ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಜಗತ್ತಿನ ಆರೋಗ್ಯ ವಲಯ, ವೈಜ್ಞಾನಿಕ ವಲಯ ಆರ್ಥಿಕತೆ ಮತ್ತು ರಾಜಕೀಯ ವ್ಯವಸ್ಥೆಗಳು ಹಿಂದೆಂದೂ ಕಾಣದ ರೀತಿಯಲ್ಲಿ ಒಟ್ಟುಗೂಡಿ ಹೆಜ್ಜೆ ಹಾಕುವಂಥ ಸನ್ನಿವೇಶ ನಿರ್ಮಾಣವಾಗಿದೆ. ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆಯ ನಿಟ್ಟಿನಲ್ಲಿ ಬಹುತೇಕ ರಾಷ್ಟ್ರಗಳು ಈಗ ಗಮನಾರ್ಹ ಹೆಜ್ಜೆಯಿಡುತ್ತಿವೆ. ಜಾಗತಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಅನೇಕ ಲಸಿಕೆಗಳಲ್ಲಿ ಕೆಲವು ಶೇ.90, ಶೇ.95ರ ವರೆಗೆ ಪರಿಣಾಮಕಾರಿತ್ವ ತೋರುತ್ತಿರುವ ವರದಿಗಳು ಬರುತ್ತಿವೆ.
ಫೈಜರ್, ಮಾಡರ್ನಾ, ಆಕ್ಸ್ ಫರ್ಡ್ ಲಸಿಕೆಗಳು ಜಾಗತಿಕ ಆರೋಗ್ಯ ವ್ಯವಸ್ಥೆ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿವೆ.
ಇನ್ನೇನು ಕೆಲವು ತಿಂಗಳಲ್ಲೇ ಭಾರತದಲ್ಲೂ ಲಸಿಕೆಗಳು ಜನೋಪಯೋಗಕ್ಕೆ ಬರುವ ಸಾಧ್ಯತೆಗಳು ಗೋಚರಿಸುತ್ತಿವೆ. ಆದರೆ ಲಸಿಕೆ ಅಭಿವೃದ್ಧಿಯಷ್ಟೇ ಮುಖ್ಯವಾದದ್ದು, ಅವುಗಳ ಡೋಸ್‌ಗಳ ಉತ್ಪಾದನೆ, ಶೇಖರಣೆ ಮತ್ತು ಹಂಚಿಕೆ. ಈ ವಿಚಾರವಾಗಿ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್, ಭಾರತವು ಮೊದಲ ಹಂತದ ಭಾಗವಾಗಿ ದೇಶದ 25ರಿಂದ 30 ಕೋಟಿ ಜನರಿಗೆ ಲಸಿಕೆ ಒದಗಿಸುವ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
ಪ್ರತೀ ರಾಜ್ಯದಲ್ಲೂ ಲಸಿಕೆಯ ಹಂಚಿಕೆಗಾಗಿ ವಿಶೇಷ ತಂಡಗಳನ್ನು, ಶೇಖರಣಾ ಘಟಕಗಳನ್ನು ಸ್ಥಾಪಿಸಲೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಜ್ಜಾಗಿವೆ. ಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದಂಥ ಖಾಸಗಿ ಕಂಪೆನಿಗಳೂ ಬೃಹತ್ ಪ್ರಮಾಣದಲ್ಲಿ ಡೋಸ್‌ಗಳ ಉತ್ಪಾದನೆಯ ಭರವಸೆಯನ್ನೂ ನೀಡಿವೆ. ಅನ್ಯ ದೇಶಗಳ ಲಸಿಕೆಗಳ ಉತ್ಪಾದನೆಯ ಒಡಂಬಡಿಕೆಗಳ ಜತೆ ಜತೆಗೇ ಪ್ರಯೋಗ ಹಂತದಲ್ಲಿರುವ ಲಸಿಕೆಗಳ ಅಭಿವೃದ್ಧಿಗೂ ಭಾರತ ಒತ್ತು ನೀಡುತ್ತಿದೆ.
