Advertisement

ಲಸಿಕೆ ವಿತರಣೆಗೆ ಬ್ರಿಟನ್‌ ಒಪ್ಪಿಗೆ ಬದಲಾವಣೆಯ ಹಾದಿಯಲ್ಲಿ

12:41 AM Dec 04, 2020 | sudhir |

ಕೋವಿಡ್‌ ವಿರುದ್ಧದ ಸಮರ ಜಗತ್ತಿನ ವೈಜ್ಞಾನಿಕ ಲೋಕಕ್ಕೆ ಈ ಹಿಂದೆಂದೂ ಕಾಣದಂಥ ಸವಾಲನ್ನೆಸೆದಿದೆ. ಇಂದು ಯಾವ ರಾಷ್ಟ್ರವೂ ಕೋವಿಡ್‌ನಿಂದ ಮುಕ್ತವಾಗಿಲ್ಲ. ಪ್ರಕರಣಗಳ ಸಂಖ್ಯೆ ಇಳಿದೇ ಹೋಯಿತು ಎಂದು ಸಂಭ್ರಮ ಪಡುತ್ತಿದ್ದ ಪ್ರದೇಶಗಳು ಮತ್ತೆ ನೋಡನೋಡುತ್ತಲೇ ನವ ಅಲೆಯನ್ನು ಎದುರಿಸುತ್ತಲೇ ಇವೆ. ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವಿಕೆಯಂಥ ಸುರಕ್ಷತ ಕ್ರಮಗಳು ಸಾಂಕ್ರಾಮಿಕ ತಡೆಯಲ್ಲಿ ಪ್ರಮುಖ ಪಾತ್ರವಹಿಸುತ್ತವಾದರೂ, ರೋಗವನ್ನು ಬೇರು ಸಮೇತ ನಿರ್ಮೂಲನೆ ಮಾಡುವುದೇ ಮುಖ್ಯ ದಾರಿಯಾಗಿದೆ.

Advertisement

ಈ ಕಾರಣಕ್ಕಾಗಿಯೇ ಜಗತ್ತಿನಾದ್ಯಂತ ಲಸಿಕೆಯ ಸಂಶೋಧನೆ ಅತ್ಯಂತ ವೇಗವಾಗಿ ನಡೆದಿದೆ. ಕೆಲವು ಲಸಿಕೆಗಳು ಈಗಾಗಲೇ 90ರಿಂದ 95 ಪ್ರತಿಶತದವರೆಗೆ ಪರಿಣಾಮಕಾರಿತ್ವ ತೋರಿಸಿವೆಯಾದರೂ ಲಸಿಕೆಯೊಂದರ ಫ‌ಲಪ್ರದವನ್ನು, ಅದರ ಸಂಭಾವ್ಯ ಅಡ್ಡಪರಿಣಾಮಗಳನ್ನು ಒಂದು ವರ್ಷದಲ್ಲೇ ಅಳೆಯಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಇದ್ದೇ ಇದೆ. ಈ ಕಾರಣಕ್ಕಾಗಿಯೇ ಅನೇಕ ರಾಷ್ಟ್ರಗಳು ಲಸಿಕೆಯ ಸಾರ್ವಜನಿಕ ಬಳಕೆಗೆ ಅನುಮತಿ ನೀಡಲು ಹಿಂದೇಟು ಹಾಕುತ್ತಿವೆ.

ಇವೆಲ್ಲದರ ನಡುವೆಯೇ ಗಮನಾರ್ಹ ಸಂಗತಿಯೆಂದರೆ, ಜಗತ್ತಿನಲ್ಲೇ ಲಸಿಕೆ ವಿತರಣೆಗೆ ಒಪ್ಪಿಗೆ ನೀಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಬ್ರಿಟನ್‌ ಈಗ ಪಾತ್ರವಾಗಿರುವುದು. ಮುಂದಿನ ವಾರದಿಂದಲೇ ಅತ್ಯಂತ ಸೂಕ್ಷ್ಮ ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದು ಬ್ರಿಟನ್‌ ಸರಕಾರ ಘೋಷಿಸಿರುವುದು ಆಶಾಕಿರಣ ಮೂಡಿಸಿದೆ.

