Advertisement
ಮೇ 1ರಿಂದ ದೇಶಾದ್ಯಂತ 18ರಿಂದ 45 ವರ್ಷದೊಳಗಿನ ಎಲ್ಲರಿಗೂ ಲಸಿಕೆ ವಿತರಣೆ ಆರಂಭವಾಗಬೇಕಾಗಿತ್ತು. ಆದರೆ ಕರ್ನಾಟಕದಲ್ಲಿ ಲಸಿಕೆ ದಾಸ್ತಾನು ಇಲ್ಲದಿರುವುದರಿಂದ ಇದು ಕಷ್ಟಸಾಧ್ಯ. ಹೀಗಾಗಿ ಕೋವಿನ್ ಪೋರ್ಟಲ್‌ನಲ್ಲೂ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೋಂದಣಿಗೆ ಅವಕಾಶ ನೀಡಲಾಗಿದೆ.
Related Articles
Advertisement
ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆಗಳಿಗೆ ಆದ್ಯತೆ :
ಲಸಿಕೆ ಕೊರತೆ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಿರುವ ಜಿಲ್ಲೆಗಳಿಗೆ ಆದ್ಯತೆಯಲ್ಲಿ ಸರಬರಾಜು ಮಾಡಲಾಗುತ್ತಿದೆ. ಈ ಜಿಲ್ಲೆಗಳಿಗೆ ತುರ್ತಾಗಿ ಲಸಿಕೆ ನೀಡಿ ಹೆಚ್ಚು ಜನರಿಗೆ ಲಸಿಕೆ ಹಾಕಲು ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಲಸಿಕೆ ವಿಭಾಗದ ಉಪ ನಿರ್ದೇಶಕಿ ಡಾ| ಬಿ.ಎನ್. ರಜನಿ ತಿಳಿಸಿದ್ದಾರೆ.
ಸಿದ್ದರಾಮಯ್ಯಗೆ ಮಾಹಿತಿ? :
ದಾಸ್ತಾನು ಕೊರತೆ ಹಿನ್ನೆಲೆಯಲ್ಲಿ ಮೇ 1ರಿಂದ 18-44 ವರ್ಷದವರಿಗೆ ಲಸಿಕೆ ನೀಡಲು ಕಷ್ಟ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಹಂತ ಹಂತವಾಗಿ ಲಸಿಕೆ: ಸಿಎಂ :
ಮೇ 1ರಿಂದ ಲಸಿಕೆ ಅಭಿಯಾನ ಆರಂಭವಾಗುವುದಿಲ್ಲ ಎಂಬ ಬಗ್ಗೆ ಸಿಎಂ ಯಡಿಯೂರಪ್ಪ ಸುಳಿವು ನೀಡಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಹಂತ ಹಂತವಾಗಿ ಲಸಿಕೆ ಹಾಕಲಾಗುತ್ತದೆ ಎಂದಿರುವ ಅವರು, ಅಭಿಯಾನ ಆರಂಭವಾಗುವ ದಿನಾಂಕದ ಬಗ್ಗೆ ಏನನ್ನೂ ಹೇಳಿಲ್ಲ.
ಖಾಸಗಿಯಲ್ಲಿಯೂ ಇಲ್ಲ :
ಲಸಿಕೆ ಕೊರತೆ ಹಿನ್ನೆಲೆಯಲ್ಲಿ ಅರ್ಧಕ್ಕರ್ಧ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೂಡ ಲಸಿಕೆ ಅಭಿಯಾನ ನಡೆಯುತ್ತಿಲ್ಲ. ಸರಕಾರಿ ಆರೋಗ್ಯ ಕೇಂದ್ರಗಳಿಗೆ ಪೂರೈಸಲು ಸಾಧ್ಯವಾಗದ್ದರಿಂದ ಖಾಸಗಿಯವರಿಗೆ ಪೂರೈಕೆ ಇನ್ನಷ್ಟು ತಡವಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕುಪೀಡಿತರ ಆರೈಕೆಯೂ ನಡೆಯುತ್ತಿದೆ.
ಇತರ ರಾಜ್ಯಗಳಲ್ಲಿ ಹೇಗೆ? :
ದಾಸ್ತಾನು ಕೊರತೆಯಿಂದಾಗಿ ದಿಲ್ಲಿ, ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ರಾಜ್ಯಗಳಲ್ಲಿ ಕೂಡ ಮೇ 15ರ ಬಳಿಕವೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಅಭಿಯಾನ ಆರಂಭವಾಗುವ ಸಾಧ್ಯತೆಗಳಿವೆ.
ಲಕ್ಷಣ ಇಲ್ಲದವರೂ ಆಸ್ಪತ್ರೆಗೆ :
ಸೋಂಕಿನ ಲಕ್ಷಣಗಳು ಇದ್ದು, ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಅಂಥವರನ್ನೂ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಡಾ| ಸುಧಾಕರ್ ಹೇಳಿದ್ದಾರೆ. ಅಲ್ಲಿ ಅವರಿಗೆ ಸಿಂಡ್ರೋಮಿಕ್ ಚಿಕಿತ್ಸೆ ವಿಧಾನ ಅನುಸರಿಸಲಾಗುತ್ತದೆ. ಹಲವು ಪ್ರಕರಣಗಳಲ್ಲಿ ಪರೀಕ್ಷೆ ಮಾಡಿಸಿದರೂ ನೆಗೆಟಿವ್ ವರದಿ ಬರುತ್ತಿದೆ. ವ್ಯಕ್ತಿಗೆ ರೋಗ ಲಕ್ಷಣ ಇದ್ದರೂ ವರದಿಯಲ್ಲಿ ನೆಗೆಟಿವ್ ಬರುವುದರಿಂದ, ರೋಗ ತೀವ್ರತೆ ಹೆಚ್ಚಾದಾಗ ಆಸ್ಪತ್ರೆಗೆ ದಾಖಲಿಸಲು ಸಮಸ್ಯೆಯಾಗುತ್ತದೆ. ಇದಕ್ಕಾಗಿ ಹಾಗೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಸಿಂಡ್ರೋಮಿಕ್ ವಿಧಾನ ಅನುಸರಿಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ. ಈ ವಿಧಾನದಲ್ಲಿ ಸಂಬಂಧಪಟ್ಟ ವೈದ್ಯರು ರೋಗಿಗಳ ಸ್ಥಿತಿಯನ್ನು ಪ್ರಮಾಣೀ ಕರಿಸುತ್ತಾರೆ. ಬಳಿಕ ರೋಗಿಗೆ ಪ್ರತ್ಯೇಕ ಸಂಖ್ಯೆ ನೀಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗುತ್ತದೆ.
ಒಂದು ಕೋಟಿ ಡೋಸ್ ಲಸಿಕೆಗೆ ಬೇಡಿಕೆ ಸಲ್ಲಿಸಿದ್ದೇವೆ. ಪೂರೈಕೆಯನ್ನು ಆಧರಿಸಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ದಿನಾಂಕ ತಿಳಿಸುತ್ತೇವೆ. ಆದಷ್ಟು ಶೀಘ್ರ ಲಸಿಕೆ ಹಾಕಲು ಕ್ರಮ ಕೈಗೊಳ್ಳುತ್ತೇವೆ. -ಪಿ. ರವಿಕುಮಾರ್, ಮುಖ್ಯ ಕಾರ್ಯದರ್ಶಿ