Advertisement

45+ ಎಲ್ಲರಿಗೂ ಲಸಿಕೆ : ಎ. 1ರಿಂದಲೇ ಜಾರಿಗೆ ಕೇಂದ್ರ ಸಂಪುಟ ನಿರ್ಧಾರ

07:09 AM Mar 24, 2021 | Team Udayavani |

ಹೊಸದಿಲ್ಲಿ: ನಿಮಗೆ 45 ವರ್ಷ ತುಂಬಿದ್ದರೆ ಎ. 1ರಿಂದ ನೀವು ಕೂಡ ಕೊರೊನಾ ಲಸಿಕೆ ಹಾಕಿಸಿಕೊಳ್ಳಬಹುದು.

Advertisement

ಇದು ಕೇಂದ್ರ ಸಚಿವ ಸಂಪುಟ ಸಭೆಯ ನಿರ್ಣಯ. ಇದುವರೆಗೆ 45 ವರ್ಷಕ್ಕಿಂತ ಮೇಲ್ಪಟ್ಟ ಇತರ ರೋಗಪೀಡಿತರು ಮಾತ್ರ ಲಸಿಕೆ ಪಡೆಯಬಹುದಾಗಿತ್ತು. ಆದರೆ ಲಸಿಕೆ ವ್ಯರ್ಥವಾಗುವುದನ್ನು ತಪ್ಪಿಸಲು ಮತ್ತು ಲಸಿಕೆಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 45 ವರ್ಷ ತುಂಬಿದ ಆರೋಗ್ಯವಂತರಿಗೂ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಮಂಗಳವಾರ ಘೋಷಿಸಿದ್ದಾರೆ.

ತಜ್ಞರ ಸಲಹೆ ಆಧಾರದಲ್ಲಿ ನಿರ್ಧಾರ
ಕೊರೊನಾ ಕಾರ್ಯಪಡೆ ಮತ್ತು ತಜ್ಞರ ಸಲಹೆಯ ಆಧಾರದಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಜಾಬ್ಡೇಕರ್‌ ಹೇಳಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಕಾಣಿಸಿಕೊಂಡು, ಸೋಂಕುಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹೊತ್ತಿನಲ್ಲೇ ಲಸಿಕೆ ವಿತರಣೆಯನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಸರಕಾರ ಈ ನಿರ್ಧಾರ ಕೈಗೊಂಡಿದೆ.

ಲಸಿಕೆ ವ್ಯರ್ಥವಾಗುವುದನ್ನು ತಪ್ಪಿಸಲು ಮತ್ತು ಕೊರೊನಾ ಪ್ರತಿರೋಧ ಶಕ್ತಿ ವೃದ್ಧಿಸಲು 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಒದಗಿಸುವಂತೆ “ಉದಯವಾಣಿ’ ಮಾ. 22ರಂದು ಮುಖಪುಟ ಸುದ್ದಿ ಪ್ರಕಟಿಸಿತ್ತು.

ಲಸಿಕೆ ಕೊರತೆಯಿಲ್ಲ
ದೇಶಾದ್ಯಂತ ಸಾಕಷ್ಟು ಲಸಿಕೆ ಲಭ್ಯವಿದ್ದು, ಕೊರತೆ ಉಂಟಾಗಿಲ್ಲ. ದೇಶದ ಎರಡೂ ಲಸಿಕೆಗಳು ಯಶಸ್ವಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಜಾಬ್ಡೇಕರ್‌ ಹೇಳಿದ್ದಾರೆ.

Advertisement

ವಿದ್ಯಾರ್ಥಿಗಳಿಗೂ ಲಸಿಕೆ ಕೊಡಿ
ಕರ್ನಾಟಕದಲ್ಲಿ ಸೋಂಕಿನ ಸಂಖ್ಯೆ ದ್ವಿಗುಣ ಗೊಂಡಿದ್ದು, ದೊಡ್ಡ ಸಮುದಾಯವಾಗಿರುವ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಲಸಿಕೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.

ಜಿಲ್ಲಾ ಮಟ್ಟದ ಲಾಕ್‌ಡೌನ್‌ಗೆ ಅಸ್ತು
ದೇಶಾದ್ಯಂತ ಸೋಂಕು ಪ್ರಕರಣಗಳು ಹೆಚ್ಚುತ್ತಿರುವಂತೆಯೇ ಕೇಂದ್ರ ಗೃಹ ಸಚಿವಾಲಯ ಎ. 1ರಿಂದ ಅನ್ವಯವಾಗುವಂತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜ್ಯವ್ಯಾಪಿ ಲಾಕ್‌ಡೌನ್‌ ಸಮಂಜಸವಲ್ಲ ಎಂದು ಗೃಹ ಇಲಾಖೆ ಹೇಳಿದೆ. ಹೊಸ ಮಾರ್ಗಸೂಚಿ
ಎ. 30ರ ವರೆಗೆ ಅಸ್ತಿತ್ವದಲ್ಲಿ ಇರಲಿದೆ.

