ರಬಕವಿ-ಬನಹಟ್ಟಿ: ಶಾಲಾ ಕಾಲೇಜುಗಳಲ್ಲಿಯ 15 ರಿಂದ 18 ವರ್ಷದ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದೆ. ಈ ಕುರಿತು ವಿದ್ಯಾರ್ಥಿಗಳಲ್ಲಿ ಯಾವುದೆ ರೀತಿಯ ಹೆದರಿಕೆ ಬೇಡ, ಧೈರ್ಯದಿಂದ ಲಸಿಕೆ ಪಡೆದುಕೊಳ್ಳಿ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಅವರು ಸೋಮವಾರ ಬನಹಟ್ಟಿಯ ಸರ್ಕಾರಿ ಹೈಸ್ಕೂಲ್ನಲ್ಲಿ ಹಮ್ಮಿಕೊಳ್ಳಲಾದ ಕೋವಿಡ್ ಲಸಿಕಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್ ಲಸಿಕೆಯಿಂದ ಮಾತ್ರ ಕೋವಿಡ್ ನಿಯಂತ್ರಣ ಸಾಧ್ಯ. ಅದೇ ರೀತಿಯಾಗಿ ಪ್ರತಿಯೊಬ್ಬರು ಕೋವಿಡ್ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೋವಿಡ್ ಕುರಿತು ಯಾವುದೆ ನಿರ್ಲಕ್ಷ್ಯ ಬೇಡ. ಕೋವಿಡ್ ಲಸಿಕೆಯ ಸಂದರ್ಭದಲ್ಲಿ ಯಾವುದೆ ರಾಜಕೀಯ ಬೇಡ. ಪಕ್ಷ ಬೇಧ ಮರೆತು ಲಸಿಕಾ ಕಾರ್ಯಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು. ಪ್ರತಿಯೊಬ್ಬರು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಸಂಜಯ ಇಂಗಳೆ ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 93 ಶಿಕ್ಷಣ ಸಂಸ್ಥೆಗಳ 21, 128 ವಿದ್ಯಾರ್ಥಿಗಳಿಗೆ 106 ತಂಡಗಳ ಮೂಲಕ ಲಸಿಕೆಯನ್ನು ನೀಡಲಾಗುತ್ತಿದೆ. ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ 8060 ಜನರಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಹತ್ತು ದಿನಗಳ ಒಳಗಾಗಿ ಸಂಪೂರ್ಣ ಲಸಿಕಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಮಖಂಡಿಯ ಹಿರಿಯ ಆರೋಗ್ಯಾಧಿಕಾರಿ ಉಮೇಶ ಜೋಶಿ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯ ಮೇಲೆ ಪೌರಾಯುಕ್ತ ಸಂಜಯ ಇಂಗಳೆ, ನಗರಸಭೆಯ ಅಧ್ಯಕ್ಷ ಶ್ರೀಶೈಲ ಬೀಳಗಿ, ಧರೆಪ್ಪ ಉಳ್ಳಾಗಡ್ಡಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸಪರಪ್ಪ ಹಟ್ಟಿ, ವಿಜಯಕುಮಾರ ವಂದಾಲ, ಪ್ರಾಚಾರ್ಯ ಎಸ್.ಎಂ.ಶೇಖ, ಅಪ್ಪಾಜಿ ಹೂಗಾರ ಇದ್ದರು.
ಅಕ್ಷತಾ ಶಿರೋಳ ಪ್ರಾರ್ಥಿಸಿದರು. ಉಪ ಪ್ರಾಚಾರ್ಯ ರವಿ ಬಸಗೊಂಡನವರ ಸ್ವಾಗತಿಸಿದರು. ಶ್ರೀಶೈಲ ಬುರ್ಲಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಜಯ ತೆಗ್ಗಿ, ಶಿವನಂದ ಬುದ್ನಿ, ವಿಶ್ವನಾಥ ಸವದಿ, ಪವಿತ್ರಾ ತುಕ್ಕನವರ, ಸವಿತಾ ಹೊಸೂರ, ಚಂದ್ರಪ್ರಭಾ ಬಾಗಲಕೋಟ, ಚಿದಾನಂದ ಹೊರಟ್ಟಿ ಸೇರಿದಂತೆ ಅನೇಕರು ಇದ್ದರು.
ಸೋಮವಾರ ಬನಹಟ್ಟಿಯ ಸರ್ಕಾರಿ ಹೈಸ್ಕೂಲ್, ಎಸ್ಆರ್ಎ ಹೈಸ್ಕೂಲ್ ಹಾಗೂ ಪೂರ್ಣಪ್ರಜ್ಞೆ ಶಿಕ್ಷಣ ಸಂಸ್ಥೆಯಲ್ಲಿ ಲಸಿಕೆಯನ್ನು ನೀಡಲಾಯಿತು.