ಫೈಜರ್‌/ಬಯೋಎನ್‌ಟೆಕ್ ಲಸಿಕೆಗೆ ಬ್ರಿಟನ್‌ನ ಮೆಡಿಸಿನ್‌ ಆ್ಯಂಡ್‌ ಹೆಲ್ತ್‌ ಕೇರ್‌ ಪ್ರಾಡಕ್ಟ್ ರೆಗ್ಯುಲೇಟರಿ ಏಜೆನ್ಸಿ(ಎಂಎಚ್‌ಆರ್‌ ಎ) ಒಪ್ಪಿಗೆ ನೀಡಿದ್ದು ಈಗಾಗಲೇ ಇದು 95 ಪ್ರತಿಶತ ಪರಿಣಾಮಕಾರಿ ಎನ್ನುವುದು ಪತ್ತೆಯಾಗಿದೆ. ಅಲ್ಲದೇ ಇದರ ಅಡ್ಡ ಪರಿಣಾಮಗಳೂ ಅತ್ಯಂತ ಕಡಿಮೆ ಎನ್ನುವುದು ಇಲ್ಲಿಯವರೆಗಿನ ಪ್ರಯೋಗಗಳಿಂದಾಗಿ ತಿಳಿದುಬಂದಿರುವುದು ಸಂತಸದ ಸಂಗತಿ. ಫೈಜರ್‌ ಕಂಪೆನಿಯು ಕ್ಲಿನಿಕಲ್‌ ಟ್ರಯಲ್‌ಗಾಗಿ ಭಾರತದಲ್ಲಿ ಯಾವ ಕಂಪೆನಿ ಜತೆಗೂ ಒಪ್ಪಂದ ಮಾಡಿಕೊಂಡಿಲ್ಲವಾದ್ದರಿಂದ ಸದ್ಯಕ್ಕೆ ಭಾರತಕ್ಕೆ ಈ ಲಸಿಕೆ ಬರುವ ಸಾಧ್ಯತೆ ಇಲ್ಲ. ಬರಬಹುದು ಎನ್ನುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗುವುದಿಲ್ಲ. ಇತ್ತ ಭಾರತದಲ್ಲೂ ಕೋವ್ಯಾಕ್ಸಿನ್‌, ಆಕ್ಸ್ ಫರ್ಡ್‌ನ ಆಸ್ಟ್ರಾಜೆನಿಕಾ ಸೇರಿದಂತೆ ಹಲವು ಲಸಿಕೆಗಳ ಪ್ರಯೋಗ ನಡೆಯುತ್ತಿದೆ. ಈ ಪ್ರಯೋಗಗಳು ಮೂರನೇ ಹಂತದಲ್ಲಿದ್ದು, ಇನ್ನಷ್ಟೇ ವರದಿ ಬರಬೇಕಿದೆ.

ಒಟ್ಟಿನಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಜಾಗತಿಕ ವಿಜ್ಞಾನ ಲೋಕ ಒಂದು ಸಾಂಕ್ರಾಮಿಕದ ವಿರುದ್ಧ ಈ ತೆರನಾದ ಹೋರಾಟ ನಡೆಸಿರುವ ಉದಾಹರಣೆ ಹಿಂದೆಂದೂ ಇಲ್ಲ. ಕೆಲವೇ ತಿಂಗಳುಗಳ ಹಿಂದೆ ಕೋವಿಡ್‌-19ಗೆ ಲಸಿಕೆ ಬರುವುದೇ ಅಸಾಧ್ಯ ಎನ್ನುವ ಮಾತುಗಳೇ ಕೇಳಿಬರುತ್ತಿದ್ದವು. ಆದರೀಗ ಲಸಿಕೆಗಳು ಅಭಿವೃದ್ಧಿಯಾಗಿ ಪ್ರಯೋಗಗಳು ನಡೆಯುತ್ತಿವೆ. ಲಸಿಕೆಯೇ ಬರುವುದಿಲ್ಲ ಎನ್ನುವ ಮಾತೀಗ, ಲಸಿಕೆ ಎಷ್ಟು ಪರಿಣಾಮಕಾರಿ ಎನ್ನುವ ದಿಕ್ಕಿಗೆ ಬದಲಾಗಿ ನಿಂತಿರುವುದಕ್ಕೆ ವಿಜ್ಞಾನ ಲೋಕದ ಛಲಬಿಡದ ಪರಿಶ್ರಮವೇ ಕಾರಣ. ಇದೇನೇ ಇದ್ದರೂ, ಭಾರತದಲ್ಲೂ ಲಸಿಕೆಯ ಪ್ರಯೋಗಗಳು ನಡೆಯುತ್ತಿವೆ. ಅಲ್ಲಿಯವರೆಗೂ ನಾವಂತೂ ಅಗತ್ಯ ಸುರಕ್ಷತ ಕ್ರಮಗಳನ್ನು ಪಾಲಿಸುವುದನ್ನು ಮರೆಯದಿರೋಣ.

Advertisement
Advertisement

Udayavani is now on Telegram. Click here to join our channel and stay updated with the latest news.

Next