Advertisement

ಗ್ರಾಮೀಣ ಲಸಿಕೆಗೆ ಮಾದರಿ “ಮಸೊಲ್‌’ : ಮೊಹಾಲಿಯ ಈ ಕುಗ್ರಾಮದ ಬಹುತೇಕರಿಗೆ ಲಸಿಕೆ

03:26 AM Jun 07, 2021 | Team Udayavani |

ಮೊಹಾಲಿ: ಕೊರೊನಾ ಎರಡನೇ ಅಲೆ ಜೋರಾಗಿದ್ದರೂ ದೇಶದ ಹಲವು ಗ್ರಾಮಗಳಲ್ಲಿ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಇದಕ್ಕೆ ಲಸಿಕೆಯ ಬಗ್ಗೆ ಹಿಂದೆ ಹುಟ್ಟಿದ್ದ ಭಯ ಕಾರಣ. ಆದರೆ ಪಂಜಾಬ್‌ ಮತ್ತು ಹರಿಯಾಣದ ಎರಡು ಗ್ರಾಮಗಳಲ್ಲಿ ಈ ಭಯವನ್ನು ದೂರ ಮಾಡಿರುವ ಸ್ಥಳೀಯಾಡಳಿತಗಳು ಹೆಚ್ಚು ಜನ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುವಂತೆ ಮಾಡಿದ್ದಾರೆ.

Advertisement

ಶೇ. 100 ಮಂದಿಗೆ ಲಸಿಕೆ
ಪಂಜಾಬ್‌ನ ಮೊಹಾಲಿ ಜಿಲ್ಲೆಯ ಮಸೊಲ್‌ ಯಾವುದೇ ಮೂಲಸೌಕರ್ಯ ಇಲ್ಲದಿರುವ ಒಂದು ಕುಗ್ರಾಮ. 2 ತಿಂಗಳಿಗೆ ಹಿಂದೆ ಇಲ್ಲಿ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದರು. ಜನರಿಗಿದ್ದ ಭಯವನ್ನು ಓಡಿಸಲು ಜಿಲ್ಲಾಧಿಕಾರಿ ಗಿರೀಶ್‌ ದಯಾಳನ್‌ ನೇತೃತ್ವದಲ್ಲಿ ವಿನೂತನ ಮಾದರಿ ಅನುಸರಿಸಲಾಯಿತು. ಕಾರ್ಪೊರೇಟರ್‌ಗಳು, ಸ್ವಯಂ ಸೇವಾ ಸಂಸ್ಥೆಗಳು ಲಸಿಕೆಗಾಗಿ ಹಣ ಕೊಟ್ಟು ಖರೀದಿಸಬೇಕು ಮತ್ತು ಅವರೇ ಕನಿಷ್ಠ ಒಂದು ಹಳ್ಳಿಯನ್ನು ದತ್ತು ಪಡೆದು ಸ್ವತಃ ಮುಂದೆ ನಿಂತು ಜನರಿಗೆ ಕೊಡಿಸಬೇಕು. ಆರಂಭದಲ್ಲಿ ಜಿಲ್ಲಾಧಿಕಾರಿ ಮತ್ತವರ ಕಚೇರಿಯ ಅಧಿಕಾರಿಗಳೇ ಲಸಿಕೆ ಖರೀದಿಸಿ ಮಸೊಲ್‌ನ ಗ್ರಾಮಸ್ಥರಿಗೆ ಕೊಡಿಸಿದರು. ಇದರಿಂದ ಉಳಿದವರಿಗೂ ಉತ್ತೇಜನ ಸಿಕ್ಕಿತು. ಇದಾದ ಮೇಲೆ ಉದ್ಯಮಿಗಳು, ಸಂಘ-ಸಂಸ್ಥೆಗಳು ಮಾತ್ರವಲ್ಲ, ಕೆಲವು ಕುಟುಂಬಗಳೂ ಮುಂದೆ ಬಂದು ಕೆಲವು ಗ್ರಾಮಗಳನ್ನು ದತ್ತು ಪಡೆದು, ಲಸಿಕೆ ಹಾಕಿಸಿದವು. ಇದರಿಂದಾಗಿ ಮಸೊಲ್‌ ನಲ್ಲಿ ಶೇ. 100ರಷ್ಟು ಮಂದಿಗೆ ಲಸಿಕೆ ಹಾಕಲಾಯಿತು. ಮಸೊಲ್‌ ನಲ್ಲಿ ಆರಂಭವಾದ ಈ ಅಭಿಯಾನ ಇಡೀ ಮೊಹಾಲಿ ಜಿಲ್ಲೆಗೆ ಹಬ್ಬಿದ್ದು, ಶೇ.52ರಷ್ಟು ಮಂದಿ ಮೊದಲ ಡೋಸ್‌ ಪಡೆದಿದ್ದಾರೆ.

ಮೂಢನಂಬಿಕೆ ಓಡಿಸಿದ ನುಹ್‌
ಅತ್ತ ಹರಿಯಾಣದ ನುಹ್‌ ಎಂಬ ಪಟ್ಟಣವೂ ಲಸಿಕೆ ವಿಚಾರದಲ್ಲಿ ಮಹತ್ತರ ಕ್ರಾಂತಿ ಮಾಡಿದೆ. ಇಲ್ಲೂ ಮೂಢ ನಂಬಿಕೆಗಳಿಂದಾಗಿ ಜನ ಲಸಿಕೆ ಹಾಕಿಸಿಕೊಳ್ಳುತ್ತಿರಲಿಲ್ಲ. ಇದನ್ನು ಮನಗಂಡ ಸರಕಾರ ಮತ್ತು ಸ್ಥಳೀಯಾಡಳಿತಗಳು ಸೇರಿ ಲಸಿಕೆ ಅಭಿಯಾನ ಆರಂಭಿಸಿದವು. ಸ್ಥಳೀಯ ರಾಜಕಾರಣಿಗಳು, ಧರ್ಮಗುರುಗಳು ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಸಮುದಾಯ ರೇಡಿಯೋ ಕೇಂದ್ರಗಳಲ್ಲೂ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೀಗಾಗಿ ಜನ ಲಸಿಕೆ ಕೇಂದ್ರಗಳತ್ತ ಬರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next