Advertisement

ಕೋವಿಡ್ ಲಸಿಕೆ ವಿತರಣೆ ತಯಾರಿ; ಕೇವಲ ಶೇ.15 ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹ

01:21 PM Oct 29, 2020 | keerthan |

ಬೆಂಗಳೂರು: ಕೋವಿಡ್ ಲಸಿಕೆ ವಿತರಣೆ ಹಿನ್ನೆಲೆ ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹಕ್ಕೆ ಕೊನೆಯ ಎರಡು ದಿನ ಬಾಕಿ ಇದ್ದು, ಈವರೆಗೂ ರಾಜ್ಯದಲ್ಲಿ ಶೇ.15 ರಷ್ಟು ಮಾತ್ರ ಮಾಹಿತಿ ಸಂಗ್ರಹವಾಗಿದೆ.

Advertisement

ರಾಜ್ಯದ ಒಟ್ಟಾರೆ ನೋಂದಾಯಿತ 23,826 ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳ ಪೈಕಿ ಈವರೆಗೂ 3,560 ಕೇಂದ್ರಗಳು ಮಾತ್ರ ತನ್ನ ಸಿಬ್ಬಂದಿ ಮಾಹಿತಿ ನೀಡಿವೆ. ಅದರಲ್ಲೂ, ಖಾಸಗಿ ಆರೋಗ್ಯ ಕೇಂದ್ರಗಳು ತನ್ನ ಸಿಬ್ಬಂದಿ ಮಾಹಿತಿ ನೀಡುವಲ್ಲಿ ಶೇ.90 ರಷ್ಟು ಹಿಂದುಳಿದಿವೆ.

ಮುಂದಿನ ವರ್ಷದ ಆರಂಭದಲ್ಲಿಯೇ ಕೋವಿಡ್ ಲಸಿಕೆ ಲಭ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಅಲ್ಲದೆ, ಆರಂಭಿಕ ಹಂತದಲ್ಲಿ ಲಸಿಕೆಯನ್ನು ಆರೋಗ್ಯ ಕೇಂದ್ರಗಳ ಕಾರ್ಯಕರ್ತರಿಗೆ ನೀಡಬೇಕು ಎಂದು ಸೂಚಿಸಿದೆ. ಈ ಬೆನ್ನಲ್ಲೆ ಕಳೆದ ಒಂದು ವಾರದಿಂದ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹ ಕಾರ್ಯವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ.

ಸದ್ಯ ಈವರೆಗೂ 20,930 ಖಾಸಗಿ ಆರೋಗ್ಯ ಕೇಂದ್ರಗಳ ಪೈಕಿ ಕೇವಲ 2,200 ಆರೋಗ್ಯ ಕೇಂದ್ರಗಳು ಮಾತ್ರ ತನ್ನ ಸಿಬ್ಬಂದಿಗಳ ಮಾಹಿತಿ ನೀಡಿವೆ. ಉಳಿದ 18,730 ಖಾಸಗಿ ಆರೋಗ್ಯ ಕೇಂದ್ರಗಳು ಇಂದಿಗೂ ಸಿಬ್ಬಂದಿ ಮಾಹಿತಿ ನೀಡಿಲ್ಲ. ಉಳಿದಂತೆ 2,896 ಸರ್ಕಾರಿ ಆರೋಗ್ಯ ಕೇಂದ್ರಗಳ ಪೈಕಿ 1,360 ಕೇಂದ್ರಗಳು ಸಿಬ್ಬಂದಿ ಮಾಹಿತಿ ನೀಡಿವೆ.

ಇದನ್ನೂ ಓದಿ:ಆರೋಗ್ಯ ಸೇತು ಆ್ಯಪ್‌ ಅಭಿವೃದ್ಧಿಪಡಿಸಿದ್ಯಾರು?

Advertisement

ಅ.31 ಕೊನೆಯ ದಿನ

ಆರೋಗ್ಯ ಕೇಂದ್ರಗಳು ಮಾಹಿತಿ ನೀಡಲು ಅ.31 ಕೊನೆಯ ದಿನವಾಗಿದೆ. ಆದರೆ, ಈವರೆಗೂ ಶೇ. 90 ರಷ್ಟು ಖಾಸಗಿ ಮತ್ತು ಶೇ. 44 ರಷ್ಟು ಸರ್ಕಾರಿ ವಲಯದ ಮಾಹಿತಿ ಲಭ್ಯವಾಗಬೇಕಿದೆ. ಉಳಿದಿರುವ ಎರಡು ದಿನಗಳಲ್ಲಿ ಶೇ.100 ರಷ್ಟು ಮಾಹಿತಿ ನೀಡುವುದು ಕಷ್ಟ ಸಾಧ್ಯ ಎಂದು ಹೇಳಲಾಗುತ್ತಿದೆ.