ಲಸಿಕೆಗೆ ನೋಂದಣಿ ಹೇಗೆ?
1. ಕೋವಿನ್‌ ಪೋರ್ಟಲ್‌ ಅಥವಾ ಆರೋಗ್ಯ ಸೇತು ಆ್ಯಪ್‌ ಮೂಲಕ ನೋಂದಣಿ.
2. ಕೋವಿನ್‌ ಪೋರ್ಟಲ್‌: ಮೊದಲಿಗೆ ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ. “ಒಟಿಪಿ ಕಳುಹಿಸಿ’ ಎಂಬ ಬಟನ್‌ ಒತ್ತಿ. ಆಗ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನು ನಮೂ ದಿ ಸಿದ ಅನಂತರ “ವೆರಿಫೈ’ ಬಟನ್‌ ಕ್ಲಿಕ್‌ ಮಾಡಿ.
3. ಆರೋಗ್ಯ ಸೇತು ಆ್ಯಪ್‌: “ಕೋವಿನ್‌ ಟ್ಯಾಬ್‌’ಗೆ ಹೋಗಿ “ವ್ಯಾಕ್ಸಿನೇಶನ್‌ ಟ್ಯಾಬ್‌’ ಕ್ಲಿಕ್‌ ಮಾಡಿ. ಅಲ್ಲಿ “ಪ್ರೊಸೀಡ್‌’ ಕ್ಲಿಕ್‌ ಮಾಡಿ. ನೋಂದಣಿ ಅರ್ಜಿ ತೆರೆದುಕೊಳ್ಳುತ್ತದೆ. ಅದನ್ನು ಭರ್ತಿ ಮಾಡಿ. ನೋಂದಣಿ ಬಳಿಕ ನಿಮಗೆ ದೃಢೀಕರಣದ ಸಂದೇಶ ಬರುತ್ತದೆ.
4. ಒಂದು ಮೊಬೈಲ್‌ ಸಂಖ್ಯೆಯಲ್ಲಿ ಒಟ್ಟು 4 ಮಂದಿ ಲಸಿಕೆಗೆ ನೋಂದಣಿ ಮಾಡಿಕೊಳ್ಳಬಹುದು.
5. ಅನಿವಾರ್ಯ ಪರಿಸ್ಥಿತಿಯಲ್ಲಿ 2ನೇ ಡೋಸ್‌ ಪಡೆಯುವ ಕೇಂದ್ರವನ್ನು ಬದಲಾಯಿಸಿಕೊಳ್ಳುವ ಅವಕಾಶ ಇದೆ.
6. ಲಸಿಕೆ ವಿತರಣೆ ಬಳಿಕ ನಿಮಗೆ ಡಿಜಿಟಲ್‌ ಸಹಿ ಇರುವ ಪ್ರಮಾಣಪತ್ರ ನೀಡಲಾಗುತ್ತದೆ.

ಹೊಸ ಮಾರ್ಗಸೂಚಿ
– ಸೋಂಕು ಪರಿಸ್ಥಿತಿಗೆ ಅನುಗುಣವಾಗಿ ಸ್ಥಳೀಯ ಮಟ್ಟದಲ್ಲಿ, ಜಿಲ್ಲೆ /ಉಪ-ಜಿಲ್ಲೆ, ನಗರ/ವಾರ್ಡ್‌ ಮಟ್ಟದಲ್ಲಿ ಲಾಕ್‌ಡೌನ್‌.
– ಅಂತಾರಾಜ್ಯ, ರಾಜ್ಯದೊಳಗೆ ಜನ -ಸರಕು ಸಂಚಾರ- ಸಾಗಣೆಗೆ ನಿರ್ಬಂಧ ಇಲ್ಲ. ಇದಕ್ಕೆ ಪ್ರತ್ಯೇಕ ಅನುಮತಿ, ಇ-ಪರ್ಮಿಟ್‌ ಬೇಕಿಲ್ಲ.
– ಆರ್‌ಟಿ-ಪಿಸಿಆರ್‌ ಪರೀಕ್ಷೆ ಹೆಚ್ಚಿಸಿ. ಪರೀಕ್ಷೆ- ಪತ್ತೆ- ಚಿಕಿತ್ಸೆ ಪ್ರಕ್ರಿಯೆ ಕಟ್ಟುನಿಟ್ಟಾಗಿ ಪಾಲಿಸಿ.
– ಆದ್ಯತಾ ವಲಯಗಳಿಗೆ ಲಸಿಕೆ ವಿತರಣೆಯನ್ನು ಕ್ಷಿಪ್ರವಾಗಿ ನಡೆಸಬೇಕು.
– ಸೋಂಕು ನಿಯಂತ್ರಣ ಕ್ರಮಗಳ ಕಟ್ಟುನಿಟ್ಟು ಪಾಲನೆ.

ಸುರಕ್ಷಾ ಕ್ರಮ: ರಂಗಕ್ಕಿಳಿದ ಅಧಿಕಾರಿಗಳು
ಮಂಗಳೂರು/ ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿ ಗೊಳಿ ಸುವ ಕಾರ್ಯ ನಡೆಯುತ್ತಿದೆ. ದಕ್ಷಿಣ ಕನ್ನಡ ಡಿಸಿ ಡಾ| ರಾಜೇಂದ್ರ ಅವರು ಮಂಗಳೂರು ನಗರದ ಅಲ್ಲಲ್ಲಿ ದಿಢೀರ್‌ ಭೇಟಿ ನೀಡಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆಯ ಜಾಗೃತಿ ಮೂಡಿಸುತ್ತಿದ್ದಾರೆ. ಶುಕ್ರವಾರ ಜಿಲ್ಲೆಯಾದ್ಯಂತ ಸುರಕ್ಷಾ ಕ್ರಮಗಳ ಜಾಗೃತಿ ನಡೆದಿದೆ. ಉಡುಪಿಯಲ್ಲಿ ದಿಢೀರ್‌ ಭೇಟಿ ನೀಡಿದ ಡಿಸಿ ಜಿ. ಜಗದೀಶ್‌ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next