Advertisement

ಪುಣೆಯಿಂದ ರಸ್ತೆ ಮಾರ್ಗವಾಗಿ ಬೆಳಗಾವಿಗೆ ಬಂದು ತಲುಪಿದ ಕೋವಿಡ್ ಲಸಿಕೆ

09:09 AM Jan 13, 2021 | Team Udayavani |

ಬೆಳಗಾವಿ: ಬಹು ನಿರೀಕ್ಷೆಯ ಕೋವಿಡ್ ಲಸಿಕೆ ಪುಣೆಯಿಂದ ಬುಧವಾರ ಬೆಳ್ಳಂಬೆಳಗ್ಗೆ 5 ಗಂಟೆಗೆ ಪೊಲೀಸ್ ಬಂದೋಬಸ್ತ್ ನಲ್ಲಿ ರಸ್ತೆ ಮಾರ್ಗವಾಗಿ ಬೆಳಗಾವಿ ತಲುಪಿದೆ.

Advertisement

ಬೆಳಗ್ಗೆ 6 ಗಂಟೆಗೆ ಲಸಿಕೆ ತುಂಬಿಕೊಂಡು ವ್ಯಾನ್ ಬೆಳಗಾವಿಗೆ ಬರಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದರು. ಆದರೆ 5 ಗಂಟೆಗೆ ವ್ಯಾನ್ ಬಂದಿದ್ದರಿಂದ ವ್ಯಾನ್ ಚಾಲಕರು ಕೆಲ ಹೊತ್ತು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಸುಮಾರು ಒಂದು ಗಂಟೆಗಳ ಕಾಲ ವಾಹನ ಚಾಲಕರು ಅಧಿಕಾರಿಗಳ ಬರುವಿಕೆಗಾಗಿ ಕಾದರು.

ಕಚೇರಿಗೆ ವಾಕ್ ಇನ್ ಕೂಲರ್‌ ನಿರ್ವಹಣಾ ಸಿಬ್ಬಂದಿ ಆಗಮಿಸದ ಹಿನ್ನೆಲೆ‌ ಕೊರೊನಾ ಲಸಿಕೆ ಹೊತ್ತು ನಿಂತಿರುವ ವಾಹನ ಆನ್ ಮಾಡಿಯೇ ನಿಲ್ಲಿಸಲಾಗಿತ್ತು. ವಾಹನ‌ ಚಾಲಕ‌‌ನಿಗೆ ಹಾಗೂ ಪೊಲೀಸರಿಗೆ ಲಸಿಕೆಗಳನ್ನು ಎಲ್ಲಿ ಇಡಬೇಕೆಂಬ ಮಾಹಿತಿ ಇರಲಿಲ್ಲ. 2 ಡಿಗ್ರಿ ಸೆಲ್ಸಿಯಸ್ ನಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಲಸಿಕೆ ಇರಿಸಬೇಕಾದ ಅನಿವಾರ್ಯತೆ ಇದ್ದು, ಬೇಗ ವಾಕ್ ಇನ್ ಕೂಲರ್‌ನಲ್ಲಿ ಲಸಿಕೆ ಸಂಗ್ರಹಿಸಬೇಕಾದ ಸಿಬ್ಬಂದಿಗಳೂ ನಾಪತ್ತೆ ಆಗಿದ್ದರಿಂದ ಪರದಾಡುವಂತಾಯಿತು.

ಇದನ್ನೂ ಓದಿ:ಬಿಎಸ್ ವೈ ಗೆ ಸಂಪುಟ ಸಂಕಟ: ಮುನಿರತ್ನ ಸೇರ್ಪಡೆಗೆ ಕಸರತ್ತು, ನಾಗೇಶ್ ಗೆ ಕೊಕ್?

ಮಹಾರಾಷ್ಟ್ರದ ಪುಣೆ ಸೀರಮ್‌ ಇನ್ಸಟ್ಯೂಟ್ ದಿಂದ ರಸ್ತೆ ಮಾರ್ಗವಾಗಿ 1.47 ಲಕ್ಷ ಲಸಿಕೆಗಳನ್ನು ತುಂಬಿಕೊಂಡು ವ್ಯಾನ್ ಬೆಳಗಾವಿ ನಗರ ಪ್ರವೇಶಿಸಿದೆ. ಮಹಾರಾಷ್ಟ್ರ ಪೊಲೀಸರ ಎಸ್ಕಾರ್ಟ್ ದಿಂದ ಕೊಗನೊಳ್ಳಿ ಚೆಕ್‌ಪೋಸ್ಟ್ ವರೆಗೆ ಬಂದ ವ್ಯಾನ್ ನಂತರ ನಮ್ಮ‌ ರಾಜ್ಯದ ಗಡಿಯಲ್ಲಿ ಪೊಲೀಸರು ಬಂದೋಬಸ್ತ್ ನಲ್ಲಿ ವ್ಯಾನ್ ಪ್ರವೇಶಿಸಿತು.

Advertisement

ಬೆಳಗ್ಗೆ 5 ಗಂಟೆಗೆ ಬೆಳಗಾವಿ ನಗರಕ್ಕೆ ಬಂದ ವ್ಯಾನ್ ನೇರವಾಗಿ ವ್ಯಾಕ್ಸಿನ್ ಡಿಪೋದಲ್ಲಿರುವ ಲಸಿಕೆ ಉಗ್ರಾಣಕ್ಕೆ ತಲುಪಿತು. ಬೆಳಗ್ಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಅಧಿಕಾರಿ ಈಶ್ವರ ಗಡಾದ, ಡಾ. ತುಕ್ಕಾರ, ಡಾ. ಕಿವಡಸಣ್ಣವರ ಸೇರಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ವ್ಯಾನ್ ಗೆ ಪೂಜೆ ಸಲ್ಲಿಸಿ ಲಸಿಕೆಯನ್ನು ಬರಮಾಡಿಕೊಂಡರು.

ಲಸಿಕೆಗಳನ್ನು ಬುಧವಾರ ಬೆಳಗ್ಗೆ 11 ಗಂಟೆ ನಂತರ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಿಗೆ ಸರಬರಾಜು ಮಾಡಲಾಗುವುದು. ರಾಜ್ಯದಿಂದ ನಿರ್ದೇಶನ ಬಂದ ಬಳಿಕೆ ಯಾವ ಜಿಲ್ಲೆಗೆ ಎಷ್ಟು ಸರಬರಾಜು ಮಾಡಬೇಕು ಎಂಬುದರ ಬಗ್ಗೆ ಅಧಿಕಾರಿಗಳು ನಿರ್ಧರಿಸಲಿದ್ದಾರೆ. ಉಗ್ರಾಣಕ್ಕೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next