ಬೀದರ: ಖಾಸಗಿ ಆಸ್ಪತ್ರೆಗಳಲ್ಲಿ ಕೊವೀಡ್ -19 ಚಿಕಿತ್ಸೆಗೆ ಕಾರ್ಯಪಡೆಯ ದರ ಪ್ರಸ್ತಾವನೆಗೆ ಅಪಸ್ವರ ನಡುವೆ ಸರ್ಕಾರ ರಾಜ್ಯದ 483 ಕ್ಲಿನಿಕ್‌ಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಲು ಉದ್ದೇಶಿಸಿದ್ದು, ಆಸ್ಪತ್ರೆಗಳ ಪಟ್ಟಿ ಸಿದ್ಧಪಡಿಸಿದೆ. ಅದರಲ್ಲಿ ಬೀದರನ 14 ಖಾಸಗಿ ಆಸ್ಪತ್ರೆಗಳು ಸೇರಿವೆ.
ಸರ್ಕಾರ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿತ ಖಾಸಗಿ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ನೀಡಲು ಅವಕಾಶ ನೀಡಿದೆ. ಈಗಾಗಲೇ ಕೋವಿಡ್-19 ಟಾಸ್ಕ್ ಫೋರ್ಸ್ ದರಪಟ್ಟಿ ಪ್ರಸ್ತಾವವನ್ನು ಸಲ್ಲಿಸಿದ್ದು, ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆ ಸಿಗಬೇಕಿದೆ. ಇನ್ನೊಂದೆಡೆ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಚಿಕಿತ್ಸೆ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ.
ಇನ್ನು ಆಸ್ಪತ್ರೆಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ಕಾಲಕಾಲಕ್ಕೆ ಚಿಕಿತ್ಸೆ ಕುರಿತು ಅಗತ್ಯ ಸೂಚನೆಗಳನ್ನು ನೀಡಲಿದೆ. ಬೀದರನಲ್ಲಿ ಕೋವಿಡ್ ಸಾವಿನ ರಣಕೇಕೆ ಹಾಕುತ್ತಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 500ರ ಗಡಿ ದಾಟಿದ್ದರೆ, ಮೃತರ ಸಂಖ್ಯೆ 15ಕ್ಕೆ ತಲುಪಿದೆ. 300 ಹಾಸಿಗೆಯ ಹಳೆ ಬ್ರಿಮ್ಸ್ ಕಟ್ಟಡವನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಜಿಲ್ಲೆಯಲ್ಲಿ ಹತ್ತಾರು ದೊಡ್ಡ ಮಟ್ಟದ ಕ್ಲಿನಿಕ್‌ಗಳಿದ್ದರೂ ಸಹ ಬೀದರ ನಗರದ 13 ಮತ್ತು ಬಸವಕಲ್ಯಾಣದ 1 ಕ್ಲಿನಿಕ್ ಸೇರಿ ಕೇವಲ 14 ಆಸ್ಪತ್ರೆಗಳು ಮಾತ್ರ ಕೋವಿಡ್ ಚಿಕಿತ್ಸೆ ನೀಡಲು ಮುಂದೆ ಬಂದಿದ್ದು, ಅದರಲ್ಲಿ ಮೂರು ಕಣ್ಣಿನ ಆಸ್ಪತ್ರೆಗಳು ಸಹ ಸೇರಿವೆ.
ಖಾಸಗಿ ಆಸ್ಪತ್ರೆಗಳು ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯ ನಿರ್ವಹಿಸಬೇಕಿದೆ. ಮುಖ್ಯವಾಗಿ ಸಾನಿಟೈಸರ್ ಬಳಸಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವುದು, ಸೋಂಕಿತರಿಗೆ ಪ್ರತ್ಯೇಕ ವಾರ್ಡ್ ಸ್ಥಾಪನೆ, ಪ್ರತ್ಯೇಕ ವೆಂಟಿಲೇಟರ್ ವ್ಯವಸ್ಥೆ ಮಾಡಬೇಕು, ಸೋಂಕಿತರಿಗಾಗಿ ಹಾಸಿಗೆಗಳನ್ನು ಮೀಸಲಿಡಬೇಕು ಹಾಗೂ ವೈದ್ಯರು, ಸಿಬ್ಬಂದಿಗಳು ಕಡ್ಡಾಯವಾಗಿ ಪಿಪಿಇ ಕಿಟ್‌ಗಳನ್ನು ಧರಿಸಿ ತಪಾಸಣೆ, ಚಿಕಿತ್ಸೆ ನೀಡಬೇಕೆಂದು ಷರತ್ತುಗಳನ್ನು ಹಾಕಲಾಗಿದೆ. ಕೆಪಿಎಂ ಕಾಯ್ದೆ ಪ್ರಕಾರ ಆರೋಗ್ಯ ಇಲಾಖೆ ಈ ಕ್ಲಿನಿಕ್‌ಗಳ ಮೇಲೆ ನಿಗಾ ವಹಿಸಲಿದೆ. ಇನ್ನೆರಡು ದಿನಗಳಲ್ಲಿ ಆಸ್ಪತ್ರೆಗಳಿಗೆ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಡಿಎಚ್‌ಒ ಡಾ| ವಿ.ಜಿ. ರೆಡ್ಡಿ ತಿಳಿಸಿದ್ದಾರೆ.
ಯಾವ್ಯಾವ ಆಸ್ಪತ್ರೆ: ಬೀದರನ ಸಾಯಿ ಪ್ರೀತ್ ಭಾಲ್ಕೇ ವೈದೇಹಿ ಆಸ್ಪತ್ರೆ, ಮೇಗೂರ್ ಐ ಕೇರ್ ಸೆಂಟರ್, ಜಿಎನ್ ಎಂಎಸ್ ಸಹಕಾರ ಆಸ್ಪತ್ರೆ, ದೇಶಪಾಂಡೆ ನೇತ್ರಾಲಯ, ಶ್ರೀ ಆಸ್ಪತ್ರೆ, ಗುದಗೆ ಆಸ್ಪತ್ರೆ, ಆರೋಗ್ಯ ಆಸ್ಪತ್ರೆ, ಪ್ರಯಾವಿ ಆಸ್ಪತ್ರೆ, ವಿವೇಕ್ ಸರ್ಜಿಕಲ್, ಮೆಟರ್ನಿಟಿ ನರ್ಸಿಂಗ್ ಹೋಂ, ಗುರುನಾನಕ್ ಆಸ್ಪತ್ರೆ, ವಾಸು ಆಸ್ಪತ್ರೆ, ಶ್ರೀ ಗಜಾನನ ಆಸ್ಪತ್ರೆ, ವೆಲ್‌ಮೆಗ್ನಾ ಕಣ್ಣಿನ ಆಸ್ಪತ್ರೆ ಮತ್ತು ಬಸವಕಲ್ಯಾಣದ ನ್ಯೂ ರಿಫಾ ಆಸ್ಪತ್ರೆಗಳು ಕೋವಿಡ್-19 ಚಿಕಿತ್ಸೆ ನೀಡಲಿವೆ.
-ಶಶಿಕಾಂತ ಬೆಂಬುಳಗೆ