ಬಂಗಾರಪೇಟೆ: ತಾಲೂಕಿನಲ್ಲಿ 15 ರಿಂದ 18 ವಯೋಮಾನದ 10,640 ವಿದ್ಯಾರ್ಥಿಗಳು ಇದ್ದು, ಯಾವುದೇ ಭಯವಿಲ್ಲದೆ ಕೊರೊನಾ ಲಸಿಕೆ ಪಡೆಯುವಂತೆ ಶಾಸಕ ಎಸ್.ಎನ್ .ನಾರಾಯಣಸ್ವಾಮಿ ಸಲಹೆ ನೀಡಿದರು.
ಪಟ್ಟಣದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ಈ ಎರಡು ವರ್ಷದಲ್ಲಿ ಕೊರೊನಾ ಹಾವಳಿಯಿಂದ ಅನೇಕ ಸಾವು ನೋವುಗಳನ್ನ ಕಂಡಿದ್ದೇವೆ. ಆ ಸಂದರ್ಭದಲ್ಲಿ ಎಲ್ಲರೂ ಒಗ್ಗಟಾಗಿ ಬಹಳಷ್ಟು ಶ್ರಮಪಟ್ಟಿದ್ದೇವೆ. 3ನೇ ಅಲೆ ಹತೋಟಿಗೆ ತರಲು ನಮ್ಮ ವೈದ್ಯಕೀಯ ಸಿಬ್ಬಂದಿಯ ಎಲ್ಲರ ಮುತುವರ್ಜಿಯಿಂದ ತಾಲೂಕಿನಲ್ಲಿ ಶೇ.99 ವ್ಯಾಕ್ಸಿನ್ ಪೂರ್ಣಗೊಳಿಸಿದ್ದೇವೆ ಎಂದು ಶ್ಲಾಘಿಸಿದರು.
ಸೋಂಕು ನಿಯಂತ್ರಿಸಲು ಸಜ್ಜಾಗಿ: ಕೊರೊನಾ ತಡೆಗಟ್ಟುವ ಸಲುವಾಗಿ ವಿವಿಧ ಹಂತಗಳಲ್ಲಿ ಸರ್ಕಾರ ಜನರಿಗೆ ವ್ಯಾಕ್ಸಿನ್ ನೀಡುತ್ತಾ ಬಂದಿದೆ. ಆದರೆ,ಮಕ್ಕಳಿಗೆ ನೀಡಲು ಕೊರತೆ ಇತ್ತು. ಮುಂದಿನಹಂತವಾಗಿ ಕೇಂದ್ರ ಸರ್ಕಾರ 15 ರಿಂದ 18ವರ್ಷದವರಿಗೆ ಲಸಿಕೆ ನೀಡಲು ಮುಂದಾಗಿದೆ. ಕಳೆದಒಂದು ವಾರದಿಂದ 3ನೇ ಅಲೆ ಮುನ್ಸೂಚನೆಯಂತೆ ಪ್ರತಿ ದಿನ ಕೋವಿಡ್ ಸೋಂಕಿತರ ಸಂಖ್ಯೆಹೆಚ್ಚಾಗುತ್ತಿದೆ. ಇದು ಸಾಲದೆಂಬಂತೆ ಒಮಿಕ್ರಾನ್ ಭೀತಿ ಶುರುವಾಗಿದೆ. ಹೀಗಾಗಿ, ತಾಲೂಕು ಆಡಳಿತ ಹಾಗೂ ವೈದ್ಯಾಧಿಕಾರಿಗಳ ತಂಡ ಸಜ್ಜಾಗಬೇಕಿದೆ ಎಂದು ವಿವರಿಸಿದರು.
ಆಕ್ಸಿಜನ್ ಬೆಡ್ ನಮ್ಮಲ್ಲೇ ಮೊದಲು: ರಾಜ್ಯದಲ್ಲೇ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ವುಳ್ಳನೂರು ಹಾಸಿಗೆ ಹೊಂದಿದ್ದು ನಮ್ಮಲ್ಲೆ ಮೊದಲು, ಅನೇಕ ದಾನಿಗಳ ಸಹಾಯದಿಂದ ನಾವು ಸ್ಥಾಪಿಸಿರುವ ಆಕ್ಸಿಜನ್ ಘಟಕ ಗಂಟೆಗೆ 650 ಲೀ. ಉತ್ಪಾದಿಸುತ್ತದೆ. 3ನೇ ಅಲೆ ಎದುರಿಸಲು ಈ ಬಾರಿ ಎಲ್ಲರೂ ಕೊರೊನಾ ನಿಯಮ ಪಾಲಿಸಬೇಕು. ಪುರಸಭಾ ವ್ಯಾಪ್ತಿಯಲ್ಲಿ ಹಾಗೂ ಗ್ರಾಮೀಣಭಾಗದಲ್ಲೂ ಸ್ವತ್ಛತೆ ಕಾಪಾಡಲು ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ. ದಯಾನಂದ್, ತಾಪಂ ಎನ್.ವೆಂಕಟೇಶಪ್ಪ, ತಾಲೂಕು ವೈದ್ಯಾಧಿಕಾರಿ ಡಾ.ಭಾರತಿ, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪುಣ್ಯಮೂರ್ತಿ, ಡಾ.ಅನಿತ, ಪಂಚಾಯತ್ ರಾಜ್ ಇಲಾಖೆಯ ಎಇಇ ಹೆಚ್.ಡಿ. ಶೇಷಾದ್ರಿ, ಎಇ ರವಿಚಂದ್ರನ್, ಕಾಲೇಜು ಪ್ರಾಂಶು ಪಾಲ ಸುಬ್ರಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಪಿ. ಕೆಂಪಯ್ಯ, ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಜಿಲ್ಲಾಧ್ಯಕ್ಷ ನಾಗಾನಂದ್ ಕೆಂಪರಾಜ್, ಹಿರಿಯಆರೋಗ್ಯ ನಿರೀಕ್ಷಕ ಆರ್.ರವಿ ಮುಂತಾದವರು ಹಾಜರಿದ್ದರು.