ವಿಶೇಷ ವರದಿ
ಹಾವೇರಿ: ಕೊರೊನಾ ಕರ್ಫ್ಯೂ ಕಾರಣದಿಂದ ನಗರ, ಮಹಾನಗರಗಳಿಂದ ಯಥೇತ್ಛ ಪ್ರಮಾಣದಲ್ಲಿ ಜನರು ಹಳ್ಳಿಗಳಿಗೆ ಮರಳಿದ ಪರಿಣಾಮ ಈಗ ಹಳ್ಳಿಗಳಲ್ಲೂ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಗ್ರಾಮೀಣ ಜನರಲ್ಲಿ ಆತಂಕ ಸೃಷ್ಟಿಸಿದೆ.
ಕೋವಿಡ್ ತಪಾಸಣೆ ಮಾಡಿಸಿಕೊಳ್ಳದೇ ಹಳ್ಳಿಗಳಿಗೆ ಮರಳಿ ಬಂದವರಿಂದ, ಕೋವಿಡ್ ತಪಾಸಣೆಗೆ ಜನ ಮುಂದಾಗದೆ ಇರುವುದರಿಂದ ಹಾಗೂ ಹಳ್ಳಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಮರೆತು ಮುಂದುವರಿದಿರುವ ಮದುವೆ, ಧಾರ್ಮಿಕ ಕಾರ್ಯಕ್ರಮಗಳಿಂದ ಹಳ್ಳಿಗಳಲ್ಲಿ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಪ್ರಸ್ತುತ ಕಂಡು ಬರುವ ಪ್ರಕರಣಗಳಲ್ಲಿ ಅರ್ಧಕ್ಕರ್ಧ ಗ್ರಾಮೀಣ ಪ್ರದೇಶಗಳಲ್ಲಿಯೇ ಗೋಚರಿಸುತ್ತಿದೆ. ಈಗೀಗ ನಗರ ಪ್ರದೇಶಗಳಲ್ಲಿ ಕೊರೊನಾ ಸುರಕ್ಷತೆ ಬಗ್ಗೆ ಅರಿವು ಮೂಡಿದ್ದು, ಬಹುತೇಕರು ಸುರಕ್ಷತಾ ಕ್ರಮಗಳ ಪಾಲನೆಯಲ್ಲಿ ತೊಡಗಿದ್ದಾರೆ. ಆದರೆ ಗ್ರಾಮೀಣ ಜನರು ಮಾತ್ರ ಕೊರೊನಾ ಸುರಕ್ಷತಾ ಕ್ರಮಗಳ ಬಗ್ಗೆ ಈವರೆಗೂ ತಲೆಕೆಡಿಸಿಕೊಂಡಿಲ್ಲ.
ಮಾಸ್ಕ್ ಇಲ್ಲದೇ ತಮ್ಮ ನಿತ್ಯ ಕೆಲಸಗಳಲ್ಲಿ ತೊಡಗುತ್ತಿದ್ದಾರೆ. ಇದರ ಜತೆಗೆ ನೂರಾರು ಜನರನ್ನು ಸೇರಿಸಿ ಮನೆ ಮುಂದೆ ಮದುವೆ ಸಮಾರಂಭಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ನೂರಾರು ಜನರು ಯಾವುದೇ ದೈಹಿಕ ಅಂತರ, ಸುರಕ್ಷತಾ ಕ್ರಮಗಳ ಪಾಲನೆ ಇಲ್ಲದೇ ಒಂದೆಡೆ ಸೇರಿ ಸೋಂಕು ಹರಡುತ್ತಲೇ ಇದ್ದಾರೆ. ಇನ್ನು ಶವಸಂಸ್ಕಾರಕ್ಕೂ ನೂರಾರು ಜನರು ಸೇರುವ ಮೂಲಕ ಕೊರೊನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದನ್ನೇ ಮರೆಯುತಿದ್ದಾರೆ. ಕೊರೊನಾ ಸೋಂಕಿನ ಬಗ್ಗೆ ಹಳ್ಳಿಗರು ತೋರುತ್ತಿರುವ ಉದಾಸೀನ ನಡೆಯಿಂದ ಈಗ ಹಳ್ಳಿಗಳಲ್ಲೂ ಕೊರಾನಾ ಅಟ್ಟಹಾಸ ಮೆರೆಯುವಂತಾಗಿದೆ.
ನಗರಗಳಂತೆ ಹಳ್ಳಿಗಳಲ್ಲೂ ಸ್ಥಳೀಯ ಅಧಿಕಾರಿಗಳು ಸುರಕ್ಷತಾ ಕ್ರಮಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುವುದು, ಅನಗತ್ಯ ಓಡಾಡದಂತೆ, ಒಂದೆಡೆ ನೂರಾರು ಜನರು ಸೇರದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರಿಗೆ ಹಳ್ಳಿಗರ ಸಹಕಾರ ಸಿಗುತ್ತಿಲ್ಲ.
ಜನರ ಈ ನಿರ್ಲಕ್ಷéದಿಂದ ಈಗ ಹಳ್ಳಿ ಹಳ್ಳಿಗಳಲ್ಲೂ ಕೊರೊನಾ ವಕ್ಕರಿಸಿ ಗ್ರಾಮೀಣ ಜನರ ನಿದ್ದೆಗೆಡಿಸಿದೆ. ತಪಾಸಣೆಗೆ ಹಿಂದೇಟು: ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಈಗಾಗಲೇ ಸೋಂಕು ಹಬ್ಬಿದೆ. ಹಾಗೆಯೇ, ಪ್ರತಿ ಹಳ್ಳಿಯಲ್ಲೂ ಹತ್ತಾರು ಜನ ಅನಾರೋಗ್ಯದಿಂದ ಬಳಲಿ ಹಾಸಿಗೆ ಹಿಡಿಯುತ್ತಿದ್ದಾರೆ. ಆದರೂ ಜನರು ಕೊರೊನಾ ತಪಾಸಣೆಗೆ ಮುಂದಾಗುತ್ತಿಲ್ಲ. ಕೆಲವರು ಔಷಧ ಅಂಗಡಿಯಿಂದ ಜ್ವರ, ಶೀತಕ್ಕೆ ತಾವೇ ಕೇಳಿ ತಂದ ಔಷಧಿ ಸೇವಿಸುತ್ತಿದ್ದರೆ ಮತ್ತೆ ಕೆಲವರು ಸ್ಥಳೀಯವಾಗಿ ಸಿಗುವ ವೈದ್ಯರಿಂದ ಚಿಕಿತ್ಸೆ ಪಡೆದು ಮನೆಯಲ್ಲಿಯೇ ಇದ್ದಾರೆ. ಇದರಿಂದ ಕೆಲ ಸೋಂಕಿತರ ಆರೋಗ್ಯ ಸ್ಥಿತಿ ಗಂಭೀರತೆಯತ್ತ ಸಾಗುತ್ತಿದ್ದು, ಕೊನೆಯ ಘಳಿಗೆಯಲ್ಲಿ ವೆಂಟಿಲೇಟರ್, ಆಕ್ಸಿಜನ್ ಬೆಡ್ ಸಿಗದೆ ಪ್ರಾಣ ಬಿಡುವ ಪ್ರಸಂಗಗಳೂ ಹೆಚ್ಚಾಗುತ್ತಿವೆ.
ಒಟ್ಟಾರೆ ಕೊರೊನಾ ಸೋಂಕು ಹಳ್ಳಿಗಳಲ್ಲಿ ಹಬ್ಬುತ್ತಲೇ ಇದ್ದು, ಸೋಂಕಿನ ಸರಪಳಿ ತುಂಡರಿಸಲು ಸ್ಥಳೀಯ ಆಡಳಿತಗಳು ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. ಜತೆಗೆ ಎಲ್ಲರ ಕಡ್ಡಾಯ ತಪಾಸಣೆ, ಸೋಂಕಿತರಿಗೆ ಸೂಕ್ತ ಚಿಕಿತ್ಸೆ, ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಕಾರ್ಯಕ್ಕೂ ಅಣಿಯಾಗಬೇಕಿದೆ.