ಪರಿಣತರ ಪ್ರಕಾರ, ವ್ಯಾಕ್ಸಿನೇಷನ್ ವಿಚಾರದಲ್ಲಿ ಭಾರತ, ಚೀನದಂಥ ರಾಷ್ಟ್ರ ಗಳ ಅನುಭವ ಬಲಿಷ್ಠವಾಗಿರುವುದರಿಂದ, ಈ ವಲಯದಲ್ಲಿನ ನೆಟ್ ವರ್ಕ್ ಕೂಡ ಉತ್ತಮವಾಗಿದ. ಅನ್ಯ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಲಸಿಕಾಕರಣ ಪ್ರಕ್ರಿಯೆಯ ಬಗ್ಗೆ ಆತಂಕ ಪಡುವ ಅಗತ್ಯ ಅಷ್ಟಾಗಿ ಇಲ್ಲ. ಆದರೂ ಆರಂಭದಲ್ಲಿ ಕೆಲವು ಸಮಸ್ಯೆಗಳು ಖಂಡಿತ ಎದುರಾಗುತ್ತವೆ. ಅತೀ ಕಡಿಮೆ ಅವಧಿಯಲ್ಲೇ ದೇಶಾದ್ಯಂತ ಲಸಿಕೆ ವಿತರಿಸಬೇಕೆಂದರೆ ಲಸಿಕೆಯ ಶೇಖರಣೆ, ಸಾಗಣೆಯ ವಿಚಾರದಲ್ಲಿ ಹಲವು ವಿಘ್ನಗಳು ಎದುರಾಗಬಹುದು.
ಅಂಥ ಸಮಸ್ಯೆಗಳ ನಿವಾರಣೆಗೆ ರಾಜ್ಯ ಸರಕಾರಗಳು ಕೇಂದ್ರದ ಜತೆಗೆ ಹೆಚ್ಚು ಸಕ್ರಿಯವಾಗಿ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ. ಇನ್ನು ಕೇವಲ ಒಂದೇ ಲಸಿಕೆ ಬರುತ್ತದೆಯೇ ಅಥವಾ ಹಲವು ಕಂಪೆನಿಗಳ ಲಸಿಕೆಗಳು ಬರುತ್ತವಾ ಎನ್ನುವ ಪ್ರಶ್ನೆಯೂ ಸಾರ್ವಜನಿಕರಿಗಿದೆ. ಲಸಿಕೆಯ ಬೆಲೆಯ ವಿಚಾರದಲ್ಲೂ ಗೊಂದಲ ಉಂಟಾಗಬಹುದಾದ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ, ಉಚಿತವಾಗಿ ಅಥವಾ ಸಬ್ಸಿಡಿ ದರದಲ್ಲಿ ಲಸಿಕೆ ಸಿಗುವಂತೆ ಮಾಡಲು ಸರಕಾರಗಳು ಖಾಸಗಿ ಕಂಪೆನಿಗಳ ಜತೆಗೆ ಒಡಂಬಡಿಕೆ ಮಾಡಿಕೊಳ್ಳಬೇಕು. ಇದರಿಂದ ಸರಕಾರದ ಬೊಕ್ಕಸದ ಮೇಲೆ ಹೊರೆ ಉಂಟಾಗಬಹುದಾದರೂ, ದೇಶವಾಸಿಗಳ ಸ್ವಾಸ್ಥ್ಯ ಸುಧಾರಣೆಯು, ದೇಶದ ಆರ್ಥಿಕತೆಯ ಸ್ವಾಸ್ಥ್ಯವನ್ನೂ ಸುಧಾರಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇನ್ನು ಯಾವ ಲಸಿಕೆಯು ಐಚ್ಛಿಕ ಯಾವುದು ಅತ್ಯವಶ್ಯಕ ಎನ್ನುವ ವಿಚಾರದಲ್ಲೂ ಗೊಂದಲ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕಿದೆ.