Advertisement
ಮಂಗಳೂರಿನ ವೆನಾÉಕ್ ಆಸ್ಪತ್ರೆ ಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ನರ್ಸ್‌ಗಳಲ್ಲೊಬ್ಬರಾದ ಮೂಲತಃ ಬಂಟ್ವಾಳದ ಅನಂತಾಡಿಯ ಪ್ರಸ್ತುತ ಕಾಪುವಿನಲ್ಲಿ ವಾಸವಾಗಿರುವ ಶಕಿಲಾ ಅವರನ್ನು ಸಂಪರ್ಕಿಸಿದ “ಉದಯವಾಣಿ’ಯೊಂದಿಗೆ ತಮ್ಮ ಕೆಲಸದ ಬಗ್ಗೆ ಅವರು ಹೇಳಿಕೊಂಡದ್ದು ಹೀಗೆ.
ಆರೋಗ್ಯ ಇಲಾಖೆ ನಮಗೆ ಎಲ್ಲ ರೀತಿಯ ಸುರಕ್ಷಾ ಕಿಟ್‌ಗಳನ್ನು ಒದಗಿಸಿದೆ. ತಲೆಯಿಂದ ಪಾದ ದವರೆಗೂ ಮುಚ್ಚುವ ದಿರಿಸುಗಳು ಅದರಲ್ಲಿವೆ. ಲೆಗ್ಗಿಂಗ್ಸ್, ಇಡೀ ದೇಹ ಮುಚ್ಚುವ ಗೌನ್, ಅದರ ಮೇಲೆ ಪ್ಲಾಸ್ಟಿಕ್ ಕವರ್ ಮಾದರಿಯ ಇನ್ನೊಂದು ದಿರಿಸು, ಗಾಗಲ್ಸ್, ಮಾಸ್ಕ್, ಗ್ಲೌಸ್ ಸೇರಿದಂತೆ ಐದಾರು ದಿರಿಸುಗಳನ್ನು ಧರಿಸಿಯೇ ದಿನನಿತ್ಯವೂ ಚಿಕಿತ್ಸೆಗೆ ತೆರಳಬೇಕು ಎನ್ನುತ್ತಾರೆ.
ಇಡೀ ದೇಹ ಮುಚ್ಚುವ ದಿರಿಸು ಧರಿಸಿದ ಮೇಲೆ ಶೌಚಾಲಯಕ್ಕೆ ಹೋಗುವುದಕ್ಕೆ ಆಗುವುದಿಲ್ಲ. ಬೇಸಗೆ ಬಿಸಿಯಲ್ಲಿ ಬಾಯಾರಿದರೂ ಅದನ್ನು ತಡೆದುಕೊಳ್ಳುತ್ತೇವೆ. ಸೆಕೆಯನ್ನು ತಡೆದುಕೊಳ್ಳಲಾಗದಿದ್ದರೂ ಕೆಲಸವನ್ನು ಹಂಚಿಕೊಂಡು ನಿರ್ವಹಿಸುತ್ತೇವೆ ಎನ್ನುತ್ತಾರೆ ಶಕಿಲಾ. ಫೋನ್‌ನಲ್ಲಿ ವಿಚಾರಣೆ
ಇತರ ರೋಗಿಗಳಂತೆ ಆಗಾಗ್ಗೆ ಹೋಗಿ ಕೋವಿಡ್ ರೋಗಿಗಳನ್ನು ವಿಚಾರಿಸುವುದಕ್ಕೆ ಆಗುವುದಿಲ್ಲ. ಕೌಂಟರ್‌ನಲ್ಲಿರುವ ದೂರವಾಣಿ ಸಂಖ್ಯೆಯನ್ನು ಪ್ರತಿ ರೋಗಿಗೂ ನೀಡಲಾಗುತ್ತದೆ. ಅವರಿಗೆ ಆಹಾರ, ಬಾಯಾರಿಕೆ ಅಗತ್ಯವಿದ್ದಲ್ಲಿ ಅವರೇ ಕರೆ ಮಾಡುತ್ತಾರೆ. ಸಿಬಂದಿಯೂ ಆಗಾಗ ಯೋಗ-ಕ್ಷೇಮ ವಿಚಾರಿಸುತ್ತಾರೆ.
Related Articles
ಕೆಲಸ ಮುಗಿದ ತತ್‌ಕ್ಷಣ ಆಸ್ಪತ್ರೆಯಲ್ಲೇ ಸ್ನಾನ ಮಾಡುತ್ತೇವೆ. ಸಮ ವಸ್ತ್ರವನ್ನು ಹೈಪೋಕ್ಲೋರೈಡ್‌ಗೆ ಹಾಕಿ ರೋಗಾಣುಮುಕ್ತಗೊಳಿಸಿ ಮನೆಗೆ ಹೋಗುತ್ತೇವೆ. ನೇರ ಬಚ್ಚಲು ಮನೆಗೆ ಹೋಗಿ ಮತ್ತೆ ಸ್ನಾನ ಮಾಡಿ ಬಟ್ಟೆಯನ್ನೆಲ್ಲ ಬಿಸಿನೀರಿನಲ್ಲಿ ತೊಳೆದ ಬಳಿಕವಷ್ಟೇ ಮನೆಯೊಳಗಡೆ ಹೋಗುತ್ತೇವೆ. ನಮ್ಮ ಮನೆಯಲ್ಲಿ ಪತಿ ಮತ್ತು ಮಗಳು ಇದ್ದಾರೆ. ಅವರೊಂದಿಗೆ ಸಾಮಾಜಿಕ ಅಂತರದಲ್ಲೇ ಇರುತ್ತೇನೆ ಎಂದು ತಮ್ಮ ಇತ್ತೀಚಿನ ದಿನಚರಿ ಬಗ್ಗೆ ಶಕಿಲಾ ವಿವರಿಸುತ್ತಾರೆ.
Advertisement