Advertisement

ಲಸಿಕೆಗಾಗಿ “ಆಶಾ’ಕಾರ್ಯಕರ್ತೆಯರಿಗೆ ದುಂಬಾಲು !

09:36 PM May 02, 2021 | Team Udayavani |

ಮಹಾನಗರ: ಕೋವಿಡ್ ಮೊದಲ ಅಲೆಯ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ “ಆಶಾ’ ಕಾರ್ಯಕರ್ತೆಯರು ಈ ಬಾರಿಯೂ ಫೀಲ್ಡಿಗಿಳಿದಿದ್ದಾರೆ. ಕಳೆದ ಬಾರಿ ಎದುರಾಗಿದ್ದ ಸವಾಲುಗಳು ಈ ಬಾರಿ ಇಲ್ಲವಾದರೂ ಲಸಿಕೆ ಕೊರತೆಯಿಂದಾಗಿ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.

Advertisement

“ಲಸಿಕೆ ಕೊಡಿಸಿ’ ಎಂದು ನೂರಾರು ಮಂದಿ ಪದೇಪದೇ ಕೇಳುತ್ತಿದ್ದಾರೆ. ಕೆಲ ವರು ಸಮಾಧಾನದಿಂದಲೇ ಲಸಿಕೆಯ ಲಭ್ಯತೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಆದರೆ ಇನ್ನು ಕೆಲವರು ಜೋರು ಮಾಡುತ್ತಿದ್ದಾರೆ ಎಂದು “ಆಶಾ’ ಕಾರ್ಯಕರ್ತೆಯರು ಅಲವತ್ತುಕೊಂಡಿದ್ದಾರೆ.

ಆಗ ನಿರಾಕರಣೆ, ಈಗ ದಂಬಾಲು ! :

ಮಾರ್ಚ್‌ ತಿಂಗಳ ಆರಂಭದಲ್ಲಿ 60 ವರ್ಷ ಮೇಲ್ಪಟ್ಟವರಿಗೆ, ಅನಂತರ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ತಡೆಗೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿ ಕೊಂಡಿದ್ದಾಗ ನಾವು ಗ್ರಾಮ, ಪಟ್ಟಣಗಳ ಮನೆ ಮನೆಗಳಿಗೆ ತೆರಳಿದ್ದೆವು.

ನಮಗೂ ನಿರ್ದಿಷ್ಟ ಗುರಿ ನೀಡಲಾಗಿತ್ತು. ಆದರೆ ಬಹುತೇಕ ಮಂದಿ ಲಸಿಕೆ ಹಾಕಲು ಹಿಂದೇಟು ಹಾಕಿದ್ದರು. ನಮಗೆ ಮನ ಬಂದಂತೆ ಬೈಯುತ್ತಿದ್ದರು. ಲಸಿಕೆ ಹಾಕಿಸಿಕೊಳ್ಳಲು ಕರೆದೊಯ್ಯುವುದು ಭಾರೀ ಸವಾಲಾಗಿತ್ತು. ಆದರೆ ಈಗ ಕೆಲವರು ಲಸಿಕೆ ಕೊಡಿಸುವಂತೆ ಪೀಡಿಸು ತ್ತಿದ್ದಾರೆ. ಈಗ ನಿಯಮಿತ ಸಂಖ್ಯೆಯ ಲಸಿಕೆ ಮಾತ್ರ ಲಭ್ಯವಿದೆ. ಅದನ್ನು ಎರಡನೇ ಡೋಸ್‌ ಪಡೆಯಬೇಕಾದವರಿಗೆ ಮಾತ್ರ ನೀಡಲಾಗುತ್ತಿದೆ ಎಂದರೂ ಕೆಲವರಿಗೆ ಅರ್ಥವಾಗುತ್ತಿಲ್ಲ.  ನಾವು ಅಸಹಾಯಕರಾಗಿದ್ದೇವೆ ಎನ್ನುತ್ತಾರೆ ಆಶಾ ಕಾರ್ಯಕರ್ತೆಯರು.

Advertisement

1,372 ಕಾರ್ಯಕರ್ತೆಯರು :

ಗ್ರಾಮೀಣ ಭಾಗದಲ್ಲಿ ತಲಾ 1,000 ಜನರಿಗೆ ಒಬ್ಬರಂತೆ, ನಗರ ಭಾಗದಲ್ಲಿ ತಲಾ 2,500 ಜನರಿಗೆ ಒಬ್ಬರಂತೆ ದ.ಕ. ಜಿಲ್ಲೆಯಲ್ಲಿ ಒಟ್ಟು 1,372 ಮಂದಿ ಆಶಾ (ಮಾನ್ಯತೆ ಪಡೆದ ಸಾಮಾಜಿಕ ಆ.ಕಾರ್ಯಕರ್ತೆಯರು) ಕಾರ್ಯಕರ್ತೆಯರಿದ್ದಾರೆ. ಇದರಲ್ಲಿ 50 ಮಂದಿ ಸುಗಮಕಾರರು(ಫೆಸಿಲಿಟೇಟರ್) ಕೂಡ ಸೇರಿದ್ದಾರೆ. ಆಶಾ ಕಾರ್ಯಕರ್ತೆಯರು ಸರಕಾರದಿಂದ ಗೌರವಧನ ಪಡೆ ಯುತ್ತಿದ್ದು, ಅವರು ಕೊರೊನಾ ನಿಯಂತ್ರಣದಲ್ಲಿ ಸಲ್ಲಿಸಿದ್ದ ಸೇವೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಕೊಂಡಾಡಿದೆ. ಕಳೆದ ಮಾರ್ಚ್‌ನಿಂದ ಕೇಂದ್ರ ಸರಕಾರ ಆಶಾ ಕಾರ್ಯಕರ್ತೆಯರಿಗೆ 1,000 ರೂ., ಆಶಾ ಫೆಸಿಲಿಟೇಟರ್ಗೆ 1,500 ರೂ. ಕೋವಿಡ್‌ ಪ್ರೋತ್ಸಾಹಧನ ನೀಡುತ್ತಿದೆ. ಗೌರವ ಧನ ಹೆಚ್ಚಿಸಬೇಕೆಂಬ ಬೇಡಿಕೆ ಪೂರ್ಣ ಈಡೇರಿಲ್ಲ.

