Advertisement
ಕ್ಷಯ, ಇನ್‌ಫ್ಲುಯೆಂಜಾ ಇತ್ಯಾದಿಗಳಿಗೆ ಲಭ್ಯವಿರುವ ಲಸಿಕೆಗಳಿಗಿಂತಲೂ ಈಗ ಕೊರೊನಾ ವಿರುದ್ಧ ಅಭಿವೃದ್ಧಿಪಡಿಸಲಾಗಿರುವ ಲಸಿಕೆಗಳು ಪರಿಣಾಮಕಾರಿಯಾಗಿವೆ. ಯಾವುದೇ ಲಸಿಕೆ ನೂರಕ್ಕೆ ನೂರು ಪರಿಣಾಮಕಾರಿ ಅಲ್ಲವಾದರೂ ಕೊರೊನಾ ಲಸಿಕೆ ಹಾಕಿಸಿಕೊಂಡ ಬಳಿಕ ಕೊರೊನಾ ಸೋಂಕಿಗೆ ತುತ್ತಾಗುವ ಅಥವಾ ಲಸಿಕೆಯನ್ನು ಮೀರಿದ ಸೋಂಕಿಗೆ ತುತ್ತಾಗುವ ಸಾಧ್ಯತೆಗಳು ತೀರಾ ಅಲ್ಪ ಎಂಬುದಾಗಿ ಐಸಿಎಂಆರ್ ಒದಗಿಸುವ ದತ್ತಾಂಶಗಳು ಹೇಳುತ್ತವೆ. ಈ ಅಪಾಯ ಕೊವಿಶೀಲ್ಡ್ ಲಸಿಕೆಯ ಬಳಿಕ ಶೇ. 0.03; ಕೊವ್ಯಾಕ್ಸಿನ್ ಲಸಿಕೆಯ ಬಳಿಕ ಶೇ. 0.04 ಆಗಿದೆ (ವಿವರ: ಇನ್‌ಫೆಕ್ಷನ್ಸ್ ಆಫ್ಟರ್ ಕೋವಿಡ್-19 ವ್ಯಾಕ್ಸಿನೇಶನ್, ಇಂಡಿಯನ್ ಎಕ್ಸ್‌ಪ್ರೆಸ್, ಎ.24, 2021). ಈ 2 ಅಂಕಿಸಂಖ್ಯೆಗಳ ಅರ್ಥ, ಲಸಿಕೆ ಹಾಕಿಸಿ ಕೊಂಡ 10 ಸಾವಿರ ಮಂದಿಯಲ್ಲಿ 1 ಒಬ್ಬರಿಗೆ ಈ ಅಪಾಯ ಉಂಟಾಗಬಹುದು. ಇದನ್ನು ಅರ್ಥ ಮಾಡಿಕೊಳ್ಳಲು ಉದಾಹರಣೆ ಕೊಡಬಹು ದಾದರೆ, ಪ್ರತೀ 10 ಸಾವಿರ ಶಿಶುಜನನಗಳಲ್ಲಿ ಒಂದು ತ್ರಿವಳಿಯಾಗಿರುತ್ತದೆ. ಅಂದರೆ ಇದು ಅತ್ಯಂತ ಅಪರೂಪ ಎಂದರ್ಥ ತಾನೇ? ಲಸಿಕೆ ಹಾಕಿಸಿಕೊಂಡ ಬಳಿಕ ಸೋಂಕಿಗೆ ಒಳಗಾಗುವ ಅಪಾಯವೂ ಇಷ್ಟೇ ಅಪರೂಪ. ಆದ್ದರಿಂದ ಅವಕಾಶ ಸಿಕ್ಕಿದಾಗ ನಿಮಗೆ ಯಾವ ಲಸಿಕೆ ಲಭ್ಯವಿದೆಯೋ ಅದನ್ನು ಹಾಕಿಸಿಕೊಳ್ಳಿ.
