ನವದೆಹಲಿ : ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದ್ದು, ಒಟ್ಟಾರೆ ಮಂಗಳವಾರ ಬೆಳಗ್ಗೆ 7 ಗಂಟೆಯವರೆಗೆ 98.67 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇನ್ನು ಕೆಲ ದಿನಗಳಲ್ಲಿ ಆ ಸಂಖ್ಯೆ 100 ಕೋಟಿ ದಾಟಲಿದೆ.
ಈಗಾಗಲೇ 69,91,16,940 ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದರೆ, ಅದರಲ್ಲಿ 28,76,52,471 ಮಂದಿ ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು (12 ಕೋಟಿ) ಡೋಸ್ ಲಸಿಕೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ 9.20 ಕೋಟಿ, ಪಶ್ಚಿಮ ಬಂಗಾಳ 6.75 ಕೋಟಿ, ಗುಜರಾತ್‌ನಲ್ಲಿ 6.72 ಕೋಟಿ, ಮಧ್ಯಪ್ರದೇಶದಲ್ಲಿ 6.66, ಬಿಹಾರದಲ್ಲಿ 6.26 ಕೋಟಿ, ಕರ್ನಾಟಕದಲ್ಲಿ 6.11 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
ಸರ್ಕಾರದಿಂದ ವಿಶೇಷ ಆಚರಣೆ:
ಲಸಿಕೆ 100 ಕೋಟಿ ಡೋಸ್ ಸಂಪೂರ್ಣಗೊಳಿಸುವ ಸಂಭ್ರಮವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. #vaccinecentury ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡಲಾಗುವುದು. ವಿಮಾನ, ಮೆಟ್ರೋ ಸೇರಿ ಎಲ್ಲ ಸಾರ್ವಜನಿಕ ಸಾರಿಗೆಯಲ್ಲಿ ಲಸಿಕೆ ಅಭಿಯಾನದ ಸಾಧನೆಯನ್ನು ಘೋಷಿಸಲಾಗುವುದು. ಸರ್ಕಾರದ ಹಿರಿಯ ಅಧಿಕಾರಿಗಳು ವೈದ್ಯಕೀಯ ಸಿಬ್ಬಂದಿಗೆ ಅಭಿನಂದನೆ ತಿಳಿಸಿ ವಿಶೇಷ ವಿಡಿಯೋ ಬಿಡುಗಡೆ ಮಾಡಲಿದ್ದಾರೆ. ಇನ್ನು ಮುಂತಾದ ರೀತಿಯಲ್ಲಿ ಸಂಭ್ರಮಾಚರಣೆ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ :“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