Advertisement

ಗ್ರಾಮೀಣರಿಗೆ ಆಘಾತ ತಂದ ಕೋವಿಡ್ ಸೋಂಕು

01:55 PM May 18, 2021 | Team Udayavani |

ವರದಿ: ­ಮಲ್ಲಿಕಾರ್ಜುನ ಕಲಕೇರಿ

Advertisement

ಗುಳೇದಗುಡ್ಡ: ತಾಲೂಕಿನಲ್ಲಿ ಕೊರೊನಾ ತೀವ್ರಗತಿಯಲ್ಲಿ ಹರಡುತ್ತಿದ್ದು, ಗುಳೇ ಹೋಗಿಬಂದವರಿಗೆ ಹಾಗೂ ಮೃತಪಟ್ಟವರ ಮನೆಗೆ ಸಾಂತ್ವನ ಹೇಳಲು ಹೋದವರಿಗೆ ಕೊರೊನಾ ವಕ್ಕರಿಸಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲೂ ಕೊರೊನಾ ವಕ್ರದೃಷ್ಟಿ ಬೀರಿದೆ.

ಕಳೆದ ಎರಡು ತಿಂಗಳು ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಕೊರೊನಾ ಕೇಸ್‌ಗಳಿಲ್ಲದೇ ಸ್ವತ್ಛಂದವಾಗಿದ್ದವು. ಆದರೆ, ಏಪ್ರಿಲ್‌ ಮೊದಲ ವಾರದಿಂದ ಕೊರೊನಾದಿಂದ ಪ್ರತಿ ಗ್ರಾಮದಲ್ಲಿಯೂ ಈಗ ಕೊರೊನಾ ರೋಗಿಗಳು ಕಂಡುಬರುತ್ತಿದ್ದಾರೆ. ಗುಳೇದಗುಡ್ಡ ತಾಲೂಕಿನಲ್ಲಿ ಒಟ್ಟು 35 ಗ್ರಾಮಗಳಿದ್ದು, ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ.

ತಾಲೂಕಿನ 9 ಹಳ್ಳಿಗಳು ಬಾದಾಮಿ ತಾಲೂಕಿನ ಪಟ್ಟದಕಲ್ಲ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುತ್ತವೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಇದುವರೆಗೂ 482 ಜನರಿಗೆ ಕೊರೊನಾ ಪ್ರಕರಣಗಳು ಗ್ರಾಮೀಣ ಭಾಗದಲ್ಲಿವೆ. ಗುಳೇ ಹೋಗಿ ಬಂದವರಿಗೆ ಕೊರೊನಾ: ತಾಲೂಕಿನ ನಾಗರಾಳ ಎಸ್‌.ಪಿ ಗ್ರಾಮದಲ್ಲಿ ಕೊರೊನಾ ಪ್ರಕರಣಗಳು ಸಾಕಷ್ಟಿದ್ದು, ಈ ಗ್ರಾಮಕ್ಕೆ ಮಂಗಳೂರು, ಉಡುಪಿ, ಗೋವಾಕ್ಕೆ ದುಡಿಯಲು ಹೋಗಿ ಬಂದವರಿಂದಲೇ ಕೊರೊನಾ ಕೇಸ್‌ ಹೆಚ್ಚಿವೆ. 28ಜನರಿಗೆ ಕೊರೊನಾ ವಕ್ಕರಿಸಿದ್ದು, ಇವರ ಸಂಪರ್ಕದಿಂದ 12ಜನರಿಗೆ ಒಟ್ಟು 40ಜನರಿಗೆ ಗ್ರಾಮದಲ್ಲಿ ಕೊರೊನಾ ಆವರಿಸಿದೆ.

ತಾಲೂಕು ಆಡಳಿತ ಗುಳೆ ಹೋಗಿ ಬಂದವರನ್ನು ತಪಾಸಣೆ ಮಾಡಿದಾಗ ಅವರಲ್ಲಿ 28 ಜನರಿಗೆ ಪಾಸಿಟಿವ್‌ ಬಂದಿತ್ತು. ಅವರನ್ನು ಮನೆಯಲ್ಲಿರುವಂತೆ ಸೂಚಿಸಿದ್ದರು. ಆದರೆ, ಗ್ರಾಮದ ತುಂಬೆಲ್ಲ ಸಂಚರಿಸಿದ್ದರು. ಅದರ ಪರಿಣಾಮವೇ ಮತ್ತೆ 12 ಜನರಿಗೆ ಕೊರೊನಾ ವಕ್ಕರಿಸಿತು.

Advertisement

ಕಟಗೇರಿ ಆರೋಗ್ಯ ಕೇಂದ್ರ: ಈ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಗುಳೇದಗುಡ್ಡ ತಾಲೂಕಿನ 12 ಗ್ರಾಮ, ಬಾದಾಮಿ ತಾಲೂಕಿನ 2 ಗ್ರಾಮಗಳು ಬರಲಿದ್ದು, ಗುಳೇದಗುಡ್ಡ ತಾಲೂಕಿನ ಒಟ್ಟು 12 ಗ್ರಾಮಗಳಲ್ಲಿ ಮೇ 15ರವರೆಗೆ 119ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಕಟಗೇರಿ 19, ಜಮ್ಮನಕಟ್ಟಿ 10, ಹುಲಗೇರಿ 5, ಲಕ್ಕಸಕೊಪ್ಪ 3, ಹಂಗರಗಿ 22, ಕೊಂಕಣಕೊಪ್ಪ 16, ಹಿರೇಬೂದಿಹಾಳ 6, ಖಾಜಿಬೂದಿಹಾಳ 4, ಕೆಲವಡಿ ರೇಲ್ವೆ ಸ್ಟೇಶನ್‌ 26 ಇದರಲ್ಲಿ ಮೃತ ವ್ಯಕ್ತಿಯ ಕುಟುಂಬದ ಸದಸ್ಯರು, ಸಂಬಂಧಿಕರು ಸೇರಿ 18ಜನರಿಗೆ, ತಿಮ್ಮಸಾಗರ 3, ಲಿಂಗಾಪುರ 2, ತೆಗ್ಗಿ 3 ಒಟ್ಟು 119 ಕೊರೊನಾ ಪ್ರಕರಣಗಳಿವೆ. ಇದರಲ್ಲಿ 22ಜನರು ಗುಣಮುಖರಾಗಿದ್ದಾರೆ.

