ಲಂಡನ್: ಯುಕೆ ಜನರು ಲಾಕ್‌ಡೌನ್ ಸಡಿಲಿಕೆಯನ್ನು ತುಸು ಹೆಚ್ಚಾಗಿಯೇ ಆನಂದಿಸುತ್ತಿದ್ದಾರೆ. ಕೋವಿಡ್ ಆತಂಕದ ನಡುವೆಯೇ ಸರಕಾರ ಲಾಕ್‌ಡೌನ್ ಸಡಿಲಿಕೆ ಮಾಡಿತ್ತು.
ಆದರೆ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಕಡ್ಡಾಯಗಳಂತಹ ನಿಯಮಗಳು ಹಾಗೇ ಇವೆ. ಇಲ್ಲಿನ ಜನರು ಮಾತ್ರ ನಿಯಮಗಳಿಗೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಗುರುವಾರ ಇಲ್ಲಿನ ಬೀಚ್‌ವೊಂದರಲ್ಲಿ ಜನ ಕಿಕ್ಕಿರಿದು ತುಂಬಿದ್ದು, ಸಾಮಾಜಿಕ ಅಂತರ ಇರಲೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಹೆಚ್ಚು ಚರ್ಚೆಗೆ ಒಳಗಾಗಿತ್ತು.
ಜನರ ಬೇಜವಾಬ್ದಾರಿತನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಆರೋಗ್ಯ ಸಚಿವ ಪರಿಸ್ಥಿತಿ ಹೀಗೆ ಮುಂದುವರಿದರೆ ಬೀಚ್‌ಗಳನ್ನು ಬಂದ್ ಮಾಡಿ ದೇಶದಲ್ಲಿ ಮತ್ತೆ ಕಠಿನ ಲಾಕ್‌ಡೌನ್ ನಿಯಮಗಳನ್ನು ಹೇರಲಾಗುವುದು ಎಂದು ಎಚ್ಚರಿಸಿದ್ದಾರೆ.
ಸಡಿಲಿಕೆ ಮಾಡಿದ ಕಾನೂನುಗಳನ್ನು ಮತ್ತೆ ಹೇರುವ ಅವಕಾಶ ಸರಕಾರಕ್ಕೆ ಇದ್ದು, ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾದರೆ ಮುಂದೆ ಅದರ ಬಗ್ಗೆ ತೀರ್ಮಾನಿಸಲಾಗುವುದು ಎಂದಿದ್ದಾರೆ.
ಜುಲೈ ತಿಂಗಳಲ್ಲಿ ಲಾಕ್‌ಡೌನ್‌ನ್ನು ಸಂಪೂರ್ಣ ವಾಗಿ ಹಿಂದೆಗೆಯುವ ಯೋಚನೆಯಿದ್ದು, ಜನರ ವರ್ತನೆ ಬೇಸರ ತರಿಸಿದೆ ಎಂದಿದ್ದಾರೆ. ದಿನಕ್ಕೆ ಸಾವಿರಕ್ಕಿಂತಲೂ ಅಧಿಕ ಮಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ.