ ಒಂದೇ ಒಂದು ಕುಟುಂಬಕ್ಕೆ ಮಾತ್ರ ಪರಿಹಾರ ಹಣ ದೊರಕಿದೆ. ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ., ಪ್ರೋತ್ಸಾಹ ಧನ ನೀಡುವಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದರು.
ಜೆಡಿಎಸ್ ಪಕ್ಷದಿಂದ ಕೈಲಾದಷ್ಟು ಆರ್ಥಿಕಸಹಾಯ ಮಾಡುತ್ತಿದ್ದೇವೆ. ಈಗ ವೇಪೋರೈಸರ್ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಮೆಡಿಕಲ್ ಕಿಟ್ ವಿತರಣೆ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ಮುಖಂಡರಾದ ಬಿ.ಉಮೇಶ್, ಗೂಳಿಗೌಡ, ಜಯಕುಮಾರ್ ಹಾಜರಿದ್ದರು.