ಬಸ್‌ ಮಾಡಿಸಿ ಲಸಿಕೆ ಹಾಕಿಸಿದರು :

ಲಸಿಕೆ ಹಾಕಿಸಿಕೊಳ್ಳಲು ಅನೇಕ ಮಂದಿ ಆಶಾ ಕಾರ್ಯಕರ್ತರು ಪರಿಶ್ರಮ ಪಟ್ಟಿದ್ದಾರೆ. ಸ್ಥಳೀಯ ಗ್ರಾ.ಪಂ. ಕಾರ್ಯಪಡೆ ಮೂಲಕವೂ ಜಾಗೃತಿ ಮೂಡಿಸಲಾಗಿತ್ತು. ನಾನು ಕಾರ್ಯನಿರ್ವಹಿಸುತ್ತಿರುವ ಕಾಟಿಪಳ್ಳ, ಅತ್ತೂರು ಕೆಮ್ರಾಲ್‌ ಪ್ರಾ.ಆ. ಕೇಂದ್ರಗಳ ವ್ಯಾಪ್ತಿಯಲ್ಲಿ ಸ್ಥಳೀಯ ಗ್ರಾ.ಪಂ.,ದಾನಿಗಳ ನೆರವಿನಿಂದ ಬಸ್‌ ವ್ಯವಸ್ಥೆ ಮಾಡಿ ಕರೆದೊಯ್ದು ಲಸಿಕೆ ಹಾಕಿಸಿಕೊಂಡು ಬಂದಿದ್ದೆವು ಎನ್ನುತ್ತಾರೆ ಆಶಾ ಕಾರ್ಯಕರ್ತೆ ಸುಜಾತಾ ಶೆಟ್ಟಿ.

ಹಲವು ಆರೋಗ್ಯ ಸೇವಾ ಕೈಂಕರ್ಯ

ಆಶಾ ಕಾರ್ಯಕರ್ತೆಯರು ಸಾಮಾನ್ಯ ದಿನಗಳಲ್ಲಿ ಗರ್ಭಿಣಿಯರ ನೋಂದಣಿ, ಮಕ್ಕಳ ಲಸಿಕೆ ಕಾರ್ಯಕ್ರಮ ಮೊದಲಾದ ಆರೋಗ್ಯ ಸೇವೆಗಳನ್ನು ಮಾಡುತ್ತಿದ್ದು ಕಳೆದ ವರ್ಷದಿಂದ ಕೋವಿಡ್ ವಾರಿಯರ್ಸ್ ಗಳಾಗಿಯೂ ತೊಡಗಿಸಿಕೊಂಡಿದ್ದಾರೆ. ಹೋಂ ಐಸೊಲೇಷನ್‌ನಿಂದ ಹಿಡಿದು ಲಸಿಕೆ ಹಾಕಿಸುವವರೆಗೂ ವಿವಿಧ ಹಂತದಲ್ಲಿ ಜನಸಾಮಾನ್ಯರ ಜತೆಗಿದ್ದು ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಕೋವಿಡ್ ನಿಯಂತ್ರಣ ಸಂಬಂಧಿ ಕೆಲಸಗಳ ಜತೆಗೆ ಲಾರ್ವ ಸಮೀಕ್ಷೆ, ಆರೋಗ್ಯ ಸಮೀಕ್ಷೆಯಲ್ಲಿಯೂ ತೊಡಗಿಕೊಂಡಿದ್ದಾರೆ.

ಆಶಾ ಕಾರ್ಯ ಕರ್ತೆಯರ ಬಳಿ ಲಸಿಕೆ ಇರುವುದಿಲ್ಲ. ಅವರು ಲಸಿಕೆ ಹಾಕಿಸಿಕೊಳ್ಳುವವರಿಗೆ ನೆರವಾಗುತ್ತಾರೆ. ಆದರೆ ಅವರಾಗಿಯೇ ಲಸಿಕೆ ನೀಡುವುದಿಲ್ಲ. ಲಸಿಕೆ ಕೊಡಿಸುವಂತೆ ಆಶಾ ಕಾರ್ಯಕರ್ತೆಯರನ್ನು ಒತ್ತಾಯಿಸಬಾರದು.  -ಡಾ| ರಾಜೇಶ್‌, ಆರ್‌ಸಿಎಚ್‌ ಅಧಿಕಾರಿ, ಮಂಗಳೂರು

 

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next