Related Articles
Advertisement
ಕೋವಿಡ್-19 ಸೋಂಕುಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಕೂಡ ಇದನ್ನೇ ಹೇಳುತ್ತಾರೆ. ಕೊರೊನಾ ಲಸಿಕೆ (ಯಾವುದೇ ಲಸಿಕೆ)ಯ ಎರಡನೇ ಡೋಸ್ ಹಾಕಿಸಿಕೊಂಡ ಕನಿಷ್ಠ 2 ವಾರಗಳ ಬಳಿಕ ಕೊರೊನಾ ಸೋಂಕಿಗೆ ತುತ್ತಾದರೆ ಅಂತಹ ರೋಗಿಗಳಲ್ಲಿ ಗಂಭೀರ ಸಮಸ್ಯೆಗಳು ಉಂಟಾಗುವುದು ಕಡಿಮೆ ಎಂಬುದನ್ನು ವೈದ್ಯರು ಕಂಡುಕೊಂಡಿದ್ದಾರೆ. ಇಂಥ ಬಹುತೇಕ ರೋಗಿಗಳು ಲಘು ಸ್ವರೂಪದ ಲಕ್ಷಣಗಳನ್ನು ಹೊಂದಿರುತ್ತಾರೆ ಹಾಗೂ ಹೋಮ್ ಐಸೊಲೇಶನ್ ಮತ್ತು ದೈಹಿಕ ನೋವು, ಜ್ವರಗಳಿಗೆ ಪ್ಯಾರಾಸಿಟಮಾಲ್‌ನಂತಹ ರೋಗಲಕ್ಷಣ ಆಧಾರಿತ ಔಷಧೋಪಚಾರದಿಂದ ಗುಣ ಹೊಂದುತ್ತಾರೆ.
ಕೊನೆಯದಾಗಿ, ಲಸಿಕೆ ಪಡೆದುಕೊಂಡ ಬಳಿಕ ನಿಮಗೆ ಸೋಂಕು ತಗಲಿ, ಲಘು ರೋಗ ಲಕ್ಷಣಗಳು ಇದ್ದರೂ ನೀವು ಲಸಿಕೆ ಹಾಕಿಸಿಕೊಂಡಿಲ್ಲದ ನಿಮ್ಮ ಕುಟುಂಬಿಕರು, ಆಪ್ತರು ಮತ್ತಿತರರಿಗೆ ಸೋಂಕನ್ನು ಹರಡಿಸುವ ಅಪಾಯ ಇರುತ್ತದೆ. ಇಂಥವರಲ್ಲಿ ಸಂಕಿರ್ಣ ಸಮಸ್ಯೆಗಳಿಗೆ ತುತ್ತಾಗಬಹುದಾದ ಗರ್ಭಿಣಿಯರು, ರೋಗ ಪ್ರತಿರೋಧಕ ಶಕ್ತಿ ಕಡಿಮೆ ಇರುವ ರೋಗಿಗಳು, ಮಕ್ಕಳು ಇರಬಹುದು. ಹೀಗಾಗಿ ಲಸಿಕೆ ಪಡೆದುಕೊಂಡ ಬಳಿಕವೂ ನೀವು ಕೋವಿಡ್-19ನಿಂದ ರಕ್ಷಣೆ ಒದಗಿಸುವ ಎಲ್ಲ ಮುಂಜಾಗ್ರತೆಗಳನ್ನು ಪಾಲಿಸುವುದು ಅತ್ಯಗತ್ಯ.
ಪ್ರಶ್ನೆ: ನಮ್ಮ ಮಕ್ಕಳು ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ. ಅವರಿಗೆ ಅದು ಲಭ್ಯವಾದಾಗ ಹಾಕಿಸಿಕೊಳ್ಳಬೇಕೇ?
ಹೌದು, 18 ವರ್ಷಕ್ಕಿಂದ ಮೇಲ್ಪಟ್ಟ ಎಲ್ಲರೂ ಎರಡೂ ಡೋಸ್ ಲಸಿಕೆಯನ್ನು ತಮಗೆ ಅವಕಾಶ ಲಭ್ಯವಾದಾಗ ಹಾಕಿಸಿಕೊಳ್ಳಬೇಕು. ಲಸಿಕೆಯ ವಿಚಾರದಲ್ಲಿ ಯಾವುದೇ ಭಾರತೀಯ ಅಧ್ಯಯನಗಳು ಗರ್ಭಿಣಿಯರು ಮತ್ತು ಹಾಲೂಡುವ ತಾಯಂದಿರನ್ನು ಒಳಗೊಂಡಿಲ್ಲ. ಹಾಗಾಗಿ ಗರ್ಭಿಣಿಯರು ಮತ್ತು ಹಾಲೂಡುವ ತಾಯಂದಿರು ತಮ್ಮ ವೈದ್ಯರ ಜತೆಗೆ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಸಮಾಲೋಚಿಸಬಹುದು.
ಡಾ| ಎಂ. ಸುಧಾಕರ ರಾವ್
ಅಸೊಸಿಯೇಟ್ ಪ್ರೊಫೆಸರ್, ಕಾರ್ಡಿಯಾಲಜಿ ವಿಭಾಗ,
ಕೆಎಂಸಿ, ಮಾಹೆ, ಮಣಿಪಾಲ
ಡಾ| ಸುಹೈಲ್ ಧಾನ್ಸೆ