ತೋಗುಣಶಿ ಕೇಂದ್ರ: ಈ ತೋಗುಣಶಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 18 ಹಳ್ಳಿಗಳು ಬರಲಿದ್ದು, ಒಟ್ಟು 36 ಜನರಿಗೆ ಕೊರೊನಾ ದೃಢಪಟ್ಟಿದೆ. ತೋಗುಣಶಿ 4, ಕೋಟೆಕಲ್‌ 4, ಪರ್ವತಿ 1, ಖಾನಾಪುರ 1, ಪಾದನಕಟ್ಟಿ 1, ಹಾನಾಪುರ 17, ಹಂಸನೂರ 4, ರಾಘಾಪುರದಲ್ಲಿ 1 ಕೊರೊನಾ ಪ್ರಕರಣಗಳು ಕಂಡು ಬಂದಿವೆ. ಪಟ್ಟದಕಲ್ಲ ಕೇಂದ್ರ: ಈ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಗುಳೇದಗುಡ್ಡದ 9 ಗ್ರಾಮಗಳು ಬರಲಿವೆ. ಕಾಟಾಪುರ 1, ಮಂಗಳಗುಡ್ಡ 6, ಚಿಮ್ಮಲಗಿ 2, ಲಾಯದಗುಂದಿ 1, ನಾಗರಾಳ ಎಸ್‌ಪಿ. 40, ಸಬ್ಬಲಹುಣಸಿ 5, ಕಟಗಿನಹಳ್ಳಿ 4, ಆಸಂಗಿ 1 ಒಟ್ಟು 8 ಗ್ರಾಮಗಳಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದಿವೆ. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ 482 ಕೊರೊನಾ ಪ್ರಕರಣಗಳು ದಾಖಲಾಗಿವೆ. ಗ್ರಾಮೀಣ ಭಾಗದ ಜನತೆ ಕಡ್ಡಾಯವಾಗಿ ಮಾಸ್ಕ್ ಹಾಕದೇ ಇರದೇ ನಿರ್ಲಕ್ಷ್ಯ ವಹಿಸಿದ್ದು, ಕಳೆದ ವರ್ಷದಿಂದ ಮದುವೆಗಳು, ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುವುದು, ಆರಂಭದಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳದಿರುವುದು, ಜಾತ್ರೆ, ಮತ್ತು ವಾರದ ಸಂತೆಗಳಲ್ಲಿ ಸಾವಿರಾರು ಜನರು ಮುಗಿಬಿದ್ದು ಖರೀದಿಸುವುದು ಸೇರಿದಂತೆ ಇನ್ನಿತರ ಕಾರಣಗಳೇ ಕೊರೊನಾ ಎರಡನೇ ಅಲೆ ಅಟ್ಟಹಾಸಕ್ಕೆ ಕಾರಣವಾಗಿದೆ.

ಗ್ರಾಪಂ, ಆಶಾಕಾರ್ಯಕರ್ತೆಯರ ಸೇವೆ: ಗ್ರಾಮೀಣ ಭಾಗದಲ್ಲಿ ಕೊರೊನಾ ಹಾವಳಿ ಹೆಚ್ಚಾಗದಂತೆ ತಡೆಯಲು 12 ಪಿಡಿಒ, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಶ್ರಮಿಸುತ್ತಿದ್ದಾರೆ. ಕೆಲವಡಿ, ಹಾನಾಪುರ, ಹಳದೂರ, ಕೋಟೆಕಲ್‌, ಲಾಯದಗುಂದಿ, ಹಂಗರಗಿ ಗ್ರಾಪಂನಿಂದ ಆಯಾ ಗ್ರಾಮಗಳಲ್ಲಿ ಸ್ಯಾನಿಟೈಸರ್‌ ಸಿಂಪರಣೆ ಮಾಡುವದು, ಗಟಾರ್‌ ಸ್ವತ್ಛತೆ, ಪಿಡಿಒ, ಪಂಚಾಯಿತಿ ಸಿಬ್ಬಂದಿ ಗ್ರಾಮದಲ್ಲಿ ನಿತ್ಯವು ಗಸ್ತು ತಿರುಗಿ ಜನರಿಗೆ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನೂ ಕೆಲ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರೇ ಪಂಚಾಯಿತಿ ಸಿಬ್ಬಂದಿಗಳ ಮೂಲಕ ಸ್ಯಾನಿಟೈಸರ್‌, ಸ್ವತ್ಛತೆಗೊಳಿಸುವ ಕಾರ್ಯ ಕೈಗೊಂಡಿದ್ದಾರೆ. ಅಲ್ಲದೇ ಪ್ರತಿ ಮನೆಗಳಿಗೂ ತೆರಳಿ ಜನರಿಗೆ ಕೊರೊನಾದ ಬಗ್ಗೆ ಎಚ್ಚರದಿಂದ ಇರುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next