ಮಹಾನಗರ: ಮುಂಚೂ ಣಿಯ ಕಾರ್ಯಕರ್ತರಾಗಿ (ಫ್ರಂಟ್‌ಲೆçನ್ ವರ್ಕರ್ಸ್) ಸೇವೆ ಸಲ್ಲಿಸುತ್ತಿರುವ ಪೊಲೀಸರು ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದು, ಇದು ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ 26 ಮಂದಿ ಪೊಲೀಸರಿಗೆ ಈ ವರ್ಷ ಕೊರೊನಾ ಪಾಸಿಟಿವ್ ಬಂದಿದ್ದು, ಅವರ ಪೈಕಿ 8 ಮಂದಿ ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖ ಹೊಂದಿದ್ದಾರೆ. ಇದೀಗ ಉಳಿದ 18 ಮಂದಿ ಪೊಲೀಸರು ಚಿಕಿತ್ಸೆಯ ಹಂತದಲ್ಲಿದ್ದಾರೆ. ಈ 18 ಮಂದಿಯಲ್ಲಿ ಪ್ರಸ್ತುತ 3 ಮಂದಿ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದ 15 ಮಂದಿ ಹೋಂ ಐಸೊಲೇಶನ್‌ನಲ್ಲಿದ್ದಾರೆ.
ಕೋವಿಡ್ ಸೋಂಕು ತಗುಲಿದವರಲ್ಲಿ ಇಬ್ಬರು ಇನ್‌ಸ್ಪೆಕ್ಟರ್‌ಗಳು, ಓರ್ವ ಪಿಎಸ್‌ಐ ಸೇರಿದ್ದು, ಉಳಿದವರು ಹೆಡ್‌ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್‌ಗಳಾಗಿರುತ್ತಾರೆ. ಕಳೆದ ವರ್ಷ (2020) 314 ಮಂದಿ ಪೊಲೀಸರು ಕೋವಿಡ್ ಸೋಂಕಿಗೆ ಒಳಗಾಗಿದ್ದು, ಓರ್ವರ ಸಾವನ್ನಪ್ಪಿದ್ದರು. ಈ ವರ್ಷ ಎಪ್ರಿಲ್ 14ರಂದು ಓರ್ವರ ಪೊಲೀಸರಿಗೆ ಸೊಂಕು ತಗುಲಿರುವುದು ವರದಿಯಾಗಿತ್ತು. ಅಂದಿನಿಂದ ಇದುವರೆಗೆ ವಿವಿಧ ದಿನಗಳಲ್ಲಿ ಒಟ್ಟು 26 ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ.
ಪೊಲೀಸರಿಗೆ ಕರ್ತವ್ಯ ನಿರ್ವಹಿಸುವ ಸಂದರ್ಭ ಅನೇಕ ಮಂದಿ ಸಾರ್ವಜನಿಕರ ಸಂಪರ್ಕ ಆಗುತ್ತದೆ. ಜನರಿಂದ ದೂರವಾಗಿ ಐಸೊಲೇಶನ್ ಆಗಿ ಕರ್ತವ್ಯ ನಿರ್ವಹಿಸುವಂತಿಲ್ಲ. ಜನರೊಂದಿಗೆ ಬೆರೆಯುವುದು ಅನಿವಾರ್ಯವಾಗಿದೆ. ಠಾಣೆಗೆ ಬರುವ ಜನರಿಗೆ ಸೇವೆಯನ್ನು ನಿರಾಕರಿಸುವಂತಿಲ್ಲ. ಹಾಗಿರುವಾಗ ಕರ್ತವ್ಯದ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಬರುವ ಸೋಂಕಿತ ವ್ಯಕ್ತಿಗಳಿಂದ ಅಥವಾ ಸಂಚಾರ ನಿರ್ವಹಣೆಯ ಸಂದರ್ಭಗಳಲ್ಲಿ ಸೋಂಕು ತಗಲುವ ಸಾಧ್ಯತೆ ಹೆಚ್ಚು ಎಂದು ಪೊಲೀಸ್ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದರು.
ಪೊಲೀಸರಿಗೆ ಕೋವಿಡ್ ಸೋಂಕು ತಟ್ಟದಿರಲಿ ಎಂದು ಆಯುಕ್ತರು ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಫೇಸ್ ಶೀಲ್ಡ್, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾತ್ರವಲ್ಲದೆ ಪೊಲೀಸ್ ಠಾಣೆಗಳಲ್ಲಿ ಜನರು ನೇರವಾಗಿ ಠಾಣೆಯ ಒಳಗೆ ಪ್ರವೇಶಿಸದಂತೆ ಹೊರ ಭಾಗದಲ್ಲಿಯೇ ದೂರು ದುಮ್ಮಾನಗಳನ್ನು ಸಲ್ಲಿಸಿ ಹೋಗಲು ವ್ಯವಸ್ಥೆ ಮಾಡಲಾಗಿದೆ. ಲಾಕ್‌ಡೌನ್ ಮಾದರಿಯ ಕರ್ಫ್ಯೂ ಜಾರಿಯಿಂದಾಗಿ ಹೊಟೇಲ್‌ಗಳು ಬಂದ್ ಇರುವ ಕಾರಣ ಮಧ್ಯಾಹ್ನದ ಊಟಕ್ಕಾಗಿ ಎಲ್ಲೆಲ್ಲಿಗೋ ಹೋಗುವುದನ್ನು ತಪ್ಪಿಸಲು ಅಥವಾ ಪಾರ್ಸೆಲ್ ತರಿಸುವುದರಿಂದಲೂ ದೂರ ಉಳಿಯುವ ಉದ್ದೇಶದಿಂದ ಪೊಲೀಸ್ ಕಮಿಷನರೆಟ್ ಕಚೇರಿ ಮತ್ತು ಸುತ್ತ ಮುತ್ತಲ ಠಾಣೆಗಳ ಪೊಲೀಸರ ಅನುಕೂಲಕ್ಕಾಗಿ ಕಮಿಷನರೆಟ್ ಕಚೇರಿ ಆವರಣದಲ್ಲಿಯೇ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಆಯುಕ್ತರು ಮಾಡಿದ್ದಾರೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಕೋವಿಡ್ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಸಿಬಂದಿಗೆ ಹಬೆ ತೆಗೆದುಕೊಳ್ಳಲು ಅನುಕೂಲವಾಗುವಂತೆ ಸ್ಟೀಮ್ ಮೆಶಿನ್‌ಗಳನ್ನು ಅಳವಡಿಸಿ ಮಾದರಿ ವ್ಯವಸ್ಥೆಯನ್ನು ಠಾಣೆಯ ಅಧಿಕಾರಿಗಳು ಸ್ವಯಂ ಆಗಿ ಮಾಡಿಕೊಂಡಿದ್ದಾರೆ.
ಕರ್ತವ್ಯ ನಿರ್ವಹಿಸುವ ಸಂದರ್ಭ ಅಗತ್ಯ ಮುಂಜಾಗ್ರತೆ ವಹಿಸಲು ಎಲ್ಲ ಪೊಲೀಸ್ ಸಿಬಂದಿಗೆ ಸೂಚಿಸಲಾಗಿದೆ. ಇದಕ್ಕೆ ಪೂರಕವಾಗಿ ಫೇಸ್ ಶೀಲ್ಡ್, ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿಗಳನ್ನು ಒದಗಿಸಲಾಗಿದೆ. ಈಗಾಗಲೇ ಎಲ್ಲ ಪೊಲೀಸರು ಮೊದಲ ಹಂತದ ಕೋವಿಡ್ ನಿರೋಧಕ ಲಸಿಕೆಯನ್ನು ಹಾಕಿಸಿಕೊಂಡಿದ್ದು, ಬಹಳಷ್ಟು ಮಂದಿಗೆ 2ನೇ ಹಂತದ ಲಸಿಕೆಯೂ ತಗೊಂಡಾಗಿದೆ.
–ವಿನಯ್ ಎ. ಗಾಂವ್ಕರ್, ಡಿಸಿಪಿ