Advertisement
ಸಾಮಾನ್ಯವಾಗಿ ಪ್ರತಿ ವಾರ ಚಿತ್ರರಂಗದಲ್ಲಿ ಐದಾರು ಸಿನಿಮಾಗಳು ಬಿಡುಗಡೆಯಾಗುತ್ತಲೇ ಬಂದಿವೆ. ಆದರೆ ವೈರಸ್ ನಿಂದಾಗಿ ನಾಲ್ಕೈದು ವಾರದಿಂದ ಯಾವುದೇ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಸಿನಿಟ್ರಾಫಿಕ್ ಜೋರಾಗಲಿದೆ. ಈಗಾಗಲೇ ಮಾರ್ಚ್ ಹಾಗೂ ಏಪ್ರಿಲ್ ನಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ದವು. ಆದರೆ ಈ ಕೋವಿಡ್ ನಿಂದಾಗಿ ಲೆಕ್ಕಾಚಾರ ತಲೆಕೆಳಗಾಗಿದೆ. ಹೊಸಬರ, ಸ್ಟಾರ್ ಗಳ … ಹೀಗೆ ಸಾಕಷ್ಟು ಸಿನಿಮಾಗಳು ಸರತಿಯಲ್ಲಿವೆ. ಹಾಗಾದರೆ ಈ ಎಲ್ಲಾ ಚಿತ್ರಗಳ ಬಿಡುಗಡೆ ಯಾವಾಗ ಎಂದರೆ ಅದಕ್ಕೆ ಉತ್ತರವಿಲ್ಲ.
Related Articles
Advertisement
ಸದ್ಯ ಬಿಡುಗಡೆಗೆ ತುಂಬಾ ಸಿನಿಮಾಗಳು ರೆಡಿಯಾಗಿವೆ. ಆದ್ರೆ ಕೊರೊನಾ ಲಾಕ್ ಡೌನ್ ನಿಂದ ಸದ್ಯಕ್ಕೆ ಎಲ್ಲ ಕೆಲಸಗಳೂ 2-3 ತಿಂಗಳು ಮುಂದಕ್ಕೆ ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಚಿತ್ರರಂಗ ಮತ್ತೆ ಮೊದಲಿನ ಸ್ಥಿತಿಗೆ ಬರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆಯೊ ಗೊತ್ತಿಲ್ಲ. ಚಿತ್ರಮಂದಿರಗಳಲ್ಲಿ ಮತ್ತೆ ಪ್ರದರ್ಶನ ಶುರುವಾದ ನಂತರ ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾಗಳಿಗೆ ಮೊದಲು ಅವಕಾಶ ಕೊಡಬೇಕು, ಕೆಲ ದಿನಗಳ ಮಟ್ಟಿಗೆ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಡಬೇಕು ಅಂತ ಪ್ರದರ್ಶಕರು, ಮತ್ತು ವಾಣಿಜ್ಯ ಮಂಡಳಿಗೆ ಮನವಿ ಮಾಡಿಕೊಂಡಿದ್ದೇವೆ.
ಅದಾದ ನಂತರ ಬಿಡುಗಡೆಗೆ ಸಿದ್ದವಿರುವ ಸಿನಿಮಾಗಳನ್ನು ಪರಸ್ಪರ ಸಹಕಾರದ ಮೇರೆಗೆ ಕೆಲವೇ ಸಂಖ್ಯೆಗಳಲ್ಲಿ ಬಿಡುಗಡೆಗೊಳಿಸುವಂತೆ ನಿರ್ಮಾಪಕರು, ಪ್ರದರ್ಶಕರ ಜೊತೆಗೆ ಒಮ್ಮೆ ಮಾತನಾಡುತ್ತೇವೆ. ಒಟ್ಟಿನಲ್ಲಿ ಒಂದೇ ಸಲ ಹತ್ತಾರು ಸಿನಿಮಾಗಳು ಬಿಡುಗಡೆಯಾದರೆ, ಎಲ್ಲರಿಗೂ ತೊಂದರೆ ಅನ್ನೊದನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತೇವೆ.– ಪ್ರವೀಣ್ ಕುಮಾರ್, ನಿರ್ಮಾಪಕರ ಸಂಘದ ಅಧ್ಯಕ್ಷ ಒಂದೇ ಸಲಕ್ಕೆ ಒಂದರ ಹಿಂದೊಂದು ಸಿನಿಮಾಗಳು ಬಿಡುಗಡೆಯಾದರೆ, ಯಾವ ಸಿನಿಮಾಗಳೂ ಗೆಲ್ಲೊದು ಕಷ್ಟ. ಆದಷ್ಟು ಸಿನಿಮಾ ಬಿಡುಗಡೆಗೆ ತಯಾರಾಗಿರುವ ನಿರ್ಮಾಪಕರು ತಮ್ಮ ಸಿನಿಮಾ ಬಿಡುಗಡೆಗೂ ಮುನ್ನ ಸಾಕಷ್ಟು ಬಾರಿ ಯೋಚಿಸಿ, ಸರಿಯಾದ ಸಿದ್ಧತೆ ಮಾಡಿಕೊಂಡು ಬಿಡುಗಡೆ ಮಾಡುವುದು ಒಳ್ಳೆಯದು. ಇದಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಮಂಡಳಿ ಯಾವಾಗಲೂ ಸಲಹೆ, ಸಹಕಾರ ಕೊಡಲು ಸಿದ್ಧವಿದೆ. ಸದ್ಯ ವೈರಸ್ ಎಫೆಕ್ಟ್ ಯಾವಾಗ ಕಡಿಮೆಯಾಗುತ್ತದೆ, ಜನ ಥಿಯೇಟರ್ ಗೆ ಯಾವಾಗ ಬರುತ್ತಾರೆ ಅನ್ನೋದು ಮೊದಲು ಗೊತ್ತಾಗಬೇಕು. ಎಲ್ಲವೂ ಸಹಜ ಸ್ಥಿತಿಗೆ ಬರುತ್ತಿದ್ದಂತೆ, ಸಿನಿಮಾಗಳ ಬಿಡುಗಡೆಗೆ ಸಂಬಂಧಿಸಿದಂತೆ ಒಂದಷ್ಟು ಮಾರ್ಗದರ್ಶಕ ಸೂತ್ರಗಳನ್ನು ಮಾಡುವ ಪ್ರಯತ್ನ ಮಾಡುತ್ತೇವೆ.
-ಜೈರಾಜ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