ಮಾಹಿತಿ ಸಂಗ್ರಹಿಸಿ ಮುಂದೇನು?

ಆರೋಗ್ಯ ಸಿಬ್ಬಂದಿಗಳ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಅಧಿಕೃತ ಆನ್‌ಲೈನ್ ಪೋರ್ಟ್ಲ್‌ಗೆ ಸೇರಿಸಲಾಗುತ್ತದೆ. ಇದನ್ನು ಆಧರಿಸಿ ಮೊದಲ ಹಂತದ ಲಸಿಕೆ ವಿತರಣೆ ನಡೆಯಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್-19 ಲಸಿಕೆ ಹಂಚಿಕೆ ಕಾರ್ಯಕ್ರಮಕ್ಕೆ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಉಳಿದಂತೆ ಜಿಲ್ಲೆಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ (ಆರ್‌ಸಿಎಚ್‌ಒ)ಗಳು ಲಸಿಕೆ ಕಾರ್ಯಕ್ರಮದ ಉಸ್ತುವರಿ ಕಾರ್ಯನಿರ್ವಹಿಸುತ್ತಾರೆ. ಯುಎನ್‌ಡಿಪಿ ತಂತ್ರಜ್ಞಾನ ಸಹಕಾರ ನೀಡುತ್ತಿದೆ.

ಮಾಹಿತಿ ನೀಡಿ ನೋಂದಾಯಿಸಿಕೊಳ್ಳಿ

ಆರೋಗ್ಯ ಇಲಾಖೆಯಿಂದ ಈಗಾಗಲೇ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳಿಗು ಸುತ್ತೋಲೆ ನೀಡಿ ಸಿಬ್ಬಂದಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಈವರೆಗೂ ತನ್ನ ಸಿಬ್ಬಂದಿ ಮಾಹಿತಿ ನೀಡಿದ ಆರೋಗ್ಯ ಕೇಂದ್ರಗಳು ಕೂಡಲೇ ಜಿಲ್ಲೆಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಗೆ (ಆರ್‌ಸಿಎಚ್‌ಒ) ಸಂಪರ್ಕಿಸಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಉಪನಿರ್ದೇಶಕಿ ಲಸಿಕಾಕರಣ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎನ್.ರಜನಿ ಮನವಿ ಮಾಡಿದ್ದಾರೆ.

ಮಾಹಿತಿ ನಮೂನೆಯಲ್ಲಿ ಏನಿದೆ?

ಆರೋಗ್ಯ ಕೇಂದ್ರಗಳಿಗೆ ನೀಡಿರುವ ಮಾಹಿತಿ ನಮೂನೆಯಲ್ಲಿ ಆರೋಗ್ಯ ಕಾರ್ಯಕರ್ತರು ಹೆಸರು, ವಯಸ್ಸು, ವಿಳಾಸ, ಮೊಬೈಲ್ ಸಂಖ್ಯೆ, ಗುರುತಿನ ಚೀಟಿ ಮಾಹಿತಿಗಳನ್ನು ನಮೂದಿಸಬೇಕಿದೆ.  ಖಾಸಗಿ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಚುನಾವಣಾ ಗುರುತಿನ ಚೀಟಿ ಅಥವಾ ವಾಹನ ಚಾಲನ ಪರವಾನಗಿ ನೀಡಬೇಕಿದೆ.

ಅ.31 ರವರೆಗೂ ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹಕ್ಕೆ ಮಾಡಲಾಗುತ್ತದೆ. ಆರೋಗ್ಯ ಇಲಾಖೆಯಲ್ಲಿಯೇ 80 ಸಾವಿರಕ್ಕೂ ಅಧಿಕ ಸಿಬ್ಬಂದಿ ಇದ್ದು, ಸರ್ಕಾರಿ ವೈದ್ಯಕೀಯ ಕಾಲೇಜು, ಖಾಸಗಿ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಸೇರಿ ನಾಲ್ಕೈದು ಲಕ್ಷ ಆರೋಗ್ಯ ಕಾರ್ಯಕರ್ತರಾಗಬಹುದು.

ಡಾ.ಓಂ ಪ್ರಕಾಶ್ ಪಾಟೀಲ, ನಿರ್ದೇಶಕರು, ಆರೋಗ್ಯ ಇಲಾಖೆ.

 

ಜಯಪ್ರಕಾಶ್ ಬಿರಾದಾರ್

Advertisement

Udayavani is now on Telegram. Click here to join our channel and stay updated with the latest news